ಐಎಸ್‌ಐ ಹೆಲ್ಮೆಟ್ ಕಡ್ಡಾಯ ಅಲ್ಲ : ಎಸ್ಪಿ

ದಾವಣಗೆರೆ, ಸೆ. 12 – ಐ.ಎಸ್.ಐ. ಗುಣಮಟ್ಟದ ಹೆಲ್ಮೆಟ್ ಕಡ್ಡಾಯ ಅಲ್ಲ ಎಂದಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ, ಗುಣಮಟ್ಟದ ಹೆಲ್ಮೆಟ್ ಧರಿಸಲು ಮಾತ್ರ ನಿಯಮ ಇದೆ ಎಂದು ಸ್ಪಷ್ಟನೆ ನೀಡಿದ್ದಾರೆ.

ಕಳೆದ ಸೆಪ್ಟೆಂಬರ್ 9ರಂದು ಜಿಲ್ಲಾ ಪೊಲೀಸರು ಪ್ರಕಟಣೆಯೊಂದನ್ನು ಹೊರಡಿಸಿ, ಐ.ಎಸ್.ಐ. ಮುದ್ರೆ ಇಲ್ಲದ ಅರ್ಧ ಹೆಲ್ಮೆಟ್‌ಗಳನ್ನು ಸಂಪೂರ್ಣ ನಿಷೇಧ ಮಾಡಿರುವುದಾಗಿ ತಿಳಿಸಲಾಗಿತ್ತು. 

ಅಲ್ಲದೇ, ಬರುವ ಸೋಮವಾರದಿಂದ ಐ.ಎಸ್.ಐ. ಮುದ್ರಿತ ಪೂರ್ಣ ಹೆಲ್ಮೆಟ್ ಧರಿಸದೆ ದ್ವಿಚಕ್ರ ವಾಹನ ಚಾಲನೆ ಮಾಡುವುದು ಕಂಡು ಬಂದರೆ ಐ.ಎಂ.ವಿ. ಪ್ರಕರಣ ದಾಖಲಿಸಲಾಗುವುದು ಎಂದು ಹೇಳಲಾಗಿತ್ತು. ಈ ಬಗ್ಗೆ ಸ್ಪಷ್ಟನೆ ನೀಡಿರುವ ಹನುಮಂತರಾಯ, ಇದು ಕೇವಲ ಸಲಹೆ ಮಾತ್ರವಾಗಿದೆ. ಐ.ಎಸ್.ಐ. ಮಾರ್ಕ್ ಇರುವ ಹೆಲ್ಮೆಟ್ ಕಡ್ಡಾಯವಲ್ಲ ಎಂದಿದ್ದಾರೆ. ಈ ವರ್ಷ ಲಾಕ್‌ಡೌನ್‌ ನಡುವೆಯೂ 138 ಅಪಘಾತಗಳು ಸಂಭವಿಸಿ 162 ಜನರು ಸಾವನ್ನಪ್ಪಿದ್ದಾರೆ. ಈ ಹಿನ್ನೆಲೆಯಲ್ಲಿ ಜನರು ಗುಣಮಟ್ಟದ ಹೆಲ್ಮೆಟ್ ಧರಿಸಬೇಕು. ಸರಿಯಾಗಿ ಬೆಲ್ಟ್ ಹಾಕಿಕೊಂಡು ತಮ್ಮ ತಲೆ ರಕ್ಷಿಸಿಕೊಳ್ಳಬೇಕು ಎಂದು ಸೂಚನೆ ನೀಡಲಾಗಿದೆ ಎಂದವರು ಹೇಳಿದ್ದಾರೆ.

error: Content is protected !!