ಡ್ರಗ್ಸ್ ದಂಧೆ: ದೇಶದ್ರೋಹ ಪ್ರಕರಣ ದಾಖಲಿಸಲು ಎಬಿವಿಪಿ ಆಗ್ರಹ

ದಾವಣಗೆರೆ, ಸೆ.3- ಡ್ರಗ್ಸ್ ದಂಧೆಯಲ್ಲಿ ತೊಡಗಿ ರುವವರ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲಿಸ ಬೇಕೆಂದು ಆಗ್ರಹಿಸಿ  ಎಬಿವಿಪಿ ಕಾರ್ಯಕರ್ತರು ನಗರದಲ್ಲಿ ಇಂದು ಪ್ರತಿಭಟನೆ ನಡೆಸಿ ತಹಶೀಲ್ದಾರರ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಸ್ಯಾಂಡಲ್‍ವುಡ್‍ನೊಂದಿಗೆ ನಂಟಿರುವ ಬೃಹತ್ ಡ್ರಗ್ಸ್ ಜಾಲವನ್ನು ಎನ್‍ಸಿಬಿ ಅಧಿಕಾರಿಗಳು ಭೇದಿಸಿರುವ ಬಗ್ಗೆ ಮತ್ತು ಡ್ರಗ್ಸ್ ಜಾಲದ ಹಿಂದೆ ಸಮಾಜದಲ್ಲಿ ಇರುವಂಥ ಪ್ರತಿಷ್ಠಿತ ಪ್ರಭಾವಿ ಶ್ರೀಮಂತ ಕುಟುಂಬಗಳ ವ್ಯಕ್ತಿಗಳು, ಸಿನಿಮಾ ನಟ-ನಟಿಯರು, ರಾಜಕಾರಣಿಗಳ ಮಕ್ಕಳು ಇರುವ ಮಾಹಿತಿಗಳು ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದೆ. ಸಮಾಜಕ್ಕೆ ಮಾದರಿ ಆಗಬೇಕಾದವರೆಲ್ಲ ಇಂತಹ ಚಟಗಳಿಗೆ ಅಂಟಿಕೊಂಡಿರುವುದು ನಿಜಕ್ಕೂ ಬೇಸರದ ಸಂಗತಿಯಾಗಿದೆ ಎಂದು ಪ್ರತಿಭಟನಾಕಾರರು ಅಸಮಾಧಾನ ವ್ಯಕ್ತಪಡಿಸಿದರು.

ಇತ್ತೀಚಿಗೆ ಪೊಲೀಸರ ತನಿಖೆಯಲ್ಲಿ ಬೆಚ್ಚಿ ಬೀಳಿಸುವ ಹಲವು ಮಾಹಿತಿಗಳು ಹೊರಬಿದ್ದ ವಿಷಯ ಮತ್ತು ಶಾಲಾ-ಕಾಲೇಜು ವಿದ್ಯಾರ್ಥಿಗಳು, ಯುವಕರು ಮಾದಕ ವ್ಯಸನ ಜಾಲದ ಗ್ರಾಹಕರಾಗಿದ್ದಾರೆ ಎಂಬ ಆಘಾತಕಾರಿ ಅಂಶಗಳು ವಿಷಾದನೀಯ. ಬೆಂಗಳೂರಿನ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪೊಲೀಸ್ ಇಲಾಖೆ ತನಿಖೆಯನ್ನು ಮತ್ತಷ್ಟು ಚುರುಕುಗೊಳಿಸಬೇಕಾಗಿದೆ ಮತ್ತು ಈ ಜಾಲದಲ್ಲಿ ಪ್ರಭಾವಿಗಳ ಹಸ್ತಕ್ಷೇಪ ಇರುವುದರಿಂದ ಯಾವುದೇ ಒತ್ತಡಕ್ಕೆ ಮಣಿಯದೆ ಗೃಹ ಇಲಾಖೆ ಪೊಲೀಸ್ ಇಲಾಖೆಗೆ ಸಂಪೂರ್ಣ ಸ್ವಾತಂತ್ರ ನೀಡಬೇಕು ಎಂದು ಮನವಿ ಮಾಡಿದರು.

ಈ ವೇಳೆ ರಾಜ್ಯ ಕಾರ್ಯ ಸಮಿತಿ ಸದಸ್ಯರಾದ ಭವ್ಯಶ್ರೀ, ನಗರ ಕಾರ್ಯದರ್ಶಿ ಇಟಗಿ  ಆಕಾಶ್, ಕಾರ್ಯಕರ್ತರಾದ  ಗಗನ್, ಅಮಿತ್, ಕಾರ್ತಿಕ್, ಸೃಜನ್ ಸೇರಿದಂತೆ ಇತರರು ಇದ್ದರು.

error: Content is protected !!