ದಾವಣಗೆರೆ, ಸೆ.9- ವೆಂಟಿಲೇಟರ್ ಕೊರತೆ ಯಿಂದ ಸಾವುಗಳ ಸಂಖ್ಯೆ ಹೆಚ್ಚಳವಾಗಿದ್ದು, ರಾಜ್ಯ ಸರ್ಕಾರ ಈ ಕುರಿತು ಮೌನವಹಿಸಿದೆ. ಕೋವಿಡ್ ನಿಂದ ಮೃತಪಟ್ಟವರ ಕುಟುಂಬಕ್ಕೆ 10 ಲಕ್ಷ ರೂ. ಪರಿಹಾರ ನೀಡುವಂತೆ ಪಾಲಿಕೆ ವಿಪಕ್ಷ ನಾಯಕ ಎ. ನಾಗರಾಜ್ ಸರ್ಕಾರವನ್ನು ಆಗ್ರಹಿಸಿದ್ದಾರೆ.
ಸಿಜಿ ಆಸ್ಪತ್ರೆಯಲ್ಲಿ ವೆಂಟಿಲೇಟರ್‌ಗಳು ಇದ್ದರೂ ಕೂಡ ಅದನ್ನು ಉಪಯೋಗಿಸಲು ಸಿಬ್ಬಂದಿ ಕೊರತೆಯಿಂದಾಗಿ ಸಾಧ್ಯವಾಗಿಲ್ಲ. ಕಾಂಗ್ರೆಸ್ ಪಾಲಿಕೆ ಸದಸ್ಯರ ನಿಯೋಗದೊಂದಿಗೆ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರೂ, ಇಲ್ಲಿಯವರೆಗೆ ಸಿಬ್ಬಂದಿ ನೇಮಕ ಮಾಡಿಕೊಳ್ಳದೆ ವಿಳಂಬ ಧೋರಣೆಯಿಂದಾಗಿ ಪ್ರತಿದಿನ ಸಾವುಗಳ ಸಂಖ್ಯೆ ಹೆಚ್ಚಳವಾಗುತ್ತಿದೆ.
ವಿನೋಬ ನಗರದಲ್ಲಿಯೇ ಒಂದೇ ದಿನ ವೆಂಟಿಲೇಟರ್ ಕೊರತೆಯಿಂದಾಗಿ 3 ಕೋವಿಡ್ ರೋಗಿಗಳು ಸಾವನ್ನಪ್ಪಿದ್ದಾರೆ. ವೆಂಟಿಲೇಟರ್ ನಿರ್ವಹಣೆಗೆ ಸಿಬ್ಬಂದಿ ಇಲ್ಲದಿರುವುದು, ಆಕ್ಸಿಜನ್ ನೀಡಲು ಸಾಧ್ಯವಾಗದೇ ಇರುವುದಕ್ಕೆ ರೋಗಿಗಳು ಹೊಣೆಯೇ ಎಂದು ನಾಗರಾಜ್ ಪ್ರಶ್ನಿಸಿದ್ದಾರೆ.
ಬಡವರು ಮತ್ತು ಮಧ್ಯಮ ವರ್ಗದವರಿಗೆ ಆಸ್ಪತ್ರೆಗಳಲ್ಲಿ ಬೆಡ್ ಸಿಗದೆ ಪರದಾಡುತ್ತಿದ್ದಾರೆ. ಕುಟುಂಬಕ್ಕೆ ಆಧಾರಸ್ತಂಭಗಳಾದಂತಹ ವ್ಯಕ್ತಿಗಳೇ ಕೋವಿಡ್‌ನಿಂದ ಸಾವನ್ನಪ್ಪುತ್ತಿದ್ದು, ಆ ಕುಟುಂಬಗಳ ನಿರ್ವಹಣೆಯೇ ಕಷ್ಟವಾಗಿದೆ. ಸರ್ಕಾರ ಶೀಘ್ರದಲ್ಲಿಯೇ ಸಿಬ್ಬಂದಿ ನೇಮಕ ಮಾಡಿ ರೋಗಿಗಗಳ ಜೀವ ಕಾಪಾಡಬೇಕು. ಹಾಗೂ ಕೋವಿಡ್‌ನಿಂದ ಸಾವನ್ನಪ್ಪಿದ ಕುಟುಂಬಕ್ಕೆ 10 ಲಕ್ಷ ರೂಪಾಯಿ ಪರಿಹಾರ ನೀಡಬೇಕು ಎಂದು ಆಗ್ರಹಿಸಿದ್ದಾರೆ.