ದಾವಣಗೆರೆ, ಸೆ.12- ಸಮಸ್ಯೆಗಳಿಗೆ ಆತ್ಮಹತ್ಯೆಯೇ ಪರಿಹಾರವಲ್ಲ. ಜಗತ್ತಿನಲ್ಲಿ ಸಮಸ್ಯೆಗಳಿಲ್ಲದವರು ಯಾರೂ ಇಲ್ಲ ಪ್ರತಿಯೊಬ್ಬರಿಗೂ ಕೂಡ ಸಮಸ್ಯೆ ಎನ್ನುವುದು ಇದ್ದೇ ಇರುತ್ತದೆ. ಆದ್ದರಿಂದ ಆತ್ಮಹತ್ಯೆಗೆ ಶರಣಾಗದೇ ಸೂಕ್ತ ಪರಿಹಾರ ಕಂಡುಕೊಳ್ಳಲು ಮೊದಲು ಪ್ರಯತ್ನಿಸಬೇಕು. ನಿಮ್ಮ ನಿಮ್ಮ ಆಪ್ತರೊಂದಿಗೆ ಅಥವಾ ಹಿರಿಯರೊಂದಿಗೆ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡು ಅವರ ಸಲಹೆ – ಸೂಚನೆಗಳನ್ನು ಪಡೆದು ನಡೆದುಕೊಂಡಲ್ಲಿ ಆತ್ಮಹತ್ಯೆಯಂತಹ ನಕಾರಾತ್ಮಕ ಯೋಚನೆಯಿಂದ ದೂರ ಬರಲು ಸಾಧ್ಯ ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಹೇಳಿದರು
ಜಿಲ್ಲಾಧಿಕಾರಿಗಳ ಕಛೇರಿಯ ತುಂಗಭದ್ರಾ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ದಾವಣಗೆರೆ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ದಾವಣಗೆರೆ ಮತ್ತು ಮನೋ ವೈದ್ಯಕೀಯ ವಿಭಾಗ ಚಿಗಟೇರಿ ಜಿಲ್ಲಾಸ್ಪತ್ರೆ ಸಹಯೋಗದಲ್ಲಿ ಜಿಲ್ಲೆಯ ವೈದ್ಯಾಧಿಕಾರಿಗಳಿಗೆ ವಿಶ್ವ ಆತ್ಮಹತ್ಯೆ ತಡೆ ದಿನ ಕುರಿತು ಕಾರ್ಯಾಗಾರವನ್ನು ಪೋಸ್ಟರ್ ಬಿಡುಗಡೆ ಮಾಡುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ಜೆ.ಜೆ.ಎಂ ವೈದ್ಯಕೀಯ ಕಾಲೇಜಿನ ಹಿರಿಯ ಪ್ರಾಧ್ಯಾಪಕರು ಮತ್ತು ಮನೋ ವೈದ್ಯ ಡಾ. ಸಿ.ವೈ.ಸುದರ್ಶನ್ ಮಾತನಾಡಿ, ಆತ್ಮಹತ್ಯೆ ಎಂದರೆ ವ್ಯಕ್ತಿಯು ತನ್ನನ್ನು ತಾನೇ ಉದ್ದೇಶಪೂರ್ವಕವಾಗಿ ಹತ್ಯೆ ಮಾಡಿಕೊಳ್ಳುವು ದಾಗಿದೆ ಹಾಗೂ ಆತ್ಮಹತ್ಯೆಯು ಖಿನ್ನತೆ ಎಂಬ ಮಾನಸಿಕ ಕಾಯಿಲೆಯ ಲಕ್ಷಣವಾಗಿದೆ. ಆತ್ಮಹತ್ಯೆ ಮಾಡಿಕೊಳ್ಳುವ ವ್ಯಕ್ತಿಗೆ 25 ಬಾರಿ ಆತ್ಮಹತ್ಯೆ ಆಲೋಚನೆ ಬರುತ್ತದೆ.
ಪ್ರಸ್ತುತವಾಗಿ ಇದು ಸಾಮಾಜಿಕ ಪಿಡುಗಾಗಿ ಪರಿಣಮಿಸಿದೆ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ಪ್ರತಿ 40 ಸೆಕೆಂಡಿಗೆ ಒಂದು ಆತ್ಮಹತ್ಯೆ ಜರುಗುತ್ತಿದೆ. ಭಾರತ ದೇಶದಲ್ಲಿ ಪ್ರತಿ ವರ್ಷ 90 ಸಾವಿರ ಜನರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಮತ್ತು ಆತ್ಮಹತ್ಯೆಗೆ ಶರಣಾಗುತ್ತಿರುವವರ ವಯಸ್ಸು 15 ರಿಂದ 29 ವರ್ಷದ ವಯೋಮಾನದವರಾಗಿದ್ದಾರೆ ಹಾಗೂ ಜೊತೆಗೆ ಈ ರೀತಿಯಾದ ಆತ್ಮಹತ್ಯೆ ಪ್ರವೃತ್ತಿಯ ದಾರಿಯನ್ನು ಹಿಡಿಯುವುದಕ್ಕೆ ನಾನಾ ರೀತಿಯ ಕಾರಣಗಳಿವೆ. ಮಾನಸಿಕ ಕಾಯಿಲೆಗಳಿಂದ, ಮೆದುಳಿನಲ್ಲಾಗುವ ರಾಸಾಯನಿಕ ಬದಲಾವಣೆಗಳಿಂದ, ನಕಾರಾತ್ಮಕ ಆಲೋಚನೆಗಳು, ಹಠಾತ್ ನಿರ್ಧಾರದಿಂದ, ಮಾದಕ ಮತ್ತು ಮದ್ಯ ಸೇವನೆಯಿಂದ, ಸಾಮಾಜಿಕ ಸಮಸ್ಯೆಗಳು ಅಥವಾ ಕುಟುಂಬದಲ್ಲಿನ ಒತ್ತಡಕಾರಕಾಂಶಗಳು, ಹಾಗೂ ಇನ್ನಿತರೆ ಹಲವಾರು ಕಾರಣಗಳಿಂದ ಪ್ರೇರಿತರಾಗುತ್ತಾರೆ ಮತ್ತು ಕೋವಿಡ್-19 ಸಮಯದಲ್ಲಿಯೂ ಕೂಡ ಆತ್ಮಹತ್ಯೆಗೆ ಒಳಗಾಗುತ್ತಿದ್ದಾರೆ.
ಇದರಿಂದ ಹೊರಬರುವುದು ನಕಾರಾತ್ಮಕ ಆಲೋಚನೆಗಳು ಬಂದರೆ, ಆಪ್ತರೊಡನೆ ಸಮಸ್ಯೆಗಳನ್ನು ಹಂಚಿಕೊಳ್ಳುವುದು ಅಥವಾ ಕುಟುಂಬದೊಡನೆ ಬೆರೆಯುವುದು, ದೈನಂದಿನವಾಗಿ ಧ್ಯಾನ, ಪ್ರಾಣಾಯಾಮ, ವ್ಯಾಯಾಮಗಳ ಅಭ್ಯಾಸ ಹಾಗೂ ಮನೋರಂಜನಾತ್ಮಕ ಚಟುವಟಿಕೆಗಳಲ್ಲಿ ಭಾಗವಹಿಸುವುದು ಅಥವಾ ಗುಣಮಟ್ಟದ ಔಷಧಿ ಚಿಕಿತ್ಸೆ ಹಾಗೂ ಆಪ್ತ ಸಮಾಲೋಚನೆಯಿಂದ ಆತ್ಮಹತ್ಯೆಯನ್ನು ತಡೆಗಟ್ಟಬಹುದಾಗಿದೆ ಎಂದು ತಿಳಿಸಿದರು.
ಈ ವೇಳೆಯಲ್ಲಿ ಅಪರ ಜಿಲ್ಲಾಧಿಕಾರಿ ಪೂಜಾರ್ ವೀರಮಲ್ಲಪ್ಪ, ಮನೋವೈದ್ಯ ಡಾ. ಗಂಗಂ ಸಿದ್ದಾರೆಡ್ಡಿ, ತಾಲ್ಲೂಕು ಆರೋಗ್ಯಾಧಿಕಾರಿ ಡಾ. ದೇವರಾಜ್, ಮನಶಾಸ್ತ್ರಜ್ಞರಾದ ಎಸ್.ವಿಜಯಕುಮಾರ್, ಸಮಾಜ ಸೇವಕ ಸಂತೋಷ್ಕುಮಾರ್, ನರ್ಸಿಂಗ್ ಅಧಿಕಾರಿ ಎಸ್.ವೈ. ಗಿರೀಶ್ ನಾಯ್ಕ್ ಹಾಗೂ ಇತರರಿದ್ದರು.