ಜಿಎಂಐಟಿಯಲ್ಲಿ ಗಮನ ಸೆಳೆದ ಉತ್ಪನ್ನಗಳ ಪ್ರದರ್ಶನ

ದಾವಣಗೆರೆ, ಆ. 6 – ನಗರದ ಜಿ.ಎಂ. ತಾಂತ್ರಿಕ ಮಹಾವಿದ್ಯಾಲಯದಲ್ಲಿ ಉತ್ಪನ್ನಗಳ ಪ್ರದರ್ಶನ ಯಶಸ್ವಿಯಾಗಿ ನಡೆಯಿತು.

ಈ ಪ್ರದರ್ಶನದಲ್ಲಿ ಜಿ.ಎಂ. ತಾಂತ್ರಿಕ ಮಹಾವಿದ್ಯಾಲಯದ ವಿವಿಧ ವಿಭಾಗಗಳ ಹಲವು ಉತ್ಪನ್ನಗಳನ್ನು ಪ್ರದರ್ಶಿಸಲಾಯಿತು. ಈ ಉತ್ಪನ್ನಗಳು ಕೋವಿಡ್-19 ಸಾಂಕ್ರಮಿಕ ಅವಧಿಯಲ್ಲಿ ಅಭಿವೃದ್ದಿಪಡಿಸಲಾಗಿದ್ದು, ಅನೇಕ ಉತ್ಪನ್ನಗಳು ಕೋವಿಡ್-19 ಗೆ ಸಂಬಂಧಪಟ್ಟವು. ವಿದ್ಯಾರ್ಥಿಗಳು ಅಧ್ಯಾಪಕರುಗಳ ಜೊತೆಗೂಡಿ ಅಭಿವೃದ್ದಿಪಡಿಸಿದ ಉತ್ಪನ್ನಗಳು ಜನಮನ ಸೆಳೆದವು.

ಇಂಟಲಿಜೆಂಟ್ ಸ್ಪರ್ಶ ರಹಿತ ಕೈ ಸ್ಯಾನಿಟೈಸರ್ ವಿತರಕ: ಆರೋಗ್ಯದ ದೃಷ್ಠಿಯಿಂದ ನಮ್ಮ ಕೈಗಳನ್ನು ನಿಯಮಿತವಾಗಿ ಸ್ವಚ್ಛಗೊಳಿಸುವುದು ಒಳ್ಳೆಯ ಅಭ್ಯಾಸ. ಆದರೆ ನಮ್ಮ ಕೈಗಳನ್ನು ಸ್ವಚ್ಛಗೊಳಿಸಲು ನಾವು ಸ್ಯಾನಿಟೈಸರ್ ವಿತರಕವನ್ನು ಸ್ಪರ್ಶಿಸಬೇಕು. ಇದರಿಂದ ಮತ್ತೆ ರೋಗ ಹರಡಬಹುದು. ಆದರೆ ಇದನ್ನು ಸ್ಪರ್ಶ ರಹಿತ ಕೈ ಸ್ಯಾನಿಟೈಸರ್ ವಿತರಕದಿಂದ ತಪ್ಪಿಸಬಹುದು. ಅದಕ್ಕಾಗಿ ಇಂಟಲಿಜೆಂಟ್ ಸ್ಪರ್ಶ ರಹಿತ ಕೈ ಸ್ಯಾನಿಟೈಸರ್ ವಿತರಕವನ್ನು ಅಭಿವೃದ್ದಿಪಡಿಸಲಾಗಿದೆ. ಯಾವುದೇ ವ್ಯಕ್ತಿಯು ತನ್ನ ಕೈಗಳನ್ನು ವಿತರಕದ ಬಳಿ ಇಟ್ಟ ಮೇಲೆ ಸ್ಯಾನಿಟೈಸರ್ ಅನ್ನು ಸುಲಭವಾಗಿ ಪಡೆಯಬಹುದು. ಇದು ಎರಡು ವೈಶಿಷ್ಟ್ಯಗಳನ್ನು ಹೊಂದಿದೆ. ಸ್ವಯಂ ಆನ್/ಆಫ್  ಮತ್ತು ಸ್ಯಾನಿಟೈಸರ್ ವ್ಯರ್ಥವಾಗದಂತೆ ನೋಡಿಕೊಳ್ಳುವುದು. ಒಬ್ಬ ವ್ಯಕ್ತಿಯು ಕೈ ಹಾಕಿದಾಗ ವಿತರಕ ಯಂತ್ರವು ನಿಗದಿತ ಪ್ರಮಾಣದ ಸ್ಯಾನಿಟೈಸರ್ ದ್ರವವನ್ನು ಮಾತ್ರ ವಿತರಿಸುತ್ತದೆ ಮತ್ತು ಇದಾದ ಮೇಲೆ ಸಾಧನವು ಸ್ವಯಂ ಆಫ್ ಆಗುತ್ತದೆ. 

ಶುಚಿ ವೈಪ್ಸ್: ಶುಚಿ ವೈಪ್ಸ್ ಉತ್ಪನ್ನವು ಆಲ್ಕೋಹಾಲ್ ಬಳಸಿ ತಯಾರಿಸಲಾಗಿದ್ದು, ಸೂಕ್ಷ್ಮ ಜೀವಿಗಳಿಂದ ರಕ್ಷಣೆ ಪಡೆಯಲು ಪರಿಣಾಮಕಾರಿಯಾಗಿದೆ. ಇದನ್ನು ಕೈಗಳನ್ನು ಸ್ವಚ್ಛಗೊಳಿಸಲು, ದೈನಂದಿನ ಕೆಲಸಕ್ಕೆ ಬಳಸುವ ಮೇಜಿನ ಕೊಳೆ ತೆಗೆಯಲು ಹಾಗೂ ಕಂಪ್ಯೂಟರ್‍ನ ಬಿಡಿ ಭಾಗಗಳ ಸ್ವಚ್ಛತೆಗೆ ಉಪಯೋಗಿಸಬಹುದು. ಈ ಉತ್ಪನ್ನವು ಟಿಷ್ಯೂ ಪೇಪರ್ ಆಧಾರಿತವಾಗಿದ್ದು, ಪ್ರಕೃತಿಯಲ್ಲಿ ಸಹಜವಾಗಿ ಮಣ್ಣಿನೊಂದಿಗೆ ಕರಗುತ್ತದೆ.

ಹ್ಯಾಂಡ್ರಾಯ್ಡ್ಯಾಪ್ ಹಾಜರಾತಿ ಸಿಸ್ಟಮ್ 

ಮಾಹಿತಿ ತ್ರಂತ್ರಜ್ಞಾನ ವಿಭಾಗವು ಅಭಿವೃದ್ದಿಪಡಿಸಿದ ಹ್ಯಾಂಡ್ರಾಯ್ಡ್ಯಪ್ ಹಾಜರಾತಿ ಸಿಸ್ಟಮ್ ಬಳಸುವಿಕೆಯಿಂದ ಅನೇಕ ಲಾಭಗಳಿವೆ. ವೈರಾಣುವಿನಿಂದ ಕಲುಷಿತಗೊಂಡ ಹಾಜರಾತಿ ನೊಂದಣಿ ಮೇಲ್ಮೈಯನ್ನು ಸ್ಪರ್ಶಿಸುವುದನ್ನು ತಡೆಗಟ್ಟಬಹುದು. ಪದೇ ಪದೇ ಸ್ಯಾನಿಟೈಸರ್ ಬಳಕೆಯಿಂದ ದೀರ್ಘಾವಧಿಯಲ್ಲಿ ಚರ್ಮಕ್ಕಾಗುವ ದುಷ್ಪರಿಣಾಮಗಳನ್ನು ತಡೆಗಟ್ಟಬಹುದು ಉದ್ಯೋಗಿಗಳು ಸಂಸ್ಥೆಯ ಆವರಣದಲ್ಲಿಯೇ ಇದ್ದು, ಕೆಲಸದ ಸಮಯಕ್ಕೆ ಸರಿಯಾಗಿ ಹಾಜರಾತಿಯನ್ನು ಹಾಕಬಹುದು.

ಗಾಳಿಯಿಂದ ನೀರು ಮತ್ತು ಪ್ಲಾಸ್ಟಿಕ್ ಇಟ್ಟಿಗೆಯ ಉತ್ಪಾದನೆ: ಸಿವಿಲ್ ಇಂಜಿನಿಯರಿಂಗ್ ವಿಭಾಗದಿಂದ ಎರಡು ಜೀವನಾವಶ್ಯಕ ಉತ್ಪನ್ನಗಳನ್ನು ಅಭಿವೃದ್ದಿಪಡಿಸಲಾಗಿದೆ. ಮೊದಲನೆಯದಾಗಿ ಗಾಳಿಯಿಂದ ನೀರು ಪಡೆಯುವ ಸಾಧನ ಇದು ಯಾವುದೇ ವಿದ್ಯುತ್ ಬಳಸದೇ, ನೈಸರ್ಗಿಕವಾಗಿ ದೊರೆಯುವ ಗಾಳಿಯನ್ನು ಘನೀಕರಿಸುವ ಶುದ್ದ ಕುಡಿಯುವ ನೀರು ಪಡೆಯುವಂತಹದು.

ಪ್ಲಾಸ್ಟಿಕ್ ಇಟ್ಟಿಗೆಯನ್ನು  ಘನತ್ಯಾಜ್ಯಗಳಲ್ಲಿ ಪಡೆಯುವ ಪ್ಲಾಸ್ಟಿಕ್, ಕಲ್ಲು ಕ್ವಾರಿಯ ಕಲ್ಲಿನ ಪುಡಿ ಹಾಗೂ ಒಂದು ರೆಸಿನ್‍ನಿಂದ ತಯಾರಿಸಿದ್ದು, ಅಧಿಕ ಶಕ್ತಿ ಬಹುಬಾಳಿಕೆ ಮತ್ತು ಪರಿಸರಸ್ನೇಹಿ ಉತ್ಪನ್ನವಾಗಿದೆ.

ಫುಟ್ ಆಪರೇಟೆಡ್ ಸ್ಯಾನಿಟೈಸರ್ ಸ್ಟ್ಯಾಂಡ್, ಮುಖ ಕವಚ: ಕೋವಿಡ್-19 ಪಿಡುಗು ವಿರುದ್ದ ಹೋರಾಡುತ್ತಿರುವವರಿಗೆ ನೆರವಾಗ ಬಲ್ಲ ಮುಖ ಕವಚ ಮತ್ತು ಫುಟ್ ಆಪರೇಟೆಡ್ ಸ್ಯಾನಿಟೈಸರ್ ಸ್ಟ್ಯಾಂಡ್ ಉತ್ಪನ್ನಗಳನ್ನು ಮೆಕ್ಯಾನಿಕಲ್ ವಿಭಾಗವು ಅಭಿವೃದ್ದಿಪಡಿಸಿ ಸಮಾಜದ ಗಮನ ಸೆಳೆದಿದೆ. ಐದು ನೂರಕ್ಕೂ ಹೆಚ್ಚು ಮುಖ ಕವಚ ಮತ್ತು ಫುಟ್ ಆಪರೇಟೆಡ್ ಸ್ಯಾನಿಟೈಸರ್ ಸ್ಟ್ಯಾಂಡ್‍ಗಳನ್ನು ತಯಾರಿಸಿ ವಿತರಿಸಲಾಗಿದೆ. 

ಕಾಂಟ್ಯಾಕ್ಟ್‍ಲೆಸ್  ಹ್ಯಾಂಡ್ ಸ್ಯಾನಿಟೈಸರ್ ಡಿಸ್ಪೆನ್ಸರ್: ಗಣಕಯಂತ್ರ ವಿಭಾಗದಿಂದ ಅಭಿವೃದ್ದಿಪಡಿಸಲ್ಪಟ್ಟ ಈ ಉತ್ಪನ್ನವು ಸುಮಾರು 3 ಲೀಟರ್  ಸ್ಯಾನಿಟೈಸರ್ ಸಾಮಥ್ರ್ಯ ಹೊಂದಿದ್ದು ಕೈ ಸ್ಪರ್ಶವಿಲ್ಲದೆ ಸೆನ್ಸರ್ ಸಹಾಯದಿಂದ ಸುಮಾರು 3 ರಿಂದ 4 ಮಿಲಿ ಲೀಟರ್ ಸ್ಯಾನಿಟೈಸರ್ ಅನ್ನು ಪಡೆಯಬಹುದಾಗಿದೆ. 

ಹೀಗೆ ಸಮಾರು 15ಕ್ಕೂ ಹೆಚ್ಚು ಉತ್ಪನ್ನಗಳು ಪ್ರದರ್ಶಿಸಲ್ಪಟ್ಟು ಜನರ ಮನ ಸೆಳೆದವು.

ಕಾಲೇಜಿನ ಪ್ರಾಂಶುಪಾಲ ಡಾ. ವೈ. ವಿಜಯ ಕುಮಾರ್, ಆಡಳಿತ ಮಂಡಳಿ ಪ್ರತಿನಿಧಿ ವೈ.ಯು. ಸುಭಾಶ್ಚಂದ್ರ ಹಾಗೂ ಆಡಳಿತ ಮಂಡಳಿಯು ಈ ಯಶಸ್ಸಿಗೆ ಕಾರಣರಾದ ಪ್ರಾಧ್ಯಾಪಕರುಗಳು ಮತ್ತು ವಿದ್ಯಾರ್ಥಿಗಳಿಗೆ ಅಭಿನಂದನೆ ಸಲ್ಲಿಸಿದ್ದಾರೆ.

error: Content is protected !!