ಕನ್ನಡವನ್ನು ರಾಷ್ಟ್ರೀಯ ಭಾಷೆಯನ್ನಾಗಿಸಲು ಆಗ್ರಹ

ದಾವಣಗೆರೆ, ಸೆ.14- ಅಂತರರಾಷ್ಟ್ರೀಯ ಹಿಂದಿ ದಿನಕ್ಕೆ ಪರ್ಯಾಯವಾಗಿ ಅಂತರರಾಷ್ಟ್ರೀಯ ಕನ್ನಡ ಭಾಷಾ ದಿನವಾಗಿ ಕರ್ನಾಟಕ ನವ ನಿರ್ಮಾಣ ಸೇನೆ ಜಿಲ್ಲಾ ಘಟಕದಿಂದ ನಗರದಲ್ಲಿ ಇಂದು ಆಚರಿಸಲಾಯಿತು.

ಪ್ರಧಾನ ಅಂಚೆ ಕಚೇರಿ ಬಳಿ ಘಟಕದ ಜಿಲ್ಲಾಧ್ಯಕ್ಷ ಕೆ.ಎನ್. ವೆಂಕಟೇಶ್ ನೇತೃತ್ವದಲ್ಲಿ ಜಮಾಯಿಸಿದ್ದ ಘಟ ಕದ ಕಾರ್ಯಕರ್ತರು, ರಾಜ್ಯಾದ್ಯಂತ ಅಂತರ ರಾಷ್ಟ್ರೀಯ ಕನ್ನಡ ಭಾಷಾ ದಿನ ಆಚರಿಸುವಂತೆ ಕರೆ ನೀಡಿದರು.

ಅಲ್ಲದೇ, ಕೇಂದ್ರ ಸರ್ಕಾರಿ ಸ್ವಾಮ್ಯದ ಎಲ್ಲಾ ಕಚೇರಿಗಳಿಗೆ ತೆರಳಿ ಕನ್ನಡ ಬಾರದ ಸಿಬ್ಬಂದಿಗಳಿಗೆ ಕನ್ನಡ ಕಲಿಕಾ ಪುಸ್ತಕ ಮತ್ತು ಸಿಹಿ ನೀಡುವುದರ ಮೂಲಕ ಕನ್ನಡೇತರರಿಗೆ ಕನ್ನಡ ಕಲಿಯುವಂತೆ ಮನವಿ ಮಾಡಿದರು. ಕನ್ನಡ ಭಾಷೆಯ ಪುರಾತನತೆ ಮತ್ತು ಶ್ರೀಮಂತಿಕೆ ತಿಳಿಸುವ ಕರಪತ್ರಗಳನ್ನು ಕಚೇರಿಗಳಲ್ಲಿ ಹಂಚಿ ಜಾಗೃತಿ ಮೂಡಿಸಿದರು.

ಕೇವಲ 200 ವರ್ಷಗಳ ಇತಿಹಾಸವಿರುವ ಹಿಂದಿಗೆ ರಾಷ್ಟ್ರೀಯ ಭಾಷೆಯ ಸ್ಥಾನ-ಮಾನ ಕಲ್ಪಿಸಿ ಕೊಡುವ ನಿಟ್ಟಿನಲ್ಲಿ ಪ್ರತಿ ವರ್ಷ ಕೇಂದ್ರ ಸರ್ಕಾರ ಕೋಟ್ಯಾಂತರ ರೂ. ಹಣ ಖರ್ಚು ಮಾಡಿ ಸೆಪ್ಟೆಂಬರ್ 14ರಂದು ಆಚರಿಸುತ್ತಿರುವ ಅಂತರರಾಷ್ಟ್ರೀಯ ಹಿಂದಿ ದಿವಸ್ ಗೆ ಪರ್ಯಾಯವಾಗಿ 2700 ವರ್ಷಗಳ ಇತಿಹಾಸವುಳ್ಳ ಕನ್ನಡ ಭಾಷೆಯನ್ನು ರಾಷ್ಟ್ರೀಯ ಭಾಷೆ ಯನ್ನಾಗಿ ಘೋಷಿಸಬೇಕು ಹಾಗೂ ಕೇಂದ್ರ ಸರ್ಕಾರದ ಎಲ್ಲಾ ಕಚೇರಿಗಳಲ್ಲಿ ಕಡ್ಡಾಯ ಕನ್ನಡ ಬಳಕೆ ಮಾಡುವಂತೆ ಸಂಘಟನೆಯ ಕಾರ್ಯಕರ್ತರು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಉಪಾಧ್ಯಕ್ಷ ಶೇರ್ ಅಲಿ, ಜಿಲ್ಲಾ ಯುವ ಘಟಕದ ಪಾಂಡುರಂಗ, ಚಮನ್, ಕೃಷ್ಣಕುಮಾರ್, ಅಯಾಜ್ ಖಾನ್, ಪ್ರಸನ್ನ, ನೂರು ಮಹಮ್ಮದ್, ಅಷ್ಪಕ್ ಅಲಿ ಸೇರಿದಂತೆ ಇತರರಿದ್ದರು. 

error: Content is protected !!