ಮೆಕ್ಕೆಜೋಳ ಖರೀದಿ ಕೇಂದ್ರ ಪ್ರಾರಂಭಕ್ಕೆ ಆಗ್ರಹ

ದಾವಣಗೆರೆ, ಸೆ.3- ಸೆಪ್ಟೆಂಬರ್ ತಿಂಗಳ ಅಂತ್ಯದೊಳಗೆ ಜಿಲ್ಲೆಯಲ್ಲಿ ಬೆಂಬಲ ಬೆಲೆಯಡಿ ಮೆಕ್ಕೆಜೋಳ ಖರೀದಿ ಕೇಂದ್ರ ಪ್ರಾರಂಭಿಸುವಂತೆ ಆಗ್ರಹಿಸಿ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ನೇತೃತ್ವದಲ್ಲಿ ನಗರದಲ್ಲಿ ಇಂದು ಜಿಲ್ಲಾಧಿಕಾರಿಗಳ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.

ಜಿಲ್ಲೆಯಲ್ಲಿ ಈ ವರ್ಷ ಸುಮಾರು 1.25 ಲಕ್ಷ ಹೆಕ್ಟೇರ್ ನಿಂದ 1.30 ಲಕ್ಷ ಹೆಕ್ಟೇರ್ ಮೆಕ್ಕೆಜೋಳ ಬಿತ್ತನೆ ಮಾಡಲಾಗಿದೆ. ಪ್ರತಿ ಎಕರೆಗೆ 25 ರಿಂದ 30 ಕ್ವಿಂಟಾಲ್ ಇಳುವರಿ ನಿರೀಕ್ಷಿಸಲಾಗಿದೆ. ಈ ಬೃಹತ್ ಪ್ರದೇಶದಲ್ಲಿ ಈ ಮುಂಗಾರು ಹಂಗಾಮಿನಲ್ಲಿ ಒಟ್ಟಾರೆ 2 ಲಕ್ಷ ಮೆಟ್ರಿಕ್ ಟನ್ ಇಳುವರಿ ಬರುವ ಸಾಧ್ಯತೆ ಇದೆ. ಈಗಾಗಲೇ ನೀರಾವರಿ ಪ್ರದೇಶಗಳಲ್ಲಿ ಬೆಳೆದಿರುವ ಮೆಕ್ಕೆಜೋಳ ಮಾರುಕಟ್ಟೆಗೆ ಬರಲು ಆರಂಭಿಸಿದ್ದು, ಪ್ರತಿ ಕ್ವಿಂಟಾಲ್ ಜೋಳ ಕೇವಲ 840 ರೂ.ಗೆ ಮಾರಾಟವಾಗುತ್ತಿದೆ ಎಂದು ಸಂಘದ ರಾಜ್ಯ ಕಾರ್ಯದರ್ಶಿ ಬಲ್ಲೂರು ರವಿಕುಮಾರ್ ತಿಳಿಸಿದ್ದಾರೆ.

ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಕೃಷಿ ಬೆಲೆ ಆಯೋಗ 1 ಕ್ವಿಂಟಾಲ್ ಮೆಕ್ಕೆಜೋಳ ಬೆಳೆಯಲು 2100 ರೂ. ವೆಚ್ಚ ಬರುತ್ತದೆ ಎಂದು ಹೇಳಿದೆ. ಆದರೆ ಸರ್ಕಾರಗಳು 1740 ರಿಂದ 1780 ರೂಪಾಯಿ ಒಳಗೆ ಖರೀದಿ ಮಾಡಬಾರದೆಂದು ಹೇಳುತ್ತಿವೆ. ಆದರೆ ಮಾರುಕಟ್ಟೆಯಲ್ಲಿ ಕೇವಲ 840 ರಿಂದ 900 ರೂ.ಗೆ ಮಾತ್ರ ಖರೀದಿ ಮಾಡಲಾಗುತ್ತದೆ. ಇದರಿಂದ ರೈತನಿಗೆ ಪ್ರತಿ ಕ್ವಿಂಟಾಲ್‌ಗೆ 880 ರೂ. ನಷ್ಟವಾಗುತ್ತಿದೆ ಎಂದು ಸರ್ಕಾರದ ಗಮನ ಸೆಳೆಯಲಾಗಿದೆ.

ಈ ಎಲ್ಲ ಅಂಶಗಳನ್ನು ಗಮನಿಸಿ ರಾಜ್ಯ ಸರ್ಕಾರ ಕೂಡಲೇ ಟಾಸ್ಕ್ ಪೋರ್ಸ್ ಕಮಿಟಿ ಸಭೆ ಕರೆದು ತೀರ್ಮಾನಿಸಿ ಆವರ್ತ ನಿಧಿಯೊಂದಿಗೆ ಸೆಪ್ಟಂಬರ್ 30ರೊಳಗೆ ಜಿಲ್ಲೆಯಲ್ಲಿ ಖರೀದಿ ಕೇಂದ್ರ ಆರಂಭಿಸಬೇಕು. ಇಲ್ಲವಾದಲ್ಲಿ ಅಕ್ಟೋಬರ್ 1ರಿಂದ ಅನಿರ್ದಿಷ್ಟ ಧರಣಿ ನಡೆಸಲಾಗುವುದು. ಈ ಸಂಬಂಧ ಪ್ರತಿ ಹಳ್ಳಿ ಹಳ್ಳಿಗೆ ತೆರಳಿ ಧರಣಿ ವಿಚಾರ ಟಾಂ ಟಾಂ ಹಾಕಲಾಗುವುದು ಎಂದು ಎಚ್ಚರಿಸಿದ್ದಾರೆ.

ಈ ಸಂದರ್ಭದಲ್ಲಿ ಜಿಲ್ಲಾ ಉಪಾಧ್ಯಕ್ಷ ಪಾಮೇನಹಳ್ಳಿ ಲಿಂಗರಾಜ್, ಹಿರಿಯ ಉಪಾಧ್ಯಕ್ಷ ಆವರಗೆರೆ ಬಸವರಾಜಪ್ಪ, ರಾಂಪುರ ಆರ್.ಜಿ.ಬಸವರಾಜ್, ಮಾಯಕೊಂಡದ ನಿಂಗಣ್ಣ, ನಾಗರಕಟ್ಟೆ ಜಯಾನಾಯ್ಕ, ಅಶೋಕ್, ಬಲ್ಲೂರು ಪರಶುರಾಮರೆಡ್ಡಿ, ಆಲೂರು ಆರ್. ಪರಮೇಶ್ವರಪ್ಪ, ಕುಕ್ಕುವಾಡ ಬಸವನಗೌಡ, ಬಲ್ಲೂರು ಅಣ್ಣಪ್ಪ, ಆವರಗೆರೆ ಜಯ್ಯಪ್ಪ, ಆಲೂರು ಬಿ.ಜಿ. ಮಂಜಪ್ಪ ಉಪಸ್ಥಿತರಿದ್ದರು.

error: Content is protected !!