ದಾವಣಗೆರೆ, ಸೆ. 18 – ನಗರದಲ್ಲಿ 50 ಸಾರಿಗೆ ವಾಹನಗಳು ಸಂಚರಿಸುತ್ತಿದ್ದು, ಇವುಗಳ ಸಂಖ್ಯೆ ಹೆಚ್ಚಿಸಲು ಹಾಗೂ ಸುತ್ತಲಿನ ಹಳ್ಳಿಗಳಿಗೂ ಬಸ್‌ಗಳನ್ನು ಓಡಿಸಲು ಕ್ರಮ ತೆಗೆದುಕೊಳ್ಳಲಾಗುವುದು ಎಂದು ರಸ್ತೆ ಸಾರಿಗೆ ನಿಗಮದ ಅಧ್ಯಕ್ಷರೂ ಆಗಿರುವ ಶಾಸಕ ಎಂ. ಚಂದ್ರಪ್ಪ ತಿಳಿಸಿದ್ದಾರೆ.
ಇಂದಿಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಅವರು, ಜನರಿಗೆ ಅನುಕೂಲ ಮಾಡಿಕೊಡುವ ದೃಷ್ಟಿಯಿಂದ ನಷ್ಟವಾದರೂ ಬಸ್‌ಗಳನ್ನು ಓಡಿಸಲಾಗುತ್ತಿದೆ. ಅದೇ ರೀತಿ, ನಗರದ ಸುತ್ತಲಿನ ಗ್ರಾಮಸ್ಥರಿಗೆ ನೆರವಾಗಲು ಸಿಟಿ ಬಸ್‌ಗಳನ್ನು ಓಡಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.
ರೈತರು ಹಾಲು – ತರಕಾರಿ ಇತ್ಯಾದಿಗಳನ್ನು ನಗರಕ್ಕೆ ತಲುಪಿಸಲು ಅನುಕೂಲವಾಗುವ ರೀತಿಯಲ್ಲಿ ಬಸ್‌ಗಳನ್ನು ಓಡಿಸುವಂತೆ ತಿಳಿಸಲಾಗಿದೆ ಎಂದು ಚಂದ್ರಪ್ಪ ಹೇಳಿದರು.
ಸ್ಮಾರ್ಟ್ ನಿಲ್ದಾಣ : ಆಧುನಿಕ ಮಾದರಿ ಬಸ್ ನಿಲ್ದಾಣವನ್ನು ನಗರದಲ್ಲಿ ನಿರ್ಮಿಸುವ ಯೋಜನೆ ಬರುವ ನವೆಂಬರ್‌ನಿಂದ ಆರಂಭವಾಗಲಿದೆ. ಸ್ಮಾರ್ಟ್ ಸಿಟಿ ಯೋಜನೆಯಡಿ ಸುಮಾರು 100 ಕೋಟಿ ರೂ. ವೆಚ್ಚದಲ್ಲಿ ನಿಲ್ದಾಣ ನಿರ್ಮಾಣವಾಗಲಿದೆ ಎಂದರು.
ಬೇತೂರು ರಸ್ತೆಯಲ್ಲಿನ ಸಂಸ್ಥೆಯ ನಿವೇಶನದಲ್ಲಿ ಸ್ಮಾರ್ಟ್ ಸಿಟಿ ಯೋಜನೆಯಡಿ 10 ಕೋಟಿ ರೂ. ವೆಚ್ಚದಲ್ಲಿ ಬಸ್ ನಿಲ್ದಾಣ ನಿರ್ಮಿಸುವ ಪ್ರಸ್ತಾವನೆ ಇದೆ ಎಂದ ಅವರು, ದಾವಣಗೆರೆ ವಿಭಾಗೀಯ ಕಾರ್ಯಾಗಾರದಲ್ಲಿ ಎರಡನೇ ಸಾರಿಗೆ ಘಟಕ ನಿರ್ಮಾಣ ಪ್ರಗತಿಯಲ್ಲಿದೆ ಎಂದರು.
ಚನ್ನಗಿರಿಯಲ್ಲಿ ಬಸ್ ಘಟಕ ನಿರ್ಮಾಣಕ್ಕೆ ಈಗಾಗಲೇ ನಿವೇಶನ ಮಂಜೂರಾಗಿದೆ. ಎಸ್.ಡಿ.ಪಿ. ಯೋಜನೆಯಡಿ 8 ಕೋಟಿ ರೂ. ಮೊತ್ತದಲ್ಲಿ ಘಟಕ ನಿರ್ಮಾಣಕ್ಕೆ ಟೆಂಡರ್ ಕಾರ್ಯ ಪ್ರಗತಿಯಲ್ಲಿದೆ ಎಂದು ಚಂದ್ರಪ್ಪ ಹೇಳಿದ್ದಾರೆ.
ಸಚಿವರ ಪಟ್ಟಿಯಲ್ಲಿ ನನ್ನ ಹೆಸರಿಲ್ಲ : ಚಂದ್ರಪ್ಪ
ದಾವಣಗೆರೆ, ಸೆ. 18 – ಸಂಪುಟ ವಿಸ್ತರಣೆ ಸಂದರ್ಭದಲ್ಲಿ ಸೇರ್ಪಡೆಯಾಗಬಹುದಾದ ಶಾಸಕರ ಪಟ್ಟಿಯಲ್ಲಿ ತಮ್ಮ ಹೆಸರಿಲ್ಲ. ಆದರೆ, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರ ಮನಸ್ಸಿನಲ್ಲಿ ತಮ್ಮ ಹೆಸರಿದೆ ಎಂದು ಶಾಸಕ ಹಾಗೂ ಸಾರಿಗೆ ನಿಗಮದ ಅಧ್ಯಕ್ಷ ಎಂ. ಚಂದ್ರಪ್ಪ ಹೇಳಿದ್ದಾರೆ.
ಇಂದಿಲ್ಲಿ ತಮ್ಮನ್ನು ಭೇಟಿ ಮಾಡಿದ ಪತ್ರಕರ್ತರೊಂದಿಗೆ ಮಾತನಾಡುತ್ತಿದ್ದ ಅವರು, ಯಡಿಯೂರಪ್ಪನವರು ಈ ಹಿಂದೆ ಕೆ.ಜೆ.ಪಿ. ಸ್ಥಾಪಿಸಿದಾಗ ನಾನು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಅವರ ಜೊತೆ ಗಟ್ಟಿಯಾಗಿ ನಿಂತಿದ್ದೆ ಎಂದು ತಿಳಿಸಿದರು.
ಪ್ರತಿಯೊಬ್ಬ ಶಾಸಕನಿಗೂ ಸಚಿವ ಸ್ಥಾನ, ಪ್ರತಿ ಸಚಿವನಿಗೂ ಮುಖ್ಯಮಂತ್ರಿ ಸ್ಥಾನದ ಅಪೇಕ್ಷೆ ಇರುತ್ತದೆ. ಅದರಂತೆ ತಮಗೂ ಅಪೇಕ್ಷೆ ಇದೆ ಎಂದ ಅವರು, ಇದಕ್ಕೆಲ್ಲ ಕಾಲ ಕೂಡಿ ಬರಬೇಕು ಎಂದರು.
ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಲಾಗುತ್ತಿದೆ ಎಂಬುದೆಲ್ಲಾ ಊಹಾಪೋಹ. ಮುಂದಿನ ಮೂರು ವರ್ಷ ಅವರೇ ಮುಖ್ಯಮಂತ್ರಿಯಾಗಿರುತ್ತಾರೆ. ಮುಖ್ಯಮಂತ್ರಿ ಸ್ಥಾನ ಖಾಲಿ ಇಲ್ಲ ಎಂದು ಮತ್ತೊಂದು ಪ್ರಶ್ನೆಗೆ ಉತ್ತರಿಸಿದರು.
ರೇಣುಕಾಚಾರ್ಯ ವಿಮಾನ ಕೊಟ್ರೂ ಓಡಿಸ್ತಾರೆ!
ಶಾಸಕ ಹಾಗೂ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ಅವರು ಬಸ್ ಅಷ್ಟೇ ಏಕೆ ವಿಮಾನ ಹಾಗೂ ಹೆಲಿಕಾಪ್ಟರ್ ಕೊಟ್ಟರೂ ಓಡಿಸುತ್ತಾರೆ ಎಂದು ಸಾರಿಗೆ ನಿಗಮದ ಅಧ್ಯಕ್ಷ ಎಂ. ಚಂದ್ರಪ್ಪ ತಮಾಷೆ ಮಾಡಿದ್ದಾರೆ.
ರೇಣುಕಾಚಾರ್ಯ ಅವರು ಸಾರಿಗೆ ನಿಗಮದ ಬಸ್ ಓಡಿಸಿದ್ದರ ಕುರಿತು ಪ್ರಶ್ನಿಸಿದಾಗ ಚಂದ್ರಪ್ಪ ಈ ರೀತಿ ಚಟಾಕಿ ಹಾರಿಸಿದ್ದಾರೆ.
ಡೀಸೆಲ್ ಖರ್ಚಿಗಷ್ಟೇ ಆದಾಯ : ಕೊರೊನಾ ಲಾಕ್‌ಡೌನ್ ಹಿನ್ನೆಲೆಯಲ್ಲಿ ನಿಗಮಕ್ಕೆ ಆರು ತಿಂಗಳು ಯಾವುದೇ ಆದಾಯ ಇರಲಿಲ್ಲ. ಕಳೆದ ತಿಂಗಳು ಸಾಮಾನ್ಯದ ಅರ್ಧದಷ್ಟು ಆದಾಯ ಬಂದಿದ್ದು, ಇದು ಡೀಸೆಲ್ ಖರ್ಚು ಸರಿದೂಗಿಸಲು ಸಾಕಾಗಲಿದೆ. ನೌಕರರ ವೇತನಕ್ಕೆ ಸರ್ಕಾರ ನೆರವು ನೀಡುತ್ತಿದೆ ಎಂದು ಚಂದ್ರಪ್ಪ ಹೇಳಿದರು.
1500 ಕೋಟಿ ರೂ. ನಷ್ಟ : ನಿಗಮಕ್ಕೆ ಲಾಕ್‌ಡೌನ್ ನಂತರದಲ್ಲಿ ಒಟ್ಟಾರೆ 1,500 ಕೋಟಿ ರೂ.ಗಳ ನಷ್ಟವಾಗಿದೆ. ಹೀಗಾಗಿ ಹೊಸ ಬಸ್ ಹಾಗೂ ಹೊಸ ರೂಟ್‌ಗಳಿಗೆ ಮುಂದಾಗುವುದಿಲ್ಲ. ರಾಜ್ಯ ಸರ್ಕಾರವು ಇದುವರೆಗೆ 1,350 ಕೋಟಿ ರೂ.ಗಳನ್ನು ನೀಡಿದೆ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ನೌಕರರ ವೇತನಕ್ಕೆ ನೆರವು ನೀಡಿರುವುದಕ್ಕೆ ಧನ್ಯವಾದ ಸಲ್ಲಿಸುವುದಾಗಿ ಚಂದ್ರಪ್ಪ ಹೇಳಿದರು.
ನಷ್ಟವಾದರೂ ಸೇವೆ : ಸಾರಿಗೆ ನಿಗಮವು ಲಾಭಕ್ಕಿಂತ ಸೇವೆಯ ಉದ್ದೇಶ ಹೊಂದಿದೆ. ಹಲವು ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಪ್ರಶಸ್ತಿಗಳನ್ನು ಗಳಿಸುತ್ತಾ ಬಂದಿದೆ. ಹೀಗಾಗಿ ನಷ್ಟವಾದರೂ ಬೇರೆ ಯೋಚನೆ ಇಲ್ಲದೇ ಸೇವೆ ಮುಂದುವರೆಸುವುದಾಗಿ ಚಂದ್ರಪ್ಪ ತಿಳಿಸಿದರು.
ಈ ಸಂದರ್ಭದಲ್ಲಿ ಲಕ್ಷ್ಮಿ ವೆಂಕಟೇಶ್ವರ ಗ್ರಾನೈಟ್ಸ್ ಅಂಡ್ ಮಾರ್ಬಲ್ ಮಾಲೀಕರಾದ ಗೌಡ್ರ ಇಂದ್ರಪ್ಪ, ಗೌಡ್ರ ಯತಿನ್, ಬಿ. ದುರ್ಗದ ಲಿಂಗರಾಜ್, ವಿಭಾಗೀಯ ನಿಯಂತ್ರಣಾಧಿಕಾರಿ ಸಿದ್ದೇಶ್ವರ ಎನ್. ಹೆಬ್ಬಾಳ್ ಮತ್ತಿತರರು ಉಪಸ್ಥಿತರಿದ್ದರು.