ವಚನ ಚಳವಳಿಯಲ್ಲಿ ಜಂಗಮಶೀಲ ಗುಣವಿದೆ: ಪಂಡಿತಾರಾಧ್ಯ ಶ್ರೀ

ವಚನ ಚಳವಳಿಯಲ್ಲಿ ಜಂಗಮಶೀಲ ಗುಣವಿದೆ: ಪಂಡಿತಾರಾಧ್ಯ ಶ್ರೀ - Janathavaniಸಾಣೇಹಳ್ಳಿ, ಆ.13- ವಚನ ಚಳವಳಿ ನಿಂತ ನೀರಲ್ಲ. ಅದರಲ್ಲಿ ಜಂಗಮಶೀಲ ಗುಣವಿದೆ. ಇಂದಿನ ದಲಿತ, ಬಂಡಾಯ, ಸ್ತ್ರೀವಾದಿ ಮತ್ತಿತರ ಚಳವಳಿಗೆ ಅಡಿಗಲ್ಲಾಗಿದೆ. ಇವತ್ತಿನ ಹಲವಾರು ಚಳವಳಿಗಳಿಗೆ ಬೀಜ ಸ್ವರೂಪವಾಗಿದೆ. ಅನೇಕರ ಆಲೋಚನೆಯ ಕ್ರಮದ ಮೇಲೆ ಪರಿಣಾಮ ಬೀರಿದೆ ಎಂದು ಸಾಣೇಹಳ್ಳಿ ಶ್ರೀ ಪಂಡಿತಾರಾಧ್ಯ ಸ್ವಾಮೀಜಿ ನುಡಿದರು.

ಶ್ರೀ ತರಳಬಾಳು ಜಗದ್ಗುರು ಶಾಖಾ ಸಾಣೇಹಳ್ಳಿ ಶ್ರೀಮಠದಿಂದ ಆಯೋಜನೆಗೊಂಡಿರುವ `ಮತ್ತೆ ಕಲ್ಯಾಣ ಅಂತರ್ಜಾಲ ಉಪನ್ಯಾಸ ಮಾಲಿಕೆ’ಯ ಈ ದಿನದ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಶ್ರೀಗಳು ಮಾತನಾಡಿದರು.

 ಜಗತ್ತಿನಲ್ಲಿ ಯಾವುದೇ ಚಳವಳಿ ಹುಟ್ಟಬೇಕಾದರೂ ಅದಕ್ಕೊಂದು ಕಾರಣ, ಪ್ರೇರಣೆ ಪ್ರಯತ್ನ ಮತ್ತು ಸಾಮೂಹಿಕ ಹೋರಾಟದ ಅಗತ್ಯವಿರುತ್ತದೆ. ಫ್ರೆಂಚ್, ರಶಿಯಾ, ಅಮೆರಿಕಾ ಕ್ರಾಂತಿಗೆ ಒಂದಲ್ಲ ಒಂದು ಕಾರಣ, ಪ್ರೇರಣೆ, ಪ್ರಯತ್ನ, ಹೋರಾಟ ಇದ್ದೇ ಇದೆ. ಅದೇ ರೀತಿ 12 ನೇಯ ಶತಮಾನದಲ್ಲಿ ವಚನ ಚಳವಳಿ ನಡೆಯಲು ಮೂಲ ಕಾರಣ ಜಾತೀಯತೆೆ, ಪಟ್ಟಭದ್ರ ಹಿತಾಸಕ್ತರ ಅಟ್ಟಹಾಸ, ಸಂಪತ್ತಿನ ಕೇಂದ್ರೀಕರಣ ಹಾಗೂ ಅಧಿಕಾರ ದಾಹವಾಗಿತ್ತು ಎಂದರು.

ನಮ್ಮ ಸಂವಿಧಾನದಲ್ಲೂ ವಚನ ಚಳವಳಿಯ ಆಶಯಗಳು ಎದ್ದು ತೋರುವವು. ಜಾತಿಯಿಂದ ಬ್ರಾಹ್ಮಣ ಕುಟುಂಬಕ್ಕೆ ಸೇರಿದ ನೀಲಾ, ಹರಿಜನ ಕುಟುಂಬಕ್ಕೆ ಸೇರಿದ ಶೀಲ ಇವರ ಮದುವೆ ಅಂದು ದೊಡ್ಡ ದುರಂತಕ್ಕೆ ಕಾರಣವಾಯಿತು. ಇಂದು ಸಂವಿಧಾನ ಅದಕ್ಕೆ ಮಾನ್ಯತೆ ನೀಡಿದೆ ಎಂದರೆ ಅದು ವಚನ ಚಳವಳಿಯ ಪರಿಣಾಮವಲ್ಲದೆ ಮತ್ತೇನು? ವಚನ ಚಳವಳಿಯ ಆಶಯಗಳನ್ನು ಇಂದಿನವರು ಯಥಾವತ್ತಾಗಿ ಅನುಷ್ಠಾನಕ್ಕೆ ತರುತ್ತಿಲ್ಲ ಎಂದರೆ ವಚನ ಚಳವಳಿಯ ಪರಿಣಾಮ ಏನೂ ಆಗಿಲ್ಲ ಎಂದು ಅರ್ಥವಲ್ಲ. ವಚನಕಾರರ ಆಶಯ ಇಂದು ಸಂವಿಧಾನಾತ್ಮಕವಾಗಿ ಕಾನೂನಿನ ಚೌಕಟ್ಟಿಗೆ ಬರುವಂತಾಗಿರುವುದು ವಚನ ಚಳವಳಿಯ ಧನಾತ್ಮಕ ಪರಿಣಾಮ ಎಂದೇ ನಮ್ಮ ಭಾವನೆ ಎಂದರು.

ವಚನ ಚಳವಳಿಯ ಎಲ್ಲಾ ಆಶಯಗಳನ್ನು ಇಂದು ಜನರು ಜಾರಿಯಲ್ಲಿ ತಂದಿಲ್ಲ ಎನ್ನುವ ವಿಷಾದ ನಮಗೂ ಇದೆ. ಆದರೆ ಅದರಿಂದ ಪ್ರಭಾವಿತರಾಗಿ ತಮ್ಮ ಬದುಕನ್ನು ಅಪ್ಪಟ ಚಿನ್ನದಂತೆ ಮಾಡಿಕೊಂಡ ಸಾಕಷ್ಟು ಜನರು ಎಲೆಮರೆಯ ಕಾಯಂತೆ ಅಲ್ಲಲ್ಲೇ ಇಂದಿಗೂ ಇದ್ದಾರೆ ಎಂದರು. ಅದೇ ಆ ಚಳವಳಿಯ ಪರಿಣಾಮವನ್ನು ತೋರುವುದು. ವಚನ ಚಳವಳಿ ಮಾಡಿದ ಮಹತ್ವದ ಕಾರ್ಯ ಎಂದರೆ ಅಹಿಂಸೆ, ಕಾಯಕ, ದಾಸೋಹ, ಇಷ್ಟಲಿಂಗ ಪೂಜೆ ಇಂಥ ತತ್ವಗಳನ್ನು ಎತ್ತಿಹಿಡಿದದ್ದು. ವಚಕಾರರ ಚಳುವಳಿಯ ಸತ್ವ ಇರುವುದೇ ಅರಿವು ಮತ್ತು ಆಚಾರದಲ್ಲಿ. ವಚನಗಳು ಕೇವಲ ಸಿದ್ಧಾಂತಗಳಲ್ಲ. ಅವು ಪ್ರಯೋಗ ಪ್ರಧಾನವಾದವು. ಅಂಥ ಪ್ರಯೋಗಪ್ರಧಾನವಾದ ವಚನ ಚಳವಳಿಯ ಪರಿಣಾಮ ಇನ್ನಾದರೂ ವ್ಯಕ್ತಿತ್ವ ಅರಳಿಸಿಕೊಳ್ಳಲು ಸ್ಪೂರ್ತಿ ನೀಡಲಿ ಎಂದು ಆಶಿಸಿದರು.

ವಚನ ಚಳುವಳಿಯ ಪರಿಣಾಮ ಕುರಿತಂತೆ ನಾಡಿನ ಖ್ಯಾತ ಕವಿ ಎಲ್. ಎನ್. ಮುಕುಂದರಾಜ್ ಮಾತನಾಡಿ, ವರ್ಗ, ವರ್ಣ, ಲಿಂಗ ಮುಂತಾದ ಎಲ್ಲ ತಾರತಮ್ಯಗಳನ್ನೂ ಮೀರಿ ಎಲ್ಲರೂ ಸಮಾನರೂ ಎನ್ನುವ ನಮ್ಮ ಇಂದಿನ ನಂಬಿಕೆಯನ್ನು ಗಟ್ಟಿಗೊಳಿಸಲು ಬಸವಾದಿ ಶರಣರ ಚಿಂತನೆಗಳು ಕಾರಣರು.  12 ನೆಯ ಶತಮಾನ ಕನ್ನಡಿಗರೆಲ್ಲರೂ ಸದಾ ನೆನಪಿಟ್ಟುಕೊಳ್ಳಬೇಕಾದ ಅದ್ಭುತ ಕಾಲಮಾನ. ದೇವರು, ಧರ್ಮ, ಸಮಸಮಾಜದ ಬಗ್ಗೆ ಹೊಸ ಪರಿಕಲ್ಪನೆ ಮೂಡಿಸಿದರು. ಮಹಿಳೆಯರ ಸಂಕಷ್ಟ, ಜಾತಿ, ವರ್ಗ, ವರ್ಣ ಮುಂತಾದ ಅಸಮಾನತೆಗಳು ಶ್ರಮವೀಜಿಗಳ ಮೇಲೆ ಬೀರುವ ಗಾಢ ಪರಿಣಾಮಗಳ ಬಗ್ಗೆ ಯೋಚಿಸಿ ಅದಕ್ಕೊಂದು ಪರ್ಯಾಯವನ್ನು ಕಟ್ಟಿಕೊಟ್ಟ ಬಹುದೊಡ್ಡ ಚಳುವಳಿ. ಶರಣರ ಜೀವನ ಕ್ರಮ,  ಕಾಯಕ, ದಾಸೋಹ, ಅಸಂಗ್ರಹತ್ವ, ಸಮಾನವಾದಗಳು ಇಂದಿಗೂ ಆದರ್ಶ ಎಂದು ಹೇಳಿದರು. 

ಬಸವಣ್ಣನ ನೇತೃತ್ವದಲ್ಲಿ ಅನುಭವ ಮಂಟಪ ಮತ್ತು ಮಹಾಮನೆಯ ಮೂಲಕ ಎಲ್ಲ ಅಸಮಾನತೆಗಳಿಗೆ, ಅವಮಾನಗಳಿಗೆ ಪರಿಹಾರ ಕಂಡುಕೊಳ್ಳಲು ಕಾಯಕ, ದಾಸೋಹ, ಸಮಾನತೆಯ ಪರಿಕಲ್ಪನೆಗಳು ಹುಟ್ಟಿಕೊಳ್ಳುತ್ತವೆ. ಪ್ರಜಾಪ್ರಭುತ್ವದ ಇಂದಿನ ವಿಧಾನಸೌಧ, ಪಾರ್ಲಿಮೆಂಟಿಗೆ ಎಲ್ಲ ವರ್ಗದ ಜನರೂ ಸಮಾನವಾಗಿ ಆಯ್ಕೆಯಾಗಿ ಬರುವಂತೆ 12ನೆಯ ಶತಮಾನದಲ್ಲಿ ಬಸವಣ್ಣ ಅನುಭವ ಮಂಟಪಕ್ಕೆ ಎಲ್ಲರಿಗೂ ಪ್ರವೇಶ ನೀಡಿದ್ದರು. ಅಲ್ಲಿ ಸೂಳೆ ಸಂಕವ್ವೆಯಂತಹ ಅತ್ಯಂತ ಹಿಂದುಳಿದ ಮಹಿಳೆಯೂ ಬಸವಣ್ಣನವರ ಸಮಾನ ಕುಳಿತು ಅನುಭವ ಮಂಟಪದಲ್ಲಿ ಚರ್ಚಿಸುತ್ತಿದ್ದರು. ಇದು ಶರಣರ ವ್ಯಕ್ತಿತ್ವಕ್ಕೆ ಹಿಡಿದ ಕನ್ನಡಿಯಾಗಿದೆ ಎಂದರು.

ಆರಂಭದಲ್ಲಿ ಶಿವಸಂಚಾರದ ಕಲಾವಿದರಾದ ಕೆ. ಜ್ಯೋತಿ, ಕೆ. ದಾಕ್ಷಾಯಣಿ ಮತ್ತು ಹೆಚ್. ಎಸ್.  ನಾಗರಾಜ್ ತಬಲ ಸಾಥಿ ಶರಣ್ ಕುಮಾರ್ ಸುಶ್ರಾವ್ಯವಾಗಿ ವಚನಗೀತೆಗಳನ್ನು ಹಾಡಿದರು. ಕಲ್ಯಾಣಗೀತೆಯೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು. ಪಂಡಿತಾರಾಧ್ಯ ಶ್ರೀಗಳ ಆಪ್ತಸಹಾಯಕ ಸಿದ್ಧಯ್ಯ ಸ್ವಾಗತಿಸಿದರು. ಚಿಕ್ಕಮಗಳೂರು ಜಿಲ್ಲೆ, ತರೀಕೆರೆ ತಾಲ್ಲೂಕಿನ ಕುಡ್ಲೂರಿನ ಎಂ. ಕೆ. ಗುರುಪಾದಪ್ಪ ಮತ್ತು ಸಹೋದರರು ಇಂದಿನ ಕಾರ್ಯಕ್ರಮದ ದಾಸೋಹಿಗಳಾಗಿದ್ದರು. ದೇಶ-ವಿದೇಶದ ಸಾವಿರಾರು ಜನ ಅಂತರ್ಜಾಲಿಗರು ಕಾರ್ಯಕ್ರಮವನ್ನು ವೀಕ್ಷಿಸಿದರು.  ನಾಳೆ ಅಗಸ್ಟ್ 14ರಂದು ಸಂಜೆ 6 ಗಂಟೆಗೆ  ಶರಣರ ಮೌಢ್ಯ ವಿರೋಧಿ ನಿಲವು  ಕುರಿತು ಡಾ. ಸಬೀಹಾ ಭೂಮಿಗೌಡ, ವಿಜಯಪುರ  ಇವರು ಉಪನ್ಯಾಸ ನೀಡಲಿದ್ದಾರೆ.    

error: Content is protected !!