ಹಿಂದಿ ಸಪ್ತಾಹ ಆಚರಣೆಯನ್ನು ಖಂಡಿಸಿ ಕನ್ನಡ ಚಳುವಳಿ ಕೇಂದ್ರ ಸಮಿತಿ ನೇತೃತ್ವದಲ್ಲಿ ಕನ್ನಡಪರ ಸಂಘಟನೆಗಳು ಸೋಮವಾರ ದಾವಣಗೆರೆಯಲ್ಲಿ ಪ್ರತಿಭಟನೆ ನಡೆಸಿದವು.
ದಾವಣಗೆರೆ, ಸೆ.14- ಹಿಂದಿ ಸಪ್ತಾಹ ಆಚರಣೆ ಖಂಡಿಸಿ, ಕನ್ನಡ ಚಳುವಳಿ ಕೇಂದ್ರ ಸಮಿತಿ ಹಾಗೂ ಕನ್ನಡಪರ ಸಂಘಟನೆಗಳ ಒಕ್ಕೂಟದ ಪದಾಧಿಕಾರಿಗಳು ನಗರದ ಜಯದೇವ ವೃತ್ತದಲ್ಲಿ ಇಂದು ಪ್ರತಿಭಟನೆ ನಡೆಸಿದರು.
ಕೇಂದ್ರ ಸರ್ಕಾರ ಪ್ರತಿ ಸೆಪ್ಟೆಂಬರ್ 14ರಂದು ಹಿಂದಿ ದಿವಸ್ ಆಚರಣೆ ಮಾಡಲು ಕರೆ ನೀಡಿರುವುದು ಖಂಡನೀಯ. ಈಗಾಗಲೇ ರೈಲ್ವೆ ಇಲಾಖೆ, ಬ್ಯಾಂಕಿಂಗ್ ಮತ್ತು ಪರೀಕ್ಷಾ ವಲಯಗಳಲ್ಲಿ, ಅಂಚೆ ಕಚೇರಿಗಳಲ್ಲಿ, ಪಠ್ಯ ಕ್ರಮದಲ್ಲಿ ಕೇಂದ್ರ ಹತ್ತು ಹಲವು ಕ್ಷೇತ್ರಗಳಲ್ಲಿ ಬಲವಂತವಾಗಿ ಹಿಂದಿ ಹೇರಿಕೆ ಮಾಡುತ್ತಿರು ವುದು ಸರಿಯಲ್ಲ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ನಮ್ಮ ಭಾಷೆಗೆ 2 ಸಾವಿರ ವರ್ಷಗಳ ಇತಿಹಾಸವಿದೆ. ಕನ್ನಡ ಕನ್ನಡಿಗರ ಜೀವನಾಡಿ. ನಮ್ಮ ನಾಡಿನ ಧೀಮಂತ ಸಾಹಿತಿಗಳು ಮತ್ತು ಸಂಶೋಧಕರು ಕನ್ನಡಕ್ಕೆ ಸಾಕಷ್ಟು ಕೊಡುಗೆ ನೀಡಿದ್ದಾರೆ. ಇಂತಹ ಸಂದರ್ಭದಲ್ಲಿ ಹಿಂದಿ ಹೇರಿಕೆ ದುರಂತ. ಯಾವುದೇ ಕಾರಣಕ್ಕೂ ದಕ್ಷಿಣ ಭಾರತದಲ್ಲಿ ಹಿಂದಿ ಹೇರಿಕೆ ಸಹಿಸುವು ದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಹಿಂದಿ ಭಾಷೆಗೆ ನಾವು ಗೌರವವನ್ನು ನೀಡುತ್ತೇವೆ. ಹಿಂದಿ ಭಾಷೆ ನಮ್ಮ ಆಯ್ಕೆ ಆಗಬೇಕೇ ಹೊರತು ಕಡ್ಡಾಯವಲ್ಲ. ಅದೇ ರೀತಿ ಹಿಂದಿ ಹೇರಿಕೆಗೆ ಕಾರಣವಾಗಿರುವ ಪರಿಚ್ಛೇಧ 343-351 ರವರೆಗಿನ ವಿಧಿಗಳನ್ನು ತಿದ್ದುಪಡಿ ಮಾಡಬೇಕು. ಕರ್ನಾಟಕ ರಾಜ್ಯದಲ್ಲಿರುವ ಕೇಂದ್ರೀಯ ಸದನ ಶಿಕ್ಷಣ ಸಂಸ್ಥೆಗಳು ಸಿಬಿಎಸ್ ಇ ಮತ್ತು ಐಸಿಎಸ್ಇ, ನವೋದಯ ಸೇರಿದಂತೆ ರಾಜ್ಯದ ಸರ್ಕಾರಿ ಹಾಗೂ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ 1 ರಿಂದ 10 ನೇ ತರಗತಿವರೆಗೂ ಕನ್ನಡ ಭಾಷೆ ಕಡ್ಡಾಯ ಮಾಡಬೇಕೆಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಟಿ. ಶಿವಕುಮಾರ್, ಎಸ್.ಜಿ. ಸೋಮಶೇಖರ್, ಶುಭಮಂಗಳ, ರಾಮಣ್ಣ, ಸಂತೋಷ್ ಕುಮಾರ್, ಶ್ರೇಯಸ್, ಜಮ್ನಳ್ಳಿ ನಾಗರಾಜ್ ಸೇರಿದಂತೆ ಇತರರು ಭಾಗವಹಿಸಿದ್ದರು.