ನಕಲಿ ಚೆಕ್‌ಗಳ ಮೂಲಕ ರಾಮ ಮಂದಿರ ಟ್ರಸ್ಟ್‌ಗೆ 6 ಲಕ್ಷ ರೂ. ವಂಚನೆ

ಅಯೋಧ್ಯೆ, ಸೆ. 11 – ಎರಡು ನಕಲಿ ಚೆಕ್‌ಗಳ ಮೂಲಕ ರಾಮ ಮಂದಿರ ಟ್ರಸ್ಟ್‌ನ 6 ಲಕ್ಷ ರೂ.ಗಳನ್ನು ಬಿಡಿಸಿಕೊಂಡ ಅನಾಮಿಕ ವ್ಯಕ್ತಿಗಳ ವಿರುದ್ಧ ಉತ್ತರ ಪ್ರದೇಶ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಮೂರನೇ ನಕಲಿ ಚೆಕ್ ಮೂಲಕ 10 ಲಕ್ಷ ರೂ. ಬಿಡಿಸಿಕೊಳ್ಳುವ ಯತ್ನ ನಡೆಸುವಾಗ, ಎಚ್ಚರಿಕೆ ವಹಿಸಿದ್ದರಿಂದ ಪ್ರಯತ್ನ ವಿಫಲವಾಗಿತ್ತು.

ಟ್ರಸ್ಟ್ ಕಾರ್ಯದರ್ಶಿ ಹಾಗೂ ವಿ.ಹೆಚ್.ಪಿ. ನಾಯಕ ಚಂಪತ್ ರಾಯ್ ಅವರು ನೀಡಿದ ದೂರನ್ನು ಆಧರಿಸಿ ಕೊತ್ವಾಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಯಾವ ಖಾತೆಗೆ ಹಣ ವರ್ಗಾವಣೆಯಾಗಿತ್ತೋ, ಅದನ್ನು ನಾವು ಸ್ಥಗಿತಗೊಳಿಸಿದ್ದೇವೆ. ಹಣವನ್ನು ಮಹಾರಾಷ್ಟ್ರಕ್ಕೆ ರವಾನಿಸಲಾಗಿತ್ತು. ಹೀಗಾಗಿ ಪೊಲೀಸ್ ತಂಡಗಳನ್ನು ಲಖ್ನೌ ಹಾಗೂ ಮುಂಬೈಗಳಿಗೆ ರವಾನಿಸಲಾಗಿದೆ ಎಂದು ಡಿಐಜಿ ದೀಪಕ್ ಕುಮಾರ್ ತಿಳಿಸಿದ್ದಾರೆ.

ವಂಚನಾತ್ಮಕವಾಗಿ ಹಣ ಪಡೆದುಕೊಂಡವರು, ಖಾತೆಯಿಂದ 4 ಲಕ್ಷ ರೂ. ಬಿಡಿಸಿಕೊಂಡಿದ್ದಾರೆ. ಎರಡು ಲಕ್ಷ ರೂ. ಇನ್ನೂ ಖಾತೆಯಲ್ಲಿದೆ ಎಂದವರು ತಿಳಿಸಿದ್ದಾರೆ. ಸೆಪ್ಟೆಂಬರ್ 1ರಂದು ಎಸ್.ಬಿ.ಐ. ಖಾತೆಯಿಂದ ಮೊದಲ ಚೆಕ್ ಬಳಸಿ 2.5 ಕ್ಷ ರೂ.ಹಾಗೂ ಸೆಪ್ಟೆಂಬರ್ 8ರಂದು 3.5 ಲಕ್ಷ ರೂ. ಬಿಡಿಸಿಕೊಳ್ಳಲಾಗಿತ್ತು ಎಂದು ಎಫ್.ಐ.ಆರ್.ನಲ್ಲಿ ತಿಳಿಸಲಾಗಿದೆ.

ಮೂರನೇ ನಕಲಿ ಚೆಕ್‌ನಲ್ಲಿ 9.86 ಲಕ್ಷ ರೂ. ಬಿಡಿಸಿಕೊಳ್ಳುವ ಯತ್ನ ನಡೆಸಲಾಗಿತ್ತು. ಚೆಕ್‌ಗೆ ಹಣ ನೀಡುವ ಬಗ್ಗೆ ಲಖ್ನೌದ ಎಸ್.ಬಿ.ಐ.ನ ಹಿರಿಯ ಅಧಿಕಾರಿಯೊಬ್ಬರು ರಾಯ್ ಅವರನ್ನು ಸಂಪರ್ಕಿಸಿದ್ದರು. ಆಗ ವಂಚನೆ ಬೆಳಕಿಗೆ ಬಂದಿದೆ.

ದೊಡ್ಡ ಮೊತ್ತದ ಚೆಕ್‌ಗಳಿಗೆ ಹಣ ನೀಡುವಾಗ ನಾವು ಗ್ರಾಹಕರಿಂದ ಖಚಿತಪಡಿಸಿಕೊಳ್ಳುತ್ತೇವೆ. ಈ ಸಂದರ್ಭದಲ್ಲಿ ವಂಚನೆ ಬೆಳಕಿಗೆ ಬಂದಿದೆ. ಮೊದಲಿನ ಎರಡು ಚೆಕ್‌ಗಳ ಸಂದರ್ಭದಲ್ಲೂ ಕರೆ ಮಾಡಿದ್ದೆವು ಎಂಬ ನಂಬಿಕೆ ಇದೆ. ಗ್ರಾಹಕರು ಕರೆ ಸ್ವೀಕರಿಸಿದ್ದರೇ ಎಂಬ ಬಗ್ಗೆ ಪರಿಶೀಲಿಸುತ್ತಿದ್ದೇವೆ ಎಂದು ಎಸ್.ಬಿ.ಐ. ಚೆಕ್ ವಿಲೇವಾರಿ ವಿಭಾಗದ ಉಪ ವ್ಯವಸ್ಥಾಪಕಿ ಮೋನಾ ರಸ್ತೋಗಿ ತಿಳಿಸಿದ್ದಾರೆ.

error: Content is protected !!