ಕಠಿಣ ಪರಿಶ್ರಮ ಇದ್ದವರಿಂದಲೂ ಸಾಧನೆ ಸಾಧ್ಯ

ಕಠಿಣ ಪರಿಶ್ರಮ ಇದ್ದವರಿಂದಲೂ ಸಾಧನೆ ಸಾಧ್ಯ - Janathavani

ಶ್ರೇಷ್ಠ ಶಿಕ್ಷಕ – ಪ್ರತಿಭಾ ಪುರಸ್ಕಾರದಲ್ಲಿ ಶ್ರೀ ಸ್ವಾಮಿ ತ್ಯಾಗೀಶ್ವರಾನಂದ ಜೀ ಪ್ರತಿಪಾದನೆ

ದಾವಣಗೆರೆ, ಸೆ.8- ದುಡ್ಡಿದ್ದವರಷ್ಟೇ ಸಾಧನೆ ಮಾಡಬಹುದೆಂಬ ಮಾತು ಪ್ರಸ್ತುತ ಸುಳ್ಳಾಗಿದೆ. ಪ್ರತಿಭೆ ಮತ್ತು ಕಠಿಣ ಪರಿಶ್ರಮ ಇದ್ದವರಿಂದಲೂ ಸಾಧನೆ ಸಾಧ್ಯ. ಇದಕ್ಕೆ ಬಡ ಪ್ರತಿಭಾನ್ವಿತ ಮಕ್ಕಳ ಶೈಕ್ಷಣಿಕ ಸಾಧನೆಯೇ ಸಾಕ್ಷಿಯಾಗಿದೆ ಎಂದು ನಗರದ ರಾಮಕೃಷ್ಣ ಆಶ್ರಯದ ಅಧ್ಯಕ್ಷರಾದ ಶ್ರೀ ಸ್ವಾಮಿ ತ್ಯಾಗೀಶ್ವ ರಾನಂದ ಜೀ ಮಹಾರಾಜ್ ತಿಳಿಸಿದರು.

ಸ್ಥಳೀಯ ರಾಷ್ಟ್ರೋತ್ಥಾನ ಶಾಲೆಯಲ್ಲಿ ಜಿಲ್ಲಾ ಖಾಸಗಿ ಶಾಲೆಗಳ ಆಡಳಿತ ಮಂಡಳಿಗಳ ಒಕ್ಕೂಟದ ವತಿಯಿಂದ ಶಿಕ್ಷಕರ ದಿನಾಚರಣೆ ಪ್ರಯುಕ್ತ ಶ್ರೇಷ್ಠ ಶಿಕ್ಷಕ ಮತ್ತು ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಸಾನ್ನಿಧ್ಯ ವಹಿಸಿ ಶ್ರೀಗಳು ಆಶೀರ್ವಚನ ನೀಡಿದರು.

ಪ್ರತಿಭೆ ಹಾಗೂ ಪ್ರತಿಭಾವಂತಿಕೆಗೆ ಯಾವುದೇ ಜಾತಿ-ಮತ, ಬಡತನ, ಸಿರಿವಂತಿಕೆ ಅಡ್ಡಿ ‌ಬರುವುದಿಲ್ಲ. ಅದನ್ನು ನಾವಾಗಿಯೇ ಅಡ್ಡಿಯಾಗಿಸಿಕೊಳ್ಳಬಾರದು. ನಮ್ಮಲ್ಲಿರುವ ಸುಪ್ತ ಪ್ರತಿಭೆಗಳನ್ನು ಸೂಕ್ತ ವೇದಿಕೆಯಲ್ಲಿ ಅನಾವರಣಗೊಳಿಸಬೇಕು. ಆಟೋ ಚಾಲಕ, ವಾಚ್ ಮೆನ್ ಮಕ್ಕಳೂ ಸಹ ಶೈಕ್ಷಣಿಕವಾಗಿ ಉನ್ನತ ಸಾಧನೆ ಮಾಡಿರುವುದು ನಿಜಕ್ಕೂ ಹೆಮ್ಮೆಯ ಸಂಗತಿ. ಹೀಗೆ ಕಷ್ಟದ ನಡುವೆಯೂ ಪೋಷಕರು ತಮ್ಮ ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ಶ್ರಮಪಡುತ್ತಾರೆ. ಇದನ್ನು ಅರಿತು ಮಕ್ಕಳು ಶೈಕ್ಷಣಿಕವಾಗಿ ಅಷ್ಟೇ ಅಲ್ಲದೇ ತಮ್ಮ ಭವಿಷ್ಯವನ್ನು ‌ಉಜ್ವಲಗೊಳಿಸಿಕೊಳ್ಳಲು ಪರಿಶ್ರಮ ಇರಬೇಕು. ಆಗ ಸಾಧನೆಯ ಗುರಿ ತಲುಪಲು ಸಾಧ್ಯ ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ಕೇವಲ ಎಸ್ಸೆಸ್ಸೆಲ್ಸಿಯಲ್ಲಿ ಅತೀ ಹೆಚ್ಚು ಅಂಕ ಪಡೆದು ಪ್ರತಿಭಾನ್ವಿತರಾಗಿ ಹೊರಹೊಮ್ಮಿದರೆ ಸಾಲದು, ಇದೇ ನಿಮ್ಮ ಜೀವನದ ಸಾಧನೆ ಅಲ್ಲ. ಇದು ಸಾಧನೆಯ ಮೊದಲ ಹಂತ.‌ ಪ್ರತಿ ಹಂತದಲ್ಲೂ ಉನ್ನತ ಮಟ್ಟದಲ್ಲಿದ್ದರೆ ಭವಿಷ್ಯದಲ್ಲಿ ಗುರಿ ಸಾಧನೆ ಮಾಡಬಹುದು ಎಂದು ಕಿವಿಮಾತು ಹೇಳಿದರು.

ಜಿಲ್ಲಾ ಸಾರ್ವಜನಿಕ ಶಿಕ್ಷಣ ‌ಇಲಾಖೆಯ ಉಪನಿರ್ದೇಶಕ ಪಿ. ಪರಮೇಶ್ವರಪ್ಪ ಮಾತನಾಡಿ, ರಾಜ್ಯಕ್ಕೆ ಪ್ರಥಮ, ಕನ್ನಡದಲ್ಲಿ ಅತೀ ಹೆಚ್ಚು ಅಂಕ ಪಡೆದ ನಮ್ಮ‌ ಜಿಲ್ಲೆಯ ಪ್ರತಿಭಾವಂತ ಮಕ್ಕಳಿಂದ ಜಿಲ್ಲೆಗೂ ಹೆಮ್ಮೆ. ಇಂತಹ ಮಕ್ಕಳನ್ನು ಪ್ರೋತ್ಸಾಹಿಸುತ್ತಿರುವ ಈ ಒಕ್ಕೂಟಕ್ಕೆ ನಮ್ಮ ಇಲಾಖೆಯು ಸಹ ಸಹಕಾರ ನೀಡಲಿದೆ ಎಂದು ಹೇಳಿದರು.

ಡಯಟ್‌ ಸಂಸ್ಥೆಯ ಪ್ರಾಂಶುಪಾಲ ಹೆಚ್.ಕೆ. ಲಿಂಗರಾಜ್‌ ಮಾತನಾಡಿ, ರಾಜ್ಯಕ್ಕೆ ಪ್ರಥಮ, ಜಿಲ್ಲೆಗೆ ಪ್ರಥಮ, ದ್ವಿತೀಯ, ತೃತೀಯ ಸ್ಥಾನ ಪಡೆದ ಜಿಲ್ಲೆಯ ಮಕ್ಕಳ ಪ್ರತಿಭಾವಂತಿಕೆಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಈ ಒಕ್ಕೂಟವು ನೆರವು ನೀಡುತ್ತಿರುವುದು ಉತ್ತಮ ‌ಬೆಳವಣಿಗೆ. ಈ ನೆರವು ಮುಂದಿನ ದಿನಗಳಲ್ಲೂ ಮತ್ತಷ್ಟು ‌ನೆರವು ನೀಡಿ ಮಕ್ಕಳ ಉಜ್ವಲ‌ ಭವಿಷ್ಯಕ್ಕೆ ಸಾಕ್ಷಿಯಾಗಬೇಕೆಂದರು.

ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾ ಡಿದ ಒಕ್ಕೂಟದ ಅಧ್ಯಕ್ಷ ಟಿ.ಎಂ. ಉಮಾಪ ತಯ್ಯ,  ಬರುವ ದಿನಗಳಲ್ಲಿ ದಾನಿಗಳ ಸಹಕಾರ ದಲ್ಲಿ‌ ಉನ್ನತ ಶಿಕ್ಷಣಕ್ಕೆ ನೆರವು ನೀಡಲಾಗುವುದು ಎಂದು ಹೇಳಿದರು. ದೇಶಕ್ಕೆ ವಿಜ್ಞಾನಿಗಳ ಕೊರತೆ ಇದೆ. ಕೇವಲ ಡಾಕ್ಟರ್, ಇಂಜಿನಿಯರ್ ಗಳಾ ದರೆ ಸಾಲದು, ನಿಮ್ಮಲ್ಲೂ ಶಕ್ತಿ, ಸಾಮರ್ಥ್ಯವಿದ್ದು, ವಿಜ್ಞಾನಿಗಳಾಗುವಂತೆ ವಿದ್ಯಾರ್ಥಿಗಳಿಗೆ ಕರೆ ನೀಡಿದರು. ಇದೇ ವೇಳೆ ತಾಲ್ಲೂಕು ಕನ್ನಡ ಸಾಹಿತ್ಯ ‌ಪರಿಷತ್ತಿನ ಅಧ್ಯಕ್ಷರೂ ಆದ ನಿವೃತ್ತ ಶಿಕ್ಷಕ ಬಿ. ವಾಮದೇವಪ್ಪ‌‌ ಹಾಗೂ ಸುಮಾ ಕುಲಕರ್ಣಿ ಅವರುಗಳಿಗೆ ಶ್ರೇಷ್ಠ ಶಿಕ್ಷಕರು ಎಂಬ ಪ್ರಶಸ್ತಿ ನೀಡಿ, ಗುರು ವಂದನೆ ಸಲ್ಲಿಸಿ ಗೌರವಿಸಲಾಯಿತು. 

ಎಸ್ಎಸ್ಎಲ್ಸಿಯಲ್ಲಿ ಅತೀ ಹೆಚ್ಚು ‌ಅಂಕ‌‌ ಪಡೆದ ಪ್ರತಿಭಾನ್ವಿತ ವಿದ್ಯಾರ್ಥಿಗಳಾದ ಡಿ.ಕೆ. ಅಮಿತ್, ಎಸ್.ಆರ್. ಸಂಜನಾ, ಎಸ್. ಸಂಹಿತಾ, ಎಸ್. ಜ್ಞಾನಶ್ರೀ, ಎಚ್.ಎಸ್. ನಿತ್ಯಶ್ರೀ, ಆರ್. ಆಕಾಶ್, ಬಿ. ಕೀರ್ತನ್, ಎಂ. ಅಭಿಷೇಕ್, ಆರ್. ದಿವ್ಯತೇಜ, ಲಕ್ಷ್ಮಿ, ಮುಕ್ರಿ ಶ್ರೀ ಭರಣಿ, ಎಚ್.ಎಸ್. ಧೀರಜ್, ವಿ. ಕಿರಣ್, ಲೋಚನಾ, ಅನಂ ಮಲ್ಲಿಕಾ ಅವರುಗಳನ್ನು ಪುರಸ್ಕರಿಸಿ ಪ್ರೋತ್ಸಾಹಿಸಲಾಯಿತು.

ಒಕ್ಕೂಟದ ನಿರ್ದೇಶಕ ಹೆಚ್. ಜಯಣ್ಣ ಪ್ರಾಸ್ತಾವಿಕವಾಗಿ ಮಾತನಾಡಿದರು. 

ಕಾರ್ಯಕ್ರಮದಲ್ಲಿ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಸಿ. ಶ್ರೀರಾಮಮೂರ್ತಿ, ಖಜಾಂಚಿ ವಿಜಯ್ ರಾಜ್, ಉಪಾಧ್ಯಕ್ಷರು ಗಳಾದ ಆರ್.ಎಲ್. ಪ್ರಭಾಕರ್‌, ಎಂ.ಎಸ್. ಸಂತೋಷ್ ಕುಮಾರ್, ಸಹ ಕಾರ್ಯದರ್ಶಿ ಗಳಾದ ಎಸ್.ಕೆ. ಮಂಜುನಾಥ, ಎ.ಎನ್. ಪ್ರಸನ್ನ ಕುಮಾರ್, ಸಂಘಟನಾ ಕಾರ್ಯದರ್ಶಿ ಕೆ.ಸಿ. ಮಂಜು, ನಿರ್ದೇಶಕರುಗಳಾದ ನಾಗರಾಜ ಶೆಟ್ಟಿ, ಹೆಚ್.ಜೆ. ಮೈನುದ್ದೀನ್, ಕೆ. ಸುರೇಶ್‌ ಸೇರಿದಂತೆ ಇತರರು ಇದ್ದರು. 

ಎಮ್. ಅಶೋಕ್ ಪ್ರಾರ್ಥಿಸಿದರು. ಸಹನಾ ರವಿ ಸ್ವಾಗತಿಸಿದರು. ವಿಜಯ್ ಕುಮಾರ್ ನಿರೂಪಿಸಿದರು. ಬಿ. ಶಶಿಧರ್ ವಂದಿಸಿದರು.

error: Content is protected !!