ಸಾಣೇಹಳ್ಳಿ, ಆ.25- ಜೈನರಲ್ಲಿ ಸಾಮೂಹಿಕವಾಗಿ ಅಹಿಂಸಾತತ್ವಕ್ಕೆ ಅಷ್ಟು ಒತ್ತು ಕೊಡದಿದ್ದರೂ ವ್ಯಕ್ತಿ ಮಟ್ಟದಲ್ಲಿ ಅಹಿಂಸಾ ತತ್ವವನ್ನು ಒಂದು ವ್ರತವಾಗಿ ಸ್ವೀಕರಿಸುವರು. ಶರಣರ ಅಹಿಂಸಾ ತತ್ವ ವೈದಿಕರು, ಜೈನರಿಗಿಂತ ವಿಭಿನ್ನವಾದುದು. ವ್ಯಕ್ತಿ ತನಗೆ ತಾನೇ ಹಿಂಸೆ ಕೊಟ್ಟುಕೊಂಡು ಮೋಕ್ಷ ಸಂಪಾದನೆ ಪಡೆಯಬಹುದು ಎನ್ನುವ ನಂಬಿಕೆ ಜೈನರದು. ಹೀಗೆ ಬದುಕನ್ನು ನರಕ ಮಾಡಿಕೊಳ್ಳುವ ಅಗತ್ಯವಿಲ್ಲ ಎನ್ನುವುದು ಶರಣರ ಧೋರಣೆ. ಅದಕ್ಕಾಗಿಯೇ `ಇಲ್ಲಿ ಸಲ್ಲುವವರು ಅಲ್ಲಿಯೂ ಸಲ್ಲುವರು’ ಎಂದು ಬಸವಣ್ಣನವರು ಹೇಳಿದ್ದಾರೆ ಎಂದು ಸಾಣೇಹಳ್ಳಿ ಶ್ರೀ ಪಂಡಿತಾರಾಧ್ಯ ಸ್ವಾಮಿಗಳು ನುಡಿದರು.
ಇಲ್ಲಿನ ಶ್ರೀ ತರಳಬಾಳು ಜಗದ್ಗುರು ಶಾಖಾ ಸಾಣೇಹಳ್ಳಿ ಶ್ರೀಮಠದಿಂದ ಆಯೋಜನೆಗೊಂಡಿರುವ `ಮತ್ತೆ ಕಲ್ಯಾಣ ಅಂತರ್ಜಾಲ ಉಪನ್ಯಾಸ ಮಾಲಿಕೆ’ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ಶರಣರ ಅಹಿಂಸಾವಾದ ಕೇವಲ ಬಾಹ್ಯವಾಗಿ ಪ್ರಾಣಿ, ಪಕ್ಷಿಗಳನ್ನು ಕೊಲ್ಲುವುದಕ್ಕೆ ಮಾತ್ರ ಸೀಮಿತವಾಗದೆ, ಸಕಲ ಜೀವಾತ್ಮರ ಲೇಸ ಬಯಸುವುದು. ಹಿಂಸೆ ಪ್ರಾರಂಭವಾದುದೇ ವೈದಿಕ ಆಚರಣೆಗಳಿಂದ. ಅವರು ಯಜ್ಞ-ಯಾಗಗಳ ನೆಪದಲ್ಲಿ ಪ್ರಾಣಿ ಬಲಿ ಕೊಡುವುದು ಅಥವಾ ಕೊಡಿಸುತ್ತಿದ್ದರು. ವೈದಿಕರ ದೈಹಿಕ, ಮಾನಸಿಕ ಹಿಂಸಾ ಪ್ರವೃತ್ತಿಯನ್ನು ಮೊಟ್ಟಮೊದಲಿಗೆ ಪ್ರತಿಭಟಿಸಿದವರು ಬುದ್ಧ ಮತ್ತು ಮಹಾವೀರ. ಆ ಪರಂಪರೆ ಶರಣರಲ್ಲಿ ಇನ್ನೂ ಪರಿಣಾಮಕಾರಿಯಾಗಿ ಪ್ರತಿಬಿಂಬಿತವಾಗಿದೆ.
ಭೂಮಿಯ ಮೇಲೆ ಅರ್ಥಪೂರ್ಣವಾಗಿ ಬದುಕುವುದು ಹೇಗೆ ಎಂದು ತಿಳಿಯದೇ ಹೋದರೆ ಮತ್ತಾವ ಪಾರಮಾರ್ಥಿಕ ಬದುಕಿಗೂ ಅರ್ಥವಿಲ್ಲ ಎನ್ನುವ ಭಾವನೆ ಶರಣರದು. ಶರಣರ ಬದುಕು ಬುದ್ಧನ ತತ್ವಗಳಿಗೆ ಸಮೀಪವಿರುವುದನ್ನು ಗುರುತಿಸಬಹುದು. ಬುದ್ಧ `ಪ್ರಾಣಿ ಹತ್ಯೆ ಮಾಡಬಾರದು, ಕಳ್ಳತನ ಮಾಡಬಾರದು, ಸುಳ್ಳು ಹೇಳಬಾರದು, ಮಾದಕ ವಸ್ತುಗಳನ್ನು ಸೇವಿಸಬಾರದು, ಶೀಲವಂತರಾಗಿ ಬಾಳಬೇಕು’ ಎನ್ನುವ ಪಂಚಶೀಲಗಳನ್ನು ಹೇಳಿದರೆ, ಶರಣರು `ಕಳಬೇಡ, ಕೊಲಬೇಡ, ಹುಸಿಯ ನುಡಿಯಲು ಬೇಡ, ಮುನಿಯಬೇಡ, ಅನ್ಯರಿಗೆ ಅಸಹ್ಯ ಪಡಬೇಡ, ತನ್ನ ಬಣ್ಣಿಸಬೇಡ, ಇದಿರ ಹಳಿಯಲುಬೇಡ’ ಎನ್ನುವ ಸಪ್ತಶೀಲಗಳನ್ನು ಹೇಳಿದ್ದಾರೆ ಎಂದರು.
ಬುದ್ಧನ ಸಾಹಿತ್ಯವನ್ನು ಓದುವಾಗ ವಚನಕಾರರನ್ನೇ ಓದಿದಂತೆ ಭಾಸವಾಗುವುದು. ಒಳ್ಳೆಯ ಅಂಶಗಳು ಎಲ್ಲೇ ಇದ್ದರೂ ಅವುಗಳನ್ನು ಸ್ವೀಕಾರ ಮಾಡುವ ತೆರೆದ ಮನಸ್ಸು ಶರಣರದಾಗಿತ್ತು. ಬೌದ್ಧ, ಜೈನ ಧರ್ಮ ಎಷ್ಟೆಲ್ಲ ಅಹಿಂಸಾ ತತ್ವಗಳನ್ನು ಎತ್ತಿ ಹಿಡಿದರೂ ವೈದಿಕ ಧರ್ಮ ಕ್ರೌರ್ಯವನ್ನು ಬಿಡಲಿಲ್ಲ. ಬೌದ್ಧ ಮತ್ತು ಜೈನ ಧರ್ಮಗಳ ಪ್ರಭಾವದಿಂದಾಗಿ ಆ ತರದ ಹಿಂಸೆಯನ್ನು ವೈದಿಕರು ಸ್ವಲ್ಪ ಬದಲಾಯಿಸಿಕೊಂಡಂತೆ ಕಾಣುವುದು. ಆದರೆ ಮಾನಸಿಕ ಕ್ರೌರ್ಯ ಮತ್ತು ದೈಹಿಕ ಹಿಂಸೆಯನ್ನು ಬದಲಾಯಿಸಿಕೊಂಡದ್ದು ಕಾಣುವುದಿಲ್ಲ. ಅದಕ್ಕೆ ಸಾಕ್ಷಿ ವರ್ಣಾಶ್ರಮ ಧರ್ಮ ವ್ಯವಸ್ಥೆ. ಇದರ ವಿರುದ್ಧ ಶರಣರು ಧ್ವನಿ ಎತ್ತಿದ್ದು ವಿಶೇಷ. ಶರಣರ ಉದ್ದೇಶ ದೈಹಿಕ ಮತ್ತು ಮಾನಸಿಕ ಹಿಂಸೆಯನ್ನು ನಿವಾರಿಸಿ, ವ್ಯಕ್ತಿಗಳಲ್ಲಿ ಆತ್ಮವಿಶ್ವಾಸ ತುಂಬುವುದಾಗಿತ್ತು. ಅದಕ್ಕಾಗಿಯೇ ಬಸವಣ್ಣನವರು ದಯವಿಲ್ಲದ ಧರ್ಮವದಾವುದಯ್ಯಾ? ಎಂದು ಪ್ರಶ್ನಿಸಿದರು ಎಂದು ಹೇಳಿದರು.
ನಮ್ಮ ಮಠದ ಮೂಲಪುರುಷ ಮರುಳಸಿದ್ಧರು ಮನೆ ಬಿಟ್ಟದ್ದು ಪ್ರಾಣಿ ಹಿಂಸೆಯನ್ನು ತಪ್ಪಿಸುವ ಸಲುವಾಗಿಯೇ. ಬಾಲಕನಾಗಿದ್ದಾಗಲೇ ಉಜ್ಜಯಿನಿಯಲ್ಲಿ ದೇವತೆಯ ಸಂತೃಪ್ತಿಗಾಗಿ ಕುರಿ, ಕೋಳಿ, ಕೋಣಗಳ ಬಲಿಕೊಡುವ ಸಿದ್ಧತೆ ನಡೆದಿರುತ್ತದೆ. ಇದನ್ನು ಕಂಡ ಬಾಲಕನ ಕರುಳು ಹಿಂಡಿದಂತಾಗಿ ಜಗನ್ಮಾತೆ ತನ್ನ ಮಕ್ಕಳ ರಕ್ತ, ಮಾಂಸ ಬಯಸಲು ಸಾಧ್ಯವೇ ಎಂದು ಪ್ರತಿಭಟನೆ ಮಾಡುವನು. ದೇವರು, ಧರ್ಮದ ಮರೆಯಲ್ಲಿ ಪೂಜಾರಿ ಪುರೋಹಿತರು ಮಾಡಿರುವ ಕುತಂತ್ರವನ್ನು ಬಯಲುಗೊಳಿಸಿದರು. ಬರಗಾಲಕ್ಕೆ ಕಾರಣ ದೇವರ ಶಾಪವಲ್ಲ; ಮನುಷ್ಯ ಪ್ರಕೃತಿಯ ಮೇಲೆ ಎಸಗಿರುವ ಪಾಪ ಎಂದು ಮನದಟ್ಟು ಮಾಡಿದರು. ಇಂದು ಧರ್ಮ, ದೇವರ ಹೆಸರಿನಲ್ಲೇ ಎಲ್ಲೆಂದರಲ್ಲಿ ಸಾಮೂಹಿಕ ಪ್ರಾಣಿ ಹತ್ಯೆ ನಡೆಯುತ್ತಲೇ ಇದೆ. ಬುದ್ಧ, ಮರುಳಸಿದ್ಧ, ಬಸವಣ್ಣನ ಪರಂಪರೆ ತಮ್ಮದೆನ್ನುವ ಜನರು ಇನ್ನಾದರೂ ಅವರ ಸಂದೇಶಗಳನ್ನು ಅರಿತು ಹಿಂಸೆಯನ್ನು ತೊರೆಯುವ ಸಂಕಲ್ಪ ಮಾಡಿದರೆ ಈ ಮಾತುಗಳನ್ನು ಕೇಳಿದ್ದು ಸಾರ್ಥಕವೆನಿಸುತ್ತದೆ ಎಂದರು.
ಶರಣರ ಅಹಿಂಸಾವಾದ ಕುರಿತಂತೆ ದಾವಣಗೆರೆಯ ಪ್ರಾಧ್ಯಾಪಕ ಡಾ. ದಾದಾಪೀರ್ ನವಿಲೇಹಾಳ್ ಮಾತನಾಡಿ ಶರಣರು ಕಟ್ಟಿದ ಕಲ್ಯಾಣ 800 ವರ್ಷಗಳ ನಂತರವೂ ಆದರ್ಶವಾಗಿದೆ. ಕಾರಣ ಆ ನಾಡಿನ ಬೌದ್ಧಿಕ ಸ್ವರೂಪದಲ್ಲಿರುವ ಮೌಲ್ಯಗಳು. ಆ ಮೌಲ್ಯಗಳು ಮತ್ತೆ ಬೇಕು ಅನ್ನುವ ಕಾರಣಕ್ಕೆ `ಮತ್ತೆ ಕಲ್ಯಾಣ’ ಕಾರ್ಯಕ್ರಮ ನಡೆಯುತ್ತಿದೆ. ಕಲ್ಯಾಣ ಅಂದ್ರೆ ಬರಿ ಭೂಮಿ, ಮಣ್ಣು, ಗಡಿ-ಗೆರೆಗಳ ಭೌಗೋಳಿಕ ಸೀಮೆಯಲ್ಲ; ಅಲ್ಲಿ ಬದುಕಿರುವಂತಹ ಜೀವ ಸಂಪತ್ತಿನ ಮಾನ, ಮರ್ಯಾದೆ, ಮೌಲ್ಯಗಳು, ಆದರ್ಶ, ಯಾವ ರೀತಿಯ ಅಸಮಾನತೆಗಳೂ ಇಲ್ಲದಿರುವ ಸಮಾಜ ನಿರ್ಮಾಣದ ಕನಸು. ಕೊರೊನಾ ಮನುಷ್ಯ ಸಂಬಂಧವನ್ನು ಮತ್ತಷ್ಟು ಹದಗೆಡಿಸಿದೆ. ಸಾವಿಗೂ ಗೌರವ ಕೊಡಲಾಗದಂತಹ ಅಸಹಾಯಕತೆ ಜನರನ್ನು ಕಾಡುತ್ತಿದೆ. `ಮರಣವೇ ಮಹಾನವಮಿ’ ಎನ್ನುವ ಶರಣರ ಮಾತನ್ನು ಆಸ್ಪತ್ರೆಯವರು ಬೇರೆಯದೇ ರೀತಿಯಲ್ಲಿ ಸಂಭ್ರಮಿಸುವ ವಿಚಿತ್ರ ವಾತಾವರಣವಿದೆ. ಈ ಸಂದರ್ಭದಲ್ಲಿಯೂ ನಮ್ಮ ದೇಶದಲ್ಲಿ ಜಾತಿ-ಧರ್ಮದ ವಿಕಾರಗಳು ಮತ್ತೆ ಮತ್ತೆ ಹೊರಬರುತ್ತಿರುವುದು ದುರದೃಷ್ಟಕರ ಎಂದರು.
ಇಂಗ್ಲೆಂಡಿನ ಡಾ. ಆಶೋಕ್ ಎಸ್. ಕೂಲಂಬಿ ಸ್ವಾಗತಿಸಿದರು. ಹರಪನಹಳ್ಳಿ ತಾಲ್ಲೂಕು ಮೈದೂರಿನ ಉಷಾ ಮತ್ತು ಕೆ ಬಸವರಾಜ್ ಮತ್ತು ಬೆಂಗಳೂರಿನ ನಳಿನಾ ಮತ್ತು ಶಿವಕುಮಾರ್ ಚೀಳಂಗಿ ಹಾಗೂ ರಾಣೇಬೆನ್ನೂರು ತಾಲ್ಲೂಕು ಹೆಡಿಯಾಲದ ಪಾರ್ವತಮ್ಮ ದುಂಡೆಪ್ಪ ಮಾರೇರ ಕುಟುಂಬ ಇಂದಿನ ಕಾರ್ಯಕ್ರಮದ ದಾಸೋಹಿಗಳಾಗಿದ್ದರು.