ಪರಿಶಿಷ್ಟ ಮಕ್ಕಳಿಗೆ ಮೊಬೈಲ್‌ ನೀಡಲು ಚಿಂತನೆ: ಕಾರಜೋಳ

ವಸತಿ ಶಾಲೆಗಳಲ್ಲಿ ಆನ್‌ಲೈನ್‌ ಶಿಕ್ಷಣಕ್ಕೆ ಕ್ರಮ

ದಾವಣಗೆರೆ, ಸೆ. 12 – ಕೊರೊನಾ ಹಿನ್ನೆಲೆಯಲ್ಲಿ ಸಮಾಜ ಕಲ್ಯಾಣ ಇಲಾ ಖೆಯ ವಸತಿ ಶಾಲೆಗಳ ವಿದ್ಯಾರ್ಥಿಗಳಿಗೆ ಆನ್‌ಲೈನ್‌ ಶಿಕ್ಷಣಕ್ಕೆ ಕ್ರಮ ತೆಗೆದು ಕೊಳ್ಳಲಾಗುವುದು ಎಂದಿರುವ ಸಮಾಜ ಕಲ್ಯಾಣ ಸಚಿವರೂ ಆಗಿರುವ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ, ಮಕ್ಕಳ ಆನ್‌ಲೈನ್‌ ಶಿಕ್ಷಣಕ್ಕೆ ಮೊಬೈಲ್ ಕೊಡುವ ವಿಚಾರ ತಮಗಿದೆ ಎಂದಿದ್ದಾರೆ.

ನಗರಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಪತ್ರಕರ್ತರೊಂದಿಗೆ ಮಾತನಾಡುತ್ತಿದ್ದ ಅವರು, ಕೊರೊನಾ ಕಾರಣದಿಂದ ಶಾಲೆಗಳು ಪುನರಾರಂಭವಾಗಿಲ್ಲ. ಇಂತಹ ಸಂದರ್ಭದಲ್ಲಿ ವಸತಿ ಶಾಲೆಗಳ ವಿದ್ಯಾರ್ಥಿಗಳ ಶಿಕ್ಷಣದ ನಿರ್ವಹಣೆಗಾಗಿ ಶಿಕ್ಷಣ ಪರಿಣಿತ ಗುರುರಾಜ ಕರ್ಜಗಿ ಅವರನ್ನು ಮಾರ್ಗದರ್ಶಕರನ್ನಾಗಿ ನೇಮಿಸಲಾಗಿದೆ ಎಂದಿದ್ದಾರೆ.

ಆನ್‌ಲೈನ್‌ ಶಿಕ್ಷಣವನ್ನು ನಾವೂ ಆರಂಭಿಸಲಿದ್ದೇವೆ. ಇದಕ್ಕಾಗಿ ಕರ್ಜಗಿ ನೆರವಾಗಲಿದ್ದಾರೆ. ಪರಿಶಿಷ್ಟ ಜಾತಿ ಹಾಗೂ ಪಂಗಡಗಳ ಮಕ್ಕಳ ಆನ್‌ಲೈನ್‌ ಶಿಕ್ಷಣಕ್ಕಾಗಿ ಮೊಬೈಲ್‌ಗಳನ್ನು ವಿತರಿಸುವ ಆಲೋಚನೆಯೂ ತಮಗಿದೆ. ಇದಕ್ಕಾಗಿ ಕರ್ಜಗಿ ಅವರ ಸಲಹೆ ಪಡೆಯಲಾಗುವುದು ಎಂದವರು ತಿಳಿಸಿದರು.

ಸಮಾಜ ಕಲ್ಯಾಣ ಇಲಾಖೆಯ ವಸತಿ ಶಿಕ್ಷಣ ಸಂಸ್ಥೆಗಳಲ್ಲಿ ಅಧ್ಯಯನ ಮಾಡು ತ್ತಿರುವ ಪರಿಶಿಷ್ಟ ಜಾತಿ, ಪಂಗಡ ಹಾಗೂ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳು ರಾಜ್ಯದ ಸರಾಸರಿ ಫಲಿತಾಂಶಕ್ಕಿಂತ ಹೆಚ್ಚಿನ ಫಲಿತಾಂಶ ಗಳಿಸಿದ್ದಾರೆ. ಎಸ್‌ಎಸ್‌ಎಲ್‌ಸಿ ಯಲ್ಲಿ ಶೇ.95 ಹಾಗೂ ಪಿಯುಸಿಯಲ್ಲಿ ಶೇ.86ರಷ್ಟು ಫಲಿತಾಂಶ ಗಳಿಸಿದ್ದಾರೆ. ಮುಂದಿನ ವರ್ಷ ಶೇ.100ರ ಫಲಿತಾಂಶ ಪಡೆಯುವ ಗುರಿ ಇದೆ ಎಂದು ಹೇಳಿದರು.

ರಸ್ತೆಗಳ ಉನ್ನತೀಕರಣ : 2004ರ ನಂತರ ಮೊದಲ ಬಾರಿಗೆ ಗ್ರಾಮೀಣ ಹಾಗೂ ಜಿಲ್ಲಾ ರಸ್ತೆಗಳನ್ನು ಉನ್ನತೀಕರಿ ಸಲಾಗುತ್ತಿದೆ ಎಂದು ಲೋಕೋಪಯೋಗಿ ಸಚಿವರೂ ಆಗಿರುವ ಕಾರಜೋಳ ತಿಳಿಸಿದ್ದಾರೆ.

9,601 ಕಿ.ಮೀ. ಉದ್ದದ ಜಿಲ್ಲಾ ರಸ್ತೆಗಳನ್ನು ರಾಜ್ಯ ಹೆದ್ದಾರಿಯಾಗಿ ಈ ವರ್ಷ ಪರಿವರ್ತಿಸಲಾಗುತ್ತಿದೆ. ಅದೇ ರೀತಿ 15,510 ಕಿಮೀ. ಉದ್ದದ ಗ್ರಾಮೀಣ ರಸ್ತೆಗಳನ್ನು ಜಿಲ್ಲಾ ಮುಖ್ಯ ರಸ್ತೆಗಳಾಗಿ ಪರಿವರ್ತಿಸಲಾಗುತ್ತಿದೆ. ಒಟ್ಟಾರೆ 25 ಸಾವಿರ ಕಿ.ಮೀ. ರಸ್ತೆಗಳ ಉನ್ನತೀಕರಣ ಕಾಮಗಾರಿ ಕೈಗೊಳ್ಳಲಾಗುತ್ತಿದೆ ಎಂದು ಹೇಳಿದರು.

ಪಂಚಾಯ್ತಿಗಳ 15,610 ಕಿ.ಮೀ. ಉದ್ದದ ರಸ್ತೆಯನ್ನು ಲೋಕೋಪಯೋಗಿ ಇಲಾಖೆ ವಶಕ್ಕೆ ಪಡೆಯಲಾಗಿದೆ. 2021-22ರ ಸಾಲಿನಿಂದ ಈ ರಸ್ತೆಗಳನ್ನು ಲೋಕೋ ಪಯೋಗಿ ಇಲಾಖೆಯೇ ನಿ ರ್ವಹಿಲಿದೆ ಎಂದು ಕಾರಜೋಳ ಹೇಳಿದರು.

ಜಿಲ್ಲೆಯಲ್ಲಿ 189 ಕಿಮೀ ಹೆದ್ದಾರಿ : ದಾವಣಗೆರೆ ಜಿಲ್ಲೆಯಲ್ಲಿ 2020-21ರ ಸಾಲಿನಲ್ಲಿ 189 ಕಿ.ಮೀ. ಉದ್ದದ ಜಿಲ್ಲಾ ರಸ್ತೆಯನ್ನು ರಾಜ್ಯ ಹೆದ್ದಾರಿಯಾಗಿ ಪರಿವರ್ತಿಸಲಾಗುತ್ತಿದೆ ಎಂದವರು ಇದೇ ಸಂದರ್ಭದಲ್ಲಿ ತಿಳಿಸಿದರು.

363 ಕಿ.ಮೀ. ಉದ್ದದ ಹಳ್ಳಿ ರಸ್ತೆಯನ್ನು ಜಿಲ್ಲಾ ಮುಖ್ಯ ರಸ್ತೆಯಾಗಿ ಪರಿವರ್ತಿಸಲಾಗುತ್ತಿದೆ ಎಂದವರು ಇದೇ ಸಂದರ್ಭದಲ್ಲಿ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡ ಅಭಿವೃದ್ಧಿ ನಿಗಮದ ಅಧ್ಯಕ್ಷ ಹಾಗೂ ಶಾಸಕ ಎಸ್.ವಿ. ರಾಮಚಂದ್ರ, ಶಾಸಕರಾದ ಪ್ರೊ. ಲಿಂಗಣ್ಣ, ರಾಮಪ್ಪ ಹಾಗೂ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಉಪಸ್ಥಿತರಿದ್ದರು.

error: Content is protected !!