ಕೆಲಸ ಕಳೆದುಕೊಂಡ ಸಂತ್ರಸ್ತರಿಗೆ ಪರಿಹಾರಕ್ಕೆ ಸಿಐಟಿಯು ಆಗ್ರಹ

ದಾವಣಗೆರೆ, ಸೆ.25- ಕೊರೊನಾ ಸೋಂಕು ನಿಯಂತ್ರಣ ಕ್ರಮವಾಗಿ ಸರ್ಕಾರ  ವಿಧಿಸಿದ್ದ ಲಾಕ್‍ಡೌನ್ ಅವಧಿಯಲ್ಲಿ ಕೆಲಸ ಕಳೆದುಕೊಂಡಿರುವ ಸಂತ್ರಸ್ತರಿಗೆ ಪರಿಹಾರ ವಿತರಿಸಬೇಕು ಹಾಗೂ ಆರ್ಥಿಕ ಪುನಶ್ಚೇತನಕ್ಕೆ ಪರ್ಯಾಯ ನೀತಿಗಳನ್ನು ಜಾರಿಗೆ ತರಬೇಕೆಂದು ಒತ್ತಾಯಿಸಿ ಸಿಐಟಿಯು ಕಾರ್ಯಕರ್ತರು ನಗರದಲ್ಲಿ ಇಂದು ಪ್ರತಿಭಟನೆ ನಡೆಸಿದರು.

ಜಿಲ್ಲಾಡಳಿತ ಭವನದ ಎದುರು ಜಮಾಯಿಸಿದ ಸಿಐಟಿಯು ಕಾರ್ಯಕರ್ತರು, ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ ಜಿಲ್ಲಾಧಿಕಾರಿಗಳ ಮುಖಾಂತರ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಮಾರ್ಚ್ 23 ರಿಂದ ಆರಂಭವಾದ ಕೋವಿಡ್-19 ಲಾಕ್ ಡೌನ್ ಹಿನ್ನೆಲೆಯಲ್ಲಿ ರಾಜ್ಯದ ಆರ್ಥಿಕತೆಯು ತೀವ್ರ ರೀತಿಯ ಸಂಕಷ್ಟಕ್ಕೆ ಸಿಲುಕಿದೆ. ರಾಜ್ಯದ ಸಂಘಟಿತ ವಲಯದ ಕೈಗಾರಿಕಾ ಕಾರ್ಮಿಕರು, ಅಸಂಘಟಿತ ಕಾರ್ಮಿಕರು, ರೈತಾಪಿ ಜನತೆ ಹಾಗೂ ಇತರೆ ಎಲ್ಲಾ ವಿಭಾಗಗಳ ಜನತೆಯು ಇದರಿಂದಾಗಿ ತೀವ್ರ ಸಂಕಷ್ಟವನ್ನು ಎದುರಿಸುತ್ತಿದ್ದಾರೆ. ದೇಶದಲ್ಲಿ ಕೋವಿಡ್-19 ಸೋಂಕು ಹೆಚ್ಚುತ್ತಿದೆ. ಸಕ್ರಿಯ ಪ್ರಕರಣಗಳು ಹೆಚ್ಚಿವೆ. ಪರಿಣಾಮವಾಗಿ ಜನತೆ ಆತಂಕದಿಂದಲೇ ಆರ್ಥಿಕ ಚಟುವಟಿಕೆಗಳಲ್ಲಿ ಮತ್ತು ತಮ್ಮ ದೈನಂದಿನ ಕೆಲಸಗಳಲ್ಲಿ ತೊಡಗಿಕೊಳ್ಳುವಂತಾಗಿದೆ. ಲಾಕ್‍ಡೌನ್ ಕಾಲಾವಧಿಯ ಪೂರ್ಣ ವೇತನ ಸಿಗದ ಕಾರಣ ಸಂಘಟಿತ ಕಾರ್ಮಿಕರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಪ್ರತಿಭಟನಾಕಾರರು ಆತಂಕ ವ್ಯಕ್ತಪಡಿಸಿದರು.

ಪ್ರತಿಭಟನೆಯಲ್ಲಿ ಸಿಐಟಿಯು ಮುಖಂಡ ರುಗಳಾದ ಹೊನ್ನೂರು ತಿಮ್ಮಣ್ಣ, ಎ.ಗುಡ್ಡಪ್ಪ, ಹಾಸ್ಟೆಲ್ ಹೊರಗುತ್ತಿಗೆ ನೌಕರ ಸಂಘದ ಮುಖಂಡರಾದ ಹಾಲೇಶ ನಾಯ್ಕ, ಸದಾಶಿವ ನಾಯ್ಕ, ಏಕಾಂತಪ್ಪ, ಗ್ರಾಮ ಪಂಚಾಯತಿ ನೌಕರರ ಸಂಘದ ಮುಖಂಡರಾದ ಶ್ರೀನಿವಾಸಚಾರ್, ಗುಡಾಳ್ ತಿಪ್ಪೇಸ್ವಾಮಿ, ಹಮಾಲಿ ಕಾರ್ಮಿಕ ಸಂಘಟನೆಯ ವೆಂಕಟೇಶ್, ಹನುಮಂತನಾಯ್ಕ, ಜಿಕ್ರಿಯಾ  ಹೇಬ್, ಶ್ರೀನಿವಾಸ್, ಬೀದಿಬದಿ ವ್ಯಾಪಾರಿ ಸಂಘಟನೆಯ ಮಲ್ಲೇಶ್, ಕಲ್ಲೇಶ್, ಆಟೋ ಚಾಲಕರ ಸಂಘದ ಮುಖಂಡರಾದ ಅಣ್ಣಪ್ಪ, ಕರಿಬಸಪ್ಪ, ಮುದಿಮಲ್ಲನಗೌಡ, ಫಕೀರಪ್ಪ ಮತ್ತಿತರರು ಭಾಗವಹಿಸಿದ್ದರು.

error: Content is protected !!