ಪ್ಲಾಸ್ಟಿಕ್-ಸಿಮೆಂಟ್ ಕಾರ್ಖಾನೆಗಳಿಗೆ ಕಸ ವಿಲೇವಾರಿ ಮಾಡಲು ಸೂಚನೆ

ಪ್ಲಾಸ್ಟಿಕ್-ಸಿಮೆಂಟ್ ಕಾರ್ಖಾನೆಗಳಿಗೆ ಕಸ ವಿಲೇವಾರಿ ಮಾಡಲು ಸೂಚನೆ - Janathavaniದಾವಣಗೆರೆ, ಸೆ. 10 – ಪ್ಲಾಸ್ಟಿಕ್ ತ್ಯಾಜ್ಯವನ್ನು ಸಿಮೆಂಟ್ ಕಂಪನಿಗಳಿಗೆ ರವಾನಿಸುವ ಮೂಲಕ ಹಾಗೂ ಹಸಿ ಕಸವನ್ನು ಸಾವಯವ ಗೊಬ್ಬರವಾಗಿ ಪರಿವರ್ತಿಸುವ ಮೂಲಕ ವಿಲೇವಾರಿ ಮಾಡುವಂತೆ ತೋಟಗಾರಿಕೆ, ರೇಷ್ಮೆ ಹಾಗೂ ಪೌರಾಡಳಿತ ಸಚಿವ ನಾರಾಯಣ ಗೌಡ ತಿಳಿಸಿದ್ದಾರೆ.

ಇಲ್ಲಿನ ಜಿಲ್ಲಾಡಳಿತ ಭವನದ ತುಂಗಭದ್ರಾ ಸಭಾಂಗಣದಲ್ಲಿ ಇಂದು ಕರೆಯಲಾಗಿದ್ದ ತಮ್ಮ ಇಲಾಖೆಗಳ ಪ್ರಗತಿ ಪರಿಶೀಲನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದ ಅವರು, ಪ್ಲಾಸ್ಟಿಕ್ ಅನ್ನು ಸಿಮೆಂಟ್ ಕಂಪನಿಗಳಿಗೆ ರವಾನಿಸಲಾಗು ತ್ತಿದೆ ಎಂದು ತಮಗೆ ವರದಿ ಕಳಿಸಲಾಗಿದೆ. ಆದರೆ, ಇಲ್ಲಿನ ಯಾವುದೇ ಪ್ಲಾಸ್ಟಿಕ್ ಕಂಪನಿ ಗಳಿಗೆ ಹೋಗಿಲ್ಲ. ಈ ಬಗ್ಗೆ ಸುಳ್ಳು ವರದಿ ಕಳಿಸಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ನಗರದಲ್ಲಿ 450 ಟನ್ ಪ್ಲಾಸ್ಟಿಕ್ ಕಸ ವಿಲೇವಾರಿ ತಾಣದಲ್ಲಿದೆ ಎಂದು ನಗರಾಭಿವೃದ್ಧಿ ಕೋಶದ ಯೋಜನಾಧಿಕಾರಿ ನಜ್ಮಾ ತಿಳಿಸಿದರು. ಹರಿಹರ ಸೇರಿದಂತೆ ಹಲವೆಡೆ ಇರುವ ಪ್ಲಾಸ್ಟಿಕ್ ಬಗ್ಗೆ ಮಾಹಿತಿ ಪಡೆದ ನಾರಾಯಣ ಗೌಡ, ಪ್ಲಾಸ್ಟಿಕ್ ಎಷ್ಟು ದಿನ ಸಂಗ್ರಹಿಸಲು ಸಾಧ್ಯ? ನೀವೇ ಕಂಪನಿಯನ್ನು ಸಂಪರ್ಕಿಸಿ ರವಾನಿಸಬೇಕು ಎಂದು ತಾಕೀತು ಮಾಡಿದರು.

ಕಂದಾಯ ಕ್ರಮ : ಕುಡಿಯುವ ನೀರು, ಮಳಿಗೆ ಬಾಡಿಗೆ ಹಾಗೂ ಅಂಗಡಿ ಗಳ ಶುಲ್ಕಗಳು 10-15 ವರ್ಷಗಳಿಂದ ಬಾಕಿ ಇದೆ. ಸಂಗ್ರಹ ಮಾಡದ ಕಂದಾಯ ಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು. ಕಂದಾಯ ಪಾವತಿಸದವರ ವಿದ್ಯುತ್ ಹಾಗೂ ನೀರಿನ ಸಂಪರ್ಕ ಕಡಿತಗೊಳಿಸಿ ಎಂದು ಸಚಿವರು ತಿಳಿಸಿದರು.

ಖಾತೆಗೆ ವರದಿ : ರಾಜ್ಯಾದ್ಯಂತ ನಗರಾಭಿವೃದ್ಧಿ ಪ್ರಾಧಿಕಾರಗಳ ಹೊರತಾದ ಬಡಾವಣೆಗಳಿಗೆ ಡೋರ್ ನಂಬರ್ ನೀಡಿಲ್ಲ. ಈ ಸಮಸ್ಯೆಯ ಬಗ್ಗೆ ಜಿಲ್ಲಾಧಿಕಾರಿಗಳ ಮೂಲಕ ವರದಿ ಕಳಿಸಬೇಕು. ಡೋರ್ ನಂಬರ್‌ಗಾಗಿ ಕ್ರಮ ತೆಗೆದುಕೊಳ್ಳಲಾಗುತ್ತಿದೆ ಎಂದವರು ಇದೇ ಸಂದರ್ಭದಲ್ಲಿ ಹೇಳಿದರು.

ಸಭೆಯಲ್ಲಿ ಹರಿಹರ ಶಾಸಕ ರಾಮಪ್ಪ, ಅಪರ ಜಿಲ್ಲಾಧಿಕಾರಿ ಪೂಜಾರ್ ವೀರಮಲ್ಲಪ್ಪ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರಾದ ನಜ್ಮಾ, ಜಿ.ಪಂ. ಉಪ ಕಾರ್ಯದರ್ಶಿ ಆನಂದ್, ರೇಷ್ಮೆ ಇಲಾಖೆ ಉಪ ನಿರ್ದೇಶಕರಾದ ನಿರ್ಮಲ, ರೇಷ್ಮೆ ಇಲಾಖೆ ಸಹಾಯಕ ನಿರ್ದೇಶಕ ಶ್ರೀಹರ್ಷ ಮತ್ತಿತರರು ಉಪಸ್ಥಿತರಿದ್ದರು.

error: Content is protected !!