ಹರಪನಹಳ್ಳಿ : ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಶಾಸಕ ಜಿ.ಕರುಣಾಕರ ರೆಡ್ಡಿ
ಹರಪನಹಳ್ಳಿ, ಸೆ.13- ಶಿಕ್ಷಕರ ಪಾತ್ರ ಬಹುಮುಖ್ಯವಾಗಿದ್ದು ಸಂಬಳಕ್ಕಾಗಿ ಸೇವೆ ಮಾಡದೆ, ಮಕ್ಕಳಿಗೆ ಪಠ್ಯದ ಜೊತೆ ಉತ್ತಮ ಮೌಲ್ಯಗಳನ್ನು ಕಲಿಸಿ ಜವಾಬ್ದಾರಿಯಿಂದ ಕೆಲಸ ಮಾಡಬೇಕು ಎಂದು ಶಾಸಕ ಜಿ.ಕರುಣಾಕರ ರೆಡ್ಡಿ ಹೇಳಿದರು.
ಪಟ್ಟಣದ ತೆಗ್ಗಿನಮಠ ಸಂಸ್ಥಾನದ ಚಂದ್ರಶೇಖರ ಸಭಾ ಭವನದಲ್ಲಿ ಶಿಕ್ಷಣ ಇಲಾಖೆ ವತಿಯಿಂದ ಸರ್ವಪಲ್ಲಿ ಡಾ. ರಾಧಾಕೃಷ್ಣನ್ರವರ ಜನ್ಮದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ತಾಲ್ಲೂಕಿನಲ್ಲಿ 200 ಶಾಲಾ ಕೊಠಡಿಗಳು ಮಂಜೂರಾಗಿ ಕಾಮಗಾರಿ ಪ್ರಗತಿಯಲ್ಲಿದೆ. ಈಗ ಮತ್ತೆ 50 ಕೊಠಡಿಗಳು ಮಂಜೂರಾಗಿವೆ. ಕೊರೊನಾ ಎದುರಿಸಲು ಸಾಮಾಜಿಕ ಅಂತರ ಕಾಯ್ದುಕೊಂಡು ಲಸಿಕೆ ಬರುವವರೆಗೂ ಎಲ್ಲರೂ ಕೈ ಜೋಡಿಸೋಣ ಎಂದು ಅವರು ತಿಳಿಸಿದರು.
ಶಿಕ್ಷಣ ಸಂಯೋಜಕ ಗಿರಜ್ಜಿ ಮಂಜುನಾಥ ಪ್ರಾಸ್ತಾವಿಕವಾಗಿ ಮಾತನಾಡಿ, 10ನೇ ತರಗತಿ ಮಕ್ಕಳ ಫಲಿತಾಂಶ ಹೆಚ್ಚಳ ಪಡಿಸಿ ಅವರಲ್ಲಿ ಆತ್ಮವಿಶ್ವಾಸ ಹೆಚ್ಚಿಸಲು ಹಾಗೂ ಪರೀಕ್ಷಾ ಭಯ ಹೋಗಲಾಡಿಸಿ, ಮಕ್ಕಳು ಸಂತಸದಿಂದ ಪರೀಕ್ಷೆ ಎದುರಿಸಲು ಶಾಲಾ ಗ್ರಾಮ ವಾಸ್ತವ್ಯ ಮಾಡಲಾಗಿದ್ದು ಈ ಬಾರಿಯ 10ನೇ ತರಗತಿ ಫಲಿತಾಂಶ ಕೂಡ ಶೇ. 88.63 ರಷ್ಟು ಆಗಿದೆ. ನವೋದಯ ಫಲಿತಾಂಶ ಕೂಡ ಉತ್ತಮವಾಗಿದ್ದು, ಈ ಬಾರಿ ತಾಲ್ಲೂಕಿನಿಂದ 13 ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ. ಕ್ಷೇತ್ರ ಶಿಕ್ಷಣಾಧಿಕಾರಿಗಳ ನೇತೃತ್ವದಲ್ಲಿ ತಾಲ್ಲೂಕು ಹಂತದಲ್ಲಿ 8 ಸದಸ್ಯರ 3 ತಂಡಗಳು ಹಾಗೂ ತಾಲ್ಲೂಕಿನಾದ್ಯಂತ 24 ಕ್ಲಸ್ಟರ್ಗಳಲ್ಲಿ 124 ಸದಸ್ಯರ 24 ತಂಡಗಳನ್ನು ರಚಿಸಿ ನಿರಂತರವಾಗಿ ಕೋವಿಡ್ ಸೋಂಕಿತರ ಪ್ರಥಮ ಮತ್ತು ದ್ವಿತೀಯ ಸಂಪರ್ಕಿತರ ಮಾಹಿತಿಯನ್ನು ಪತ್ತೆ ಹಚ್ಚಿ ಆಫ್ಲೈನ್ ಮತ್ತು ಆನ್ಲೈನ್ ಮೂಲಕ ಪ್ರತಿದಿನದ ಮಾಹಿತಿಯನ್ನು ಜಿಲ್ಲಾಧಿಕಾರಿಗಳಿಗೆ ಹಾಗೂ ತಹಶೀಲ್ದಾರರಿಗೆ ಮಾಹಿತಿ ತಿಳಿಸುತ್ತೇವೆ ಎಂದರು.
ಜಿ.ಪಂ ಸದಸ್ಯರುಗಳಾದ ಕೆ.ಆರ್ .ಜಯಶೀಲ, ಡಾ.ಮಂಜುನಾಥ ಉತ್ತಂಗಿ, ಸುವರ್ಣ ನಾಗರಾಜ, ಡಿ.ಸಿದ್ದಪ್ಪ, ತಾ.ಪಂ ಸದಸ್ಯರುಗಳಾದ ವೈ.ಬಸಪ್ಪ, ಸಿಂಗ್ರಿಹಳ್ಳಿ ನಾಗರಾಜ, ಉಪವಿಭಾಗಾಧಿಕಾರಿ ವಿ.ಕೆ ಪ್ರಸನ್ನಕುಮಾರ್, ಕ್ಷೇತ್ರ ಶಿಕ್ಷಣಾಧಿಕಾಧಿಕಾರಿ ಎಸ್.ಎಂ.ವೀರಭದ್ರಯ್ಯ, ತೆಗ್ಗಿನಮಠದ ಕಾರ್ಯದರ್ಶಿ ಟಿ.ಎಂ.ಚಂದ್ರಶೇಖರಯ್ಯ, ನೌಕರರ ಸಂಘದ ಅಧ್ಯಕ್ಷ ಸಿದ್ದಲಿಂಗನಗೌಡ, ಸರ್ಕಾರಿ ನೌಕರರ ಒಕ್ಕೂಟದ ಅಧ್ಯಕ್ಷ ಎಂ.ಆಂಜನೇಯ, ರಾಜ್ಯ ಪರಿಷತ್ ಸದಸ್ಯ ಬಸವರಾಜ ಸಂಗಪ್ಪನವರ್, ಶಿಕ್ಷಕರ ಸಂಘದ ಅಧ್ಯಕ್ಷ ಕೆ.ಅಂಜಿನಪ್ಪ, ಕಾರ್ಯದರ್ಶಿ ಬಿ.ರಾಜಶೇಖರ, ಅರ್ಜುನ ಪರಸಪ್ಪ, ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಎಚ್. ಹೂವಣ್ಣ, ಇಒ ಅನಂತರಾಜ, ಪ್ರಭಾರಿ ದೈಹಿಕ ಪರಿವೀಕ್ಷಕ ಎಸ್. ಮುಸ್ತಾಫ, ಶಿಕ್ಷಕರ ಪತ್ತಿನ ಸಂಘದ ಅಧ್ಯಕ್ಷ ಕೆ.ಎಸ್ .ಉಸ್ಮಾನ್ ಸೇರಿದಂತೆ ಇತರರು ಉಪಸ್ಥಿತರಿದ್ದರು.