ದಾವಣಗೆರೆ, ಸೆ.2- ನಗರದ ಅಖ್ತರ್ ರಜಾ ಸರ್ಕಲ್ ರಿಂಗ್ ರೋಡ್ ರಸ್ತೆಯಿಂದ ಅಹಮದ್ ನಗರ, ಭಾಷಾ ನಗರ, ಆಜಾದ್ ನಗರ ಮುಖ್ಯ ರಸ್ತೆಯ ಅಗಲೀಕರಣದ ಸಂಬಂಧ ಬುಧವಾರ ಜಿಲ್ಲಾಡಳಿತದ ತಂಡದಿಂದ ಸ್ಥಳ ಪರಿಶೀಲನೆ ನಡೆಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ, ಸ್ಥಗಿತಗೊಂಡಿದ್ದ ಸ್ಮಾರ್ಟ್ ಸಿಟಿ ಯೋಜನೆಯ ಕಾಮಗಾರಿಗಳಿಗೆ ಮತ್ತೆ ಚಾಲನೆ ನೀಡಲು ಸ್ಥಳ ಪರಿಶೀಲನೆ ನಡೆಸಲಾಗುತ್ತಿದೆ. ಸರ್ಕಾರದ ಮಾರ್ಗ ಸೂಚಿ ಅನ್ವಯ ಅತಿಕ್ರಮಣ, ಒತ್ತುವರಿ ಸರಿಪಡಿಸಿ ರಸ್ತೆ ಕಾಮಗಾರಿ ಕೈಗೊಳ್ಳ ಲಾಗುವುದು ಎಂದು ಹೇಳಿದರು.
ಸ್ಥಳೀಯ ಶಾಸಕರ ನೆರವಿನೊಂದಿಗೆ ಈ ಭಾಗದ ಕಾರ್ಪೊರೇಟರ್ ಹಾಗೂ ಧಾರ್ಮಿಕ ಮುಖಂಡರು ಸೇರಿದಂತೆ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡಬೇಕು ಎನ್ನುವ ಉದ್ದೇಶ ದಿಂದ ಜಿಲ್ಲಾಡಳಿತ ತಂಡದೊಂದಿಗೆ ಸ್ಥಳ ಪರಿಶೀಲನೆ ಮಾಡಲಾಗಿದೆ.
ಸರ್ಕಾರದ ಮಾರ್ಗಸೂಚಿ ಅನ್ವಯ ಅತಿಕ್ರಮಣ, ಒತ್ತುವರಿ ಸರಿಪಡಿಸಿ ರಸ್ತೆ ಕಾಮಗಾರಿ ಕೈಗೊಳ್ಳಲಾಗುವುದು.
– ಮಹಾಂತೇಶ್ ಬೀಳಗಿ,ಜಿಲ್ಲಾಧಿಕಾರಿ
ಇದಾದ ಬಳಿಕ ಮೇಯರ್ ನೇತೃತ್ವದಲ್ಲಿ ಸಭೆ ನಡೆಸಲಾಗುತ್ತದೆ. ಈಗಾಗಲೇ ಮುಖಂಡರು, ಧಾರ್ಮಿಕ ಸಮಿತಿಯವರು ರಸ್ತೆ ಅಗಲೀಕರಣಕ್ಕೆ ಒತ್ತುವರಿ ತೆರವುಗೊಳಿಸಲು ಅಡ್ಡಿಯಿಲ್ಲ ಎಂದು ತಿಳಿಸಿದ್ದಾರೆ. ಇನ್ನೆರಡು ತಿಂಗಳಲ್ಲಿ ಕಾಮಗಾರಿ ಪ್ರಾರಂಭಿಸಲಾಗುವುದು ಎಂದು ತಿಳಿಸಿದರು.
ಮೇಯರ್ ಬಿ.ಜಿ.ಅಜಯ್ ಕುಮಾರ್ ಮಾತನಾಡಿ, ಸುಮಾರು ಮೂವತ್ತು ವರ್ಷದಿಂದ ರಸ್ತೆ ಅಗಲೀಕರಣವಾಗದ ಹಿನ್ನೆಲೆಯಲ್ಲಿ ಈ ಭಾಗದ ಧಾರ್ಮಿಕ ಮುಖಂಡರು ಹಾಗೂ ಸಾಕಷ್ಟು ಜನರು ಮನವಿ ಸಲ್ಲಿಸಿದ್ದರು. ಆದಷ್ಟು ಬೇಗ ರಸ್ತೆ ತೆರವುಗೊಳಿಸಿ 60 ಅಡಿ ರಸ್ತೆ ನಿರ್ಮಿಸಬೇಕು ಎಂಬುದು ಅವರ ಒತ್ತಾಯವಾಗಿತ್ತು. ಅದರಂತೆ ರಸ್ತೆ ಅಭಿವೃದ್ಧಿಪಡಿಸುವ ಕಾರ್ಯ ಕೈಗೊಳ್ಳಲಾಗುತ್ತಿದೆ ಎಂದರು.
ಮಹಾನಗರಪಾಲಿಕೆ ಇಂಜಿನಿಯರ್ಗಳು ಸರ್ವೇ ಮಾಡುತ್ತಿದ್ದಾರೆ. ನಂತರ ಯಾರ ಜಾಗ ಎಷ್ಟು ತೆರವುಗೊಳಿಸಬೇಕೆಂದು ಚರ್ಚಿಸಲಾಗುವುದು. ಬಳಿಕ ಶಾಸಕರು ಹಾಗೂ ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿ, ಕಾನೂನಿನಡಿ ಅಲ್ಲಿದ್ದವರಿಗೆ ಅನುಕೂಲ ಕಲ್ಪಿಸುವ ಅವಕಾಶವಿದ್ದರೆ ವ್ಯವಸ್ಥೆ ಮಾಡಲಾಗುವುದು ಎಂದರು.
ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಹನುಮಂತರಾಯ, ಪಾಲಿಕೆ ಆಯುಕ್ತ ವಿಶ್ವನಾಥ್ ಮುದಜ್ಜಿ ಇತರರು ಈಸಂದರ್ಭದಲ್ಲಿದ್ದರು.