ಇತರೆ ಸಮಾಜಗಳಿಗೆ ಪ್ರೇರಣೆಯಾದ ಜೈನ ಮಂದಿರದ ಕೋವಿಡ್ ಕೇರ್ ಸೆಂಟರ್

ದಾವಣಗೆರೆ, ಸೆ. 2- ದಿನೇ ದಿನೇ ಹೆಚ್ಚುತ್ತಿರುವ ಕೊರೊನಾ ಸೋಂಕಿತರಿಂದಾಗಿ ಆಸ್ಪತ್ರೆಗಳಲ್ಲಿ ಬೆಡ್ ಸಿಗದ ಸಮಸ್ಯೆಗಳಿಗೆ ಜೈನ ಸಮಾಜದವರು ಪರಿಹಾರ ಕಂಡುಕೊಂಡು ಇತರೆ ಸಮಾಜಗಳೂ ಸಹ ಈ ಬಗ್ಗೆ ಯೋಚಿಸುವಂತೆ ಮಾಡಿದ್ದಾರೆ. 

ಹೌದು, ಶ್ರೀ ಸುಪಾರ್ಶ್ವನಾಥ ಜೈನ್ ಶ್ವೇತಂಬರ್ ಮೂರ್ತಿ ಪೂಜೆ ಸಂಘದ ನೇತೃತ್ವದಲ್ಲಿ ನಗರದ ಬಾಡಾ ಕ್ರಾಸ್ ಬಳಿ ಇರುವ ಜೈನ ಮಂದಿರದ ಸಭಾಂಗಣದಲ್ಲಿ 80 ಹಾಸಿಗೆಗಳ ಸುಸಜ್ಜಿತ ಕೋವಿಡ್ ಕೇರ್ ಸೆಂಟರ್ ತೆರೆಯಲಾಗಿದೆ.

ಜೈನ ಸಮಾಜದವರು ತಮ್ಮ ಸಮಾಜದವರ ಆರೋಗ್ಯ ರಕ್ಷಣೆಗಾಗಿ ಸುಸಜ್ದಿತ ಕೋವಿಡ್ ಕೇರ್ ಸೆಂಟರ್ ತೆರೆದಿದ್ದು,  ಕಳೆದ ಒಂದು ತಿಂಗಳಲ್ಲಿ ಈ ಕೋವಿಡ್ ಕೇರ್ ಸೆಂಟರ್‌ನಲ್ಲಿ 32 ಜನರಿಗೆ ಚಿಕಿತ್ಸೆ ನೀಡಲಾಗಿದ್ದು, 12 ಜನರು ಸೋಂಕು ಮುಕ್ತರಾಗಿ ಹೊರ ಬಂದಿದ್ದಾರೆ. ಸದ್ಯ 28 ಜನರು ಚಿಕಿತ್ಸೆ ಪಡೆಯುತ್ತಿದ್ದಾರೆ.

ಜಿಲ್ಲಾಡಳಿತ ಹಾಗೂ ಜಿಲ್ಲಾ ಆರೋಗ್ಯ ಇಲಾಖೆಯ ಪರವಾನಿಗಿ ಪಡೆದು ತೆರೆದಿರುವ ಈ ಕೇಂದ್ರದಲ್ಲಿ ಪ್ರಾಥಮಿಕ ಹಂತದಲ್ಲಿ ಸೋಂಕು ಕಂಡ ಅಂದರೆ, ಶೀತ, ಕೆಮ್ಮು, ಜ್ವರ ಲಕ್ಷಣದೊಂದಿಗೆ ಕೋವಿಡ್ ಪಾಸಿಟಿವ್ ಬಂದವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. 

ಜೈನ ಸಮುದಾಯದವರಿಗಾಗಿಯೇ ತೆರೆದೆ ಈ ವಿಶೇಷ ಕೋವಿಡ್ ಕೇರ್ ಸೆಂಟರ್ ಖಾಸಗಿ ಆಸ್ಪತ್ರೆಗಳನ್ನೂ ನಾಚಿಸುವಂತಹ ಸೌಕರ್ಯ ಹೊಂದಿದೆ. ಇಬ್ಬರು ತಜ್ಞ ವೈದ್ಯರು, ಐವರು ನರ್ಸ್, ಓರ್ವ ವ್ಯವಸ್ಥಾಪಕ, ಆಯಾ, ಸ್ವಚ್ಛತಾ ಕೆಲಸಗಾರರನ್ನು ಕೇಂದ್ರಕ್ಕೆ ಖಾಸಗಿಯಾಗಿ ನೇಮಿಸಿಕೊಳ್ಳಲಾಗಿದೆ.

ಆರಂಭದಲ್ಲಿ ಕೋವಿಡ್ 19 ಪಾಸಿಟಿವ್ ಬಂದ ಸಮಾಜದ ಇಬ್ಬರಿಗೆ ಬೆಡ್ ಹಾಗೂ ಆಕ್ಸಿಜನ್ ದೊರೆಯದ ಕಾರಣ ಸಾವನ್ನಪ್ಪಿದ್ದರು. ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿ, ಪ್ರತ್ಯೇಕ ಕೋವಿಡ್ ಸೆಂಟರ್ ತೆರೆಯಲು ನಿರ್ಧರಿಸಲಾಯಿತು ಎನ್ನುತ್ತಾರೆ ಶ್ರೀ ಸುಪಾರ್ಶ್ವನಾಥ ಜೈನ್ ಶ್ವೇತಂಬರ್ ಮೂರ್ತಿ ಪೂಜೆ ಸಂಘದ ಕಾರ್ಯಕರ್ತ ರಾಜು ಭಂಡಾರಿ ತಿಳಿಸಿದ್ದಾರೆ 

ಇಲ್ಲಿನ ವೈದ್ಯರು ಜಿಲ್ಲಾ ಆರೋಗ್ಯ ಇಲಾಖೆಯ ಮಾರ್ಗದರ್ಶನದಂತೆ ರೋಗಿಗಳಿಗೆ ವೈದ್ಯಕೀಯ ಸೇವೆ ನೀಡುತ್ತಿದ್ದಾರೆ. ಒಂದು ವೇಳೆ ರೋಗಿಗಳಿಗೆ ಬೇರೆ ತಜ್ಞ ವೈದ್ಯರ ಅಗತ್ಯಬಿದ್ದರೆ ಅವರನ್ನೂ ಸಹ ಕೇಂದ್ರಕ್ಕೆ ಕರೆಯಿಸಿ ಚಿಕಿತ್ಸೆ ಕೊಡಿಸುವ ವ್ಯವಸ್ಥೆಯನ್ನೂ ಮಾಡಲಾಗಿದೆ.

ರಕ್ತ ಸೇರಿದಂತೆ ವಿವಿಧ ರೀತಿಯ ತಪಾಸಣೆಗಾಗಿ ಖಾಸಗಿ ಆಸ್ಪತ್ರೆಗಳೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ. ದಾಖಲಾದ ರೋಗಿಗಳಿಗೆ ಬಹುತೇಕ ಎಲ್ಲಾ ರೀತಿಯ ವೈದ್ಯಕೀಯ ಚಿಕಿತ್ಸೆಗಳೂ ಇಲ್ಲಿ ಲಭ್ಯವಾಗುವಂತೆ ನೋಡಿಕೊಳ್ಳಲಾಗಿದೆ.

ವಿಶಾಲವಾದ ಕಟ್ಟಡದಲ್ಲಿ ಸಾಮಾಜಿಕ ಅಂತರಕ್ಕೆ ಧಕ್ಕೆ ಬಾರದಂತೆ 80 ಬೆಡ್‌ಗಳನ್ನು ಹಾಕಲಾಗಿದೆ. ಪ್ರತಿ ಬೆಡ್‌ಗೆ ಸೊಳ್ಳೆ ಪರದೆ ಅಳವಡಿಸಲಾಗಿದೆ. ಬಿಪಿ, ಶುಗರ್, ಪಲ್ಸ್ ಆಕ್ಸಿಮೀಟರ್ ತಪಾಸಣಾ ಯಂತ್ರಗಳೂ ಕೇಂದ್ರದಲ್ಲಿವೆ. ಆಕ್ಸಿಜನ್ ವ್ಯವಸ್ಥೆಗೂ ಪರವಾನಗಿ ಪಡೆದಿದ್ದು, ಸದಸ್ಯದಲ್ಲಿಯೇ ಆಕ್ಸಿಜನ್ ವ್ಯವಸ್ಥೆಯನ್ನೂ ಅಳವಡಿಸಲು ಸಿದ್ಧತೆ ನಡೆದಿದೆ.

ಚಿಕಿತ್ಸೆಗಾಗಿ ಕೇಂದ್ರಕ್ಕೆ ಬರುವ ಎಲ್ಲಾ ರೋಗಿಗಳಿಗೆ ಮಾಸ್ಕ್, ಹ್ಯಾಂಡ್ ಸ್ಯಾನಿಟೈಸರ್, ತಲೆಗೆ ಎಣ್ಣೆ, ಸೋಪು, ಟವೆಲ್, ಟೂತ್ ಬ್ರಷ್, ಪೇಸ್ಟ್ ಸೇರಿದಂತೆ ಅಗತ್ಯ ವಸ್ತುಗಳುಳ್ಳ ಸುರಕ್ಷತ ಕಿಟ್‌ ಕೊಡಲಾಗುತ್ತಿದೆ. 

ಅಧ್ಯಾತ್ಮವೂ ಉಂಟು: ಚಿಕಿತ್ಸೆ ಜೊತೆಗೆ ರೋಗಿಗಳ ಮಾನಸಿಕ ಸ್ಥೈರ್ಯ ಹೆಚ್ಚಿಸಲು ಸಾಮಾಜಿಕ ಅಂತರ ಕಾಯ್ದುಕೊಂಡೇ ಭಜನೆ, ಧ್ಯಾನ, ಯೋಗದಂತಹ ಕಾರ್ಯಕ್ರಮಗಳನ್ನೂ ಈ ಕೋವಿಡ್ ಕೇಂದ್ರದಲ್ಲಿ ನಡೆಸಲಾಗುತ್ತಿದೆ. 

ಆಯುಷ್ ಇಲಾಖೆಯಿಂದ ಪ್ರಮಾಣಿತ ಔಷಧೀಯ ಗಿಡಮೂಲಿಕೆಯ ಕಷಾಯ, ಡ್ರೈ ಫ್ರೂಟ್ಸ್, ಅರಿಶಿಣ ಮಿಶ್ರಿತ ಹಾಲು, ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಪೋಷಕಾಂಶಯುಕ್ತ ಆಹಾರಕ್ಕೆ ಹೆಚ್ಚಿನ ಮಹತ್ವ ನೀಡಲಾಗಿದೆ.

ಒಟ್ಟಾರೆಯಾಗಿ ಜೈನ ಸಂಘವು ತನ್ನ ಸಮುದಾಯದವರಿಗಾಗಿ ತೆರೆದ ಕೋವಿಡ್ ಸೆಂಟರ್ ಇತರೆ ಸಮುದಾಯದವರಿಗೂ ಪ್ರೇರಣೆಯಾಗಿದೆ. 

ಶ್ರೀ ಸುಪಾರ್ಶ್ವನಾಥ ಜೈನ್ ಶ್ವೇತಂಬರ್ ಮೂರ್ತಿ ಪೂಜೆ ಸಂಘದ ಕಾರ್ಯಕರ್ತರಾದ ಅಜಿತ್ ಓಸ್ವಾಲ್, ಕಿಶೋರ್ ಬಿ., ವಿನೋದ್, ಮುಕೇಶ್, ರಮೇಶ್ ಮಾನವತ್, ಭರತ್, ಸುನಿಲ್ ಓಸ್ವಾಲ್, ಕಿಶೋರ್ ಬೋಟೆ, ರಾಜು ಭಂಡಾರಿ, ವಿನೋದ್ ಭಟ್ಟ ಕೋವಿಡ್ ಸೆಂಟರ್‌ ಸೇವೆಯಲ್ಲಿ ಸಕ್ರಿಯರಾಗಿದ್ದಾರೆ.

error: Content is protected !!