ಸತ್ಪುರುಷರ ಆಚಾರ-ವಿಚಾರಗಳು ಸ್ಮರಣೆಗೆ ಸೀಮಿತವಾಗುತ್ತಿವೆ

ಶ್ರಾವಣದರ್ಶನದಲ್ಲಿ ಶ್ರೀ ಮುರುಘಾ ಶರಣರು

ಚಿತ್ರದುರ್ಗ, ಆ.7-ಸತ್ಪುರುಷರ ಆಚಾರ ವಿಚಾರಗಳು ಕೇವಲ ಸ್ಮರಣೆಗೆ ಸೀಮಿತವಾಗುತ್ತಿವೆ ಎಂದು ಚಿತ್ರದುರ್ಗ ಬೃಹಮನ್ಮಠದ ಡಾ. ಶ್ರೀ ಶಿವಮೂರ್ತಿ ಮುರುಘಾ ಶರಣರು ಕಳವಳ ವ್ಯಕ್ತಪಡಿಸಿದರು.

 ಮುರುಘಾಮಠದಿಂದ ಶ್ರಾವಣದರ್ಶನ 18ನೇ ದಿನದ ಫೇಸ್‌ಬುಕ್ ಮತ್ತು ಯೂಟ್ಯೂಬ್ ಲೈವ್ ಕಾರ್ಯಕ್ರಮದಲ್ಲಿ  §ಜಯಂತಿಗಳ ಆಚರಣೆ ಮತ್ತು ಔಚಿತ್ಯ¬ ವಿಷಯ ಕುರಿತು ಶ್ರೀಗಳು ಮಾತನಾಡಿದರು.

 ಸತ್ಪುರುಷರ ಚಿಂತನೆಗಳು ಒಂದು ದಿನಕ್ಕೆ ಸೀಮಿತವಾಗಬಾರದು. ಒಂದು ದಿನ ಜಯಂತಿ ಮಾಡಿ ಮರೆಯುವವರು ಅವರು ನಿಜವಾದ ಅನುಯಾಯಿಗಳಲ್ಲ. ಅವರ ವಿದಾಯಕ ಕಾರ್ಯಗಳನ್ನು ಜೀವನದುದ್ದಕ್ಕು ಅನುಸರಣೆ ಮಾಡಬೇಕು ಎಂದರು.

ಮಾನವ ಸಮಾಜದಲ್ಲಿ ಹಲವಾರು ಆಚರಣೆಗಳಿವೆ. ಆಚರಣೆಗಳ ಔಚಿತ್ಯವೇನು? ಎಂಬುದರ ಚಿಂತನೆ ನಡೆಯಬೇಕಿದೆ.  ಎಲ್ಲ ಜಾತಿ ಧರ್ಮಗಳಲ್ಲೂ ಸಂತರು, ಸುಧಾರಕರು, ಪ್ರವರ್ತಕರು ಆಗಿಹೋಗಿದ್ದಾರೆ. ಅವರು ಕಾಲವಾದ ನಂತರ, ಪರಿನಿರ್ವಾಣ ಹೊಂದಿದ ನಂತರ ಅನುಯಾಯಿಗಳಿಂದ ಅವರ ಗೌರವಾರ್ಥ ಜನ್ಮದಿನವನ್ನು ಜಯಂತಿ ಎನ್ನುವಂತೆ ಆಚರಿಸಿಕೊಂಡು ಬರಲಾಗಿದೆ. ಗುಡ್‌ಫ್ರೈಡೇ, ಈದ್‌ಮಿಲಾದ್, ಮಹಾಪರಿನಿರ್ವಾಣದಿನ, ಪೈಗಂಬರ್‌ರ ಸ್ಮರಣೆ, ಮಹಾವೀರ ಜಯಂತಿ, ಹೀಗೆ ಬಸವ ಜಯಂತಿಯೂ ಇದೆ. ಇವರು ಮಹಾಪರಿವರ್ತಕರು. ಇವರು ನನ್ನ ಸಾವಿನ ನಂತರ ಜನ್ಮದಿನವನ್ನು ಜಯಂತಿಯನ್ನಾಗಿ ಆಚರಿಸಿ ಎಂದು ಕರೆ ಕೊಟ್ಟಿಲ್ಲ. ಗಾಂಧಿ ಜಯಂತಿ, ಗುರುನಾನಕ್ ಜಯಂತಿ, ಮಹಾವೀರ ಜಯಂತಿ, ಹೀಗೆ ಹಲವರ ಜಯಂತಿ ಆಚರಣೆಗಳು. ಬಸವ ಜಯಂತಿ ಆಚರಣೆಯು 110 ವರ್ಷಗಳ ಹಿಂದೆ ಪ್ರಾರಂಭವಾಯಿತು. ಕನಕ, ಪುರಂದರ, ಮಧ್ವಾಚಾರ್ಯರು, ರಾಮಾನುಜಚಾರ್ಯರು ಮೊದಲಾದವರ ಸ್ಮರಣೆ ನಡೆಯುತ್ತದೆ

ಧಾರವಾಡ ಮೃತ್ಯುಂಜಯ ಸ್ವಾಮಿಗಳು ದಾವಣಗೆರೆಯ ವಿರಕ್ತಮಠದಲ್ಲಿದ್ದಾಗ ಜಯದೇವ ಸ್ವಾಮಿಗಳ ಸಮ್ಮತಿ ಪಡೆದು ಹರ್ಡೇಕರ್ ಮಂಜಪ್ಪನವರ ಜೊತೆ ಬಸವ ಜಯಂತಿ ಆಚರಣೆಯನ್ನು ಪ್ರಾರಂಭಿಸಿದರು. ಅದು 7 ದಿನಗಳ ಕಾಲ ನಡೆಯುತ್ತದೆ. ಹಾವೇರಿಯಲ್ಲಿ ಸಹ ವಾರಗಟ್ಟಲೆ ನಡೆಯುತ್ತದೆ. ಈ ಮೊದಲು ಶ್ರೀಮಠದಲ್ಲಿ ರುದ್ರಾಭಿಷೇಕ ಪೂಜೆ ಮೊದಲಾದವು ನಡೆಯುತ್ತಿದ್ದವು. ಮಲ್ಲಿಕಾರ್ಜುನ ಶ್ರೀಗಳು ಸಹ ಲಿಂಗಪೂಜೆಯಲ್ಲಿ ತೊಡಗುತ್ತಿದ್ದರು. ಮೂರು ನಾಲ್ಕು  ಮಂದಿ ಶಾಸ್ತ್ರಿಗಳು ಇರುತ್ತಿದ್ದರು. ಶರಣತತ್ವಕ್ಕೆ ಬಸವತತ್ವಕ್ಕೆ ಯಾವಾಗ ಮುರುಘಾಮಠವು ಸನ್ನದ್ಧವಾಯಿತೋ ಅಂದಿನಿಂದ ಶಿವರಾತ್ರಿ ಆಚರಣೆ ನಿಲ್ಲಿಸಲಾಯಿತು. ಇಲ್ಲಿನ ಶಿವರಾತ್ರಿ ಅಥಣಿಗೆ ಸ್ಥಳಾಂತರಿಸಲಾಯಿತು. ಅದು ವೈದಿಕಯುಕ್ತವಾಗಬಾರದೆಂದು ಮೊದಲು ಮೂರುದಿನ ಸಹಜ ಶಿವಯೋಗ ನಡೆಯುತ್ತದೆ. ಚೆನ್ನಬಸವಣ್ಣನವರು ಚಿನ್ಮಯಜ್ಞಾನಿಗಳು ಅವಿರಳಜ್ಞಾನಿಗಳು. 

ಶರಣರು ಹೊಸ ಹಾದಿಯ ಅನ್ವೇಷಕರು. ಹಳೆ ಆಚರಣೆಯ ಪರಿವರ್ತಕರು. ಶರಣತತ್ವದಲ್ಲಿ ಹುಣ್ಣಿಮೆ, ಅಮಾವಾಸ್ಯೆ, ಸಂಕ್ರಾಂತಿ ಯಾವುದೂ ಇರುವುದಿಲ್ಲ. ಜಯಂತಿ ಮತ್ತು ಪುಣ್ಯತಿಥಿಗಳು ಬಸವ ಸಮ್ಮತವಲ್ಲ. ನವಮಿ ಆಚರಣೆ ನಾವು ಸಂಪೂರ್ಣವಾಗಿ ಬದಲಾಯಿಸಿ ಶರಣ ಸಂಸ್ಕೃತಿ ಉತ್ಸವ ಶೀರ್ಷಿಕೆಯಡಿ ಸಮಕಾಲೀನ ಸಂದರ್ಭದ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಆಚರಿಸಲಾಗುತ್ತಿದೆ. ಮಠದಲ್ಲಿ ಹಬ್ಬದ ಆಚರಣೆ ಇಲ್ಲ. ಶ್ರೀಮಠದ ಹಬ್ಬವೆಂದರೆ, ಪ್ರತಿ ತಿಂಗಳ 5ನೇ ತಾರೀಖಿನ ಸಾಮೂಹಿಕ ಕಲ್ಯಾಣ ಮಹೋತ್ಸವವೇ ನಮ್ಮ ಹಬ್ಬ. ಸಂಪ್ರದಾಯಕ್ಕೆ ಪರ್ಯಾಯವಾಗಿ ಸತ್ಸಂಪ್ರದಾಯಗಳನ್ನು ಶ್ರೀಮಠವು ರೂಢಿಸಿಕೊಂಡು ಬಂದಿದೆ ಎಂದರು.

error: Content is protected !!