ತುಂಗಭದ್ರಾ ನದಿಗೆ ಹೆಚ್ಚುವರಿ ಲಕ್ಷ ಕ್ಯೂಸೆಕ್ಸ್ ನೀರು
ಹರಿಹರ, ಸೆ.21- ತುಂಗಾ ಮತ್ತು ಭದ್ರಾ ಜಲಾಶಯಗಳಿಂದ ಹೆಚ್ಚುವರಿ ಯಾಗಿರುವ 1 ಲಕ್ಷ ಕ್ಯೂಸೆಕ್ಸ್ ನೀರನ್ನು ನದಿಗೆ ಹರಿ ಬಿಟ್ಟಿರುವುದರಿಂದ ಹರಿಹರದ ತುಂಗಭದ್ರಾ ನದಿಗೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದು ಬಂದು ನದಿಯು ಮೈದುಂಬಿಕೊಂಡು ಹರಿಯುತ್ತಿದೆ.
ಕಳೆದ ಹಲವಾರು ದಿನಗಳಿಂದ ಉಡುಪಿ, ಚಿಕ್ಕಮಗಳೂರು, ತೀರ್ಥಹಳ್ಳಿ, ಶೃಂಗೇರಿ, ಶಿವಮೊಗ್ಗ ಸೇರಿದಂತೆ ಹಲವಾರು ಕಡೆ ಭಾರೀ ಪ್ರಮಾಣದಲ್ಲಿ ಮಳೆ ಬೀಳುತ್ತಿರುವುದರಿಂದ ಜಲಾಶಯಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನೀರು ಶೇಖರಣೆ ಗೊಂಡಿದೆ. ಈಗಾಗಲೇ ಡ್ಯಾಮ್‌ನಲ್ಲಿ ನಿಗದಿತ ಪ್ರಮಾಣಕ್ಕಿಂತ ಹೆಚ್ಚು ನೀರು ಸಂಗ್ರಹವಾಗಿದ್ದು, ನದಿಗೆ ದೊಡ್ಡ ಪ್ರಮಾಣದಲ್ಲಿ ನೀರು ಹರಿದುಬಂದಿದೆ.
ಗಂಗಾ ನಗರ, ಕೈಲಾಸ ನಗರ, ತೆಗ್ಗಿನಕೇರಿ ಹಳೆಭರಂಪುರ, ಮೆಟ್ಟಿಲು ಹೊಳೆ ರಸ್ತೆ, ಕೋಟೆ ಬಡಾವಣೆಯಲ್ಲಿ ವಾಸಿಸುವ ಜನರನ್ನು ಸುರಕ್ಷಿತ ಸ್ಥಳಕ್ಕೆ ಸಾಗಿಸುವ ವ್ಯವಸ್ಥೆಯನ್ನು ತಾಲ್ಲೂಕು ಆಡಳಿತದಿಂದ ಮಾಡಲಾಗಿದೆ. ತಾಲ್ಲೂಕಿನ ಹಲವು ಗ್ರಾಮಗಳ ಜಮೀನಿಗೆ ನೀರು ನುಗ್ಗಿರುವುದರಿಂದ ಬೆಳೆಗಳಿಗೂ ಸಹ ದೊಡ್ಡ ಪ್ರಮಾಣದಲ್ಲಿ ಹಾನಿಯಾಗಿದ್ದು, ರೈತರ ಬದುಕು ದುಸ್ತರವಾಗಿದೆ.
ತಹಶೀಲ್ದಾರ್ ಕೆ.ಬಿ. ರಾಮಚಂದ್ರಪ್ಪ ಮಾತನಾಡಿ, ತುಂಗಭದ್ರಾ ನದಿಗೆ ಜಲಾಶಯಗಳಿಂದ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದು ಬರುತ್ತಿರುವುದರಿಂದ ಗಂಗಾನಗರದ ಸುಮಾರು 18 ಕುಟುಂಬದ 60 ಜನರಿಗೆ ಎಪಿಎಂಸಿ ಗೋಡೌನ್ ನಲ್ಲಿ ತಂಗುವುದಕ್ಕೆ ಗಂಜಿ ಕೇಂದ್ರವನ್ನು ತೆರೆಯಲಾಗಿದೆ. ಆದರೆ ಇದುವರೆಗೂ ಅವರನ್ನು ಸ್ಥಳಾಂತರ ಮಾಡಿಲ್ಲ. ಒಂದು ವೇಳೆ ಇದೇ ಪ್ರಮಾಣದಲ್ಲಿ ನೀರು ಹರಿದು ಬಂದರೆ, ಸ್ಥಳೀಯ ಜನರಿಗೆ ತೊಂದರೆ ಆದರೆ ಮಾತ್ರವೇ ಅವರನ್ನು ಬೇರೆಡೆಗೆ ಸ್ಥಳಾಂತರಿಸಲಾಗುತ್ತದೆ ಎಂದು ಹೇಳಿದರು.
ಪೌರಾಯುಕ್ತರಾದ ಎಸ್. ಲಕ್ಷ್ಮಿ ಮಾತನಾಡಿ, ನಗರಸಭೆ ಸಿಬ್ಬಂದಿ ವರ್ಗದವರು ಗಂಗಾನಗರದ ನಿವಾಸಿಗಳು ಉಳಿದುಕೊಳ್ಳುವ ಎಪಿಎಂಸಿ ಆವರಣದ ಗೋಡೌನ್ ಸ್ವಚ್ಛತೆ ಮಾಡಲಾಗಿದೆ. ಅವಶ್ಯಕತೆಗೆ ಅನು ಗುಣವಾಗಿ ಬೇಕಾದ ಸೌಲಭ್ಯಗಳನ್ನು ಒದಗಿಸುವುದಕ್ಕೆ ನಗರಸಭೆ ಸಿದ್ಧತೆ ಮಾಡಿಕೊಳ್ಳುತ್ತಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ನಗರಸಭೆ ಎಇಇ ಬಿರಾದಾರ, ಆರ್.ಓ. ಮಂಜುನಾಥ್, ವಸಂತ್, ಕೋಡಿ ಭೀಮರಾಯ್, ಆರ್.ಐ. ಆನಂದ್, ವಿ.ಎ. ದೇವರಾಜ್ ಇನ್ನಿತರರಿದ್ದರು.
ಉಕ್ಕಡಗಾತ್ರಿ- ಫತ್ಯಾಪುರ ರಸ್ತೆ ಬಂದ್ : ಗದ್ದೆಗಳು ಜಲಾವೃತ
ಮಲೇಬೆನ್ನೂರು ಸೆ.21- ಭದ್ರಾ ಮತ್ತು ತುಂಗಾ ಜಲಾಶಯಗಳಿಂದ ಭಾರೀ ಪ್ರಮಾಣದಲ್ಲಿ ನೀರನ್ನು ನದಿಗೆ ಬಿಟ್ಟಿರುವುದರಿಂದ ತುಂಗಭದ್ರಾ ನದಿ ಅಪಾಯ ಮಟ್ಟ ತಲುಪುತ್ತಿದೆ. ನದಿಯ ಹಿನ್ನೀರಿನಲ್ಲಿ ಉಕ್ಕಡಗಾತ್ರಿಯಲ್ಲಿ ಸುಮಾರು 40 ಎಕರೆ, ಎಳೆಹೊಳೆಯಲ್ಲಿ 20 ಎಕರೆ, ನಂದಿಗುಡಿಯಲ್ಲಿ 50 ಎಕರೆ ಮತ್ತು ವಾಸನದಲ್ಲಿ 40 ಎಕರೆ ಭತ್ತದ ಗದ್ದೆ ಮುಳುಗಡೆ ಆಗಿರುತ್ತದೆ. ಜನ, ಜಾನುವಾರುಗಳಿಗೆ ಯಾವುದೇ ತೊಂದರೆ ಆಗಿರುವುದಿಲ್ಲ ಎಂದು ಉಪ ತಹಸೀಲ್ದಾರ್ ರವಿ ಮಾಹಿತಿ ನೀಡಿದ್ದಾರೆ. ನದಿ ಪಾತ್ರದ ಜನರು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ರವಿ ಮನವಿ ಮಾಡಿದ್ದಾರೆ. ನಿನ್ನೆ ರಾತ್ರೋರಾತ್ರಿ ನೀರಿನ ಮಟ್ಟ ಬಹಳ ಹೆಚ್ಚಾಗಿ ಉಕ್ಕಡಗಾತ್ರಿಯಲ್ಲಿ ಅಜ್ಜಯ್ಯನ ದೇವಾಲಯದ ಜವಳದ ರೂಂಗೆ ಮತ್ತು ಹಣ್ಣು – ಕಾಯಿ ಅಂಗಡಿಗಳಿಗೆ ನೀರು ನುಗ್ಗಿದೆ.