ದಾವಣಗೆರೆ ವಿವಿ ಕಾರ್ಯಕ್ರಮದಲ್ಲಿ ಆಂಧ್ರಪ್ರದೇಶದ ಕೇಂದ್ರೀಯ ಬುಡಕಟ್ಟು ವಿಶ್ವವಿದ್ಯಾಲಯದ ಕುಲಪತಿ ಪ್ರೊ. ತೇಜಸ್ವಿ ಕಟ್ಟಿಮನಿ
ದಾವಣಗೆರೆ, ಆ.28- ದೇಶೀ ಮೂಲದ ಕಲೆ, ವಿಜ್ಞಾನ, ತಂತ್ರಜ್ಞಾನ, ವೃತ್ತಿ ಕೌಶಲ್ಯ, ಸಾಮಾಜಿಕ ಮೌಲ್ಯ, ಆಚರಣೆ, ಕೃಷಿ ಪದ್ಧತಿಗಳನ್ನು ಒಳಗೊಂಡ ಉನ್ನತ ಗುಣಮಟ್ಟದ ಶಿಕ್ಷಣ ನೀಡುವ ಆಶಯವನ್ನು ಕೇಂದ್ರ ಸರ್ಕಾರದ ನೂತನ ಶಿಕ್ಷಣ ನೀತಿಯು ಒಳಗೊಂಡಿದೆ. ಇದರ ಸಮರ್ಪಕ ಅನುಷ್ಠಾನ ಮತ್ತು ಭವ್ಯ ಭಾರತದ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರ ಅತ್ಯಂತ ಪ್ರಮುಖವಾಗಿದೆ ಎಂದು ಆಂಧ್ರಪ್ರದೇಶದ ಕೇಂದ್ರೀಯ ಬುಡಕಟ್ಟು ವಿಶ್ವವಿದ್ಯಾಲಯದ ಕುಲಪತಿ ಪ್ರೊ. ತೇಜಸ್ವಿ ಕಟ್ಟಿಮನಿ ಅಭಿಪ್ರಾಯಪಟ್ಟರು.
ದಾವಣಗೆರೆ ವಿಶ್ವವಿದ್ಯಾನಿಲಯ ಐಕ್ಯೂಎಸಿ ವತಿಯಿಂದ ಭಾರತೀಯ ಶಿಕ್ಷಣ ಮಂಡಳಿ ಸಹಯೋಗದಲ್ಲಿ ಇಂದು ಏರ್ಪಡಿಸಿದ್ದ ರಾಷ್ಟ್ರೀಯ ಮಟ್ಟದ ವೆಬಿನಾರ್ನಲ್ಲಿ ಮಾತನಾಡಿದ ಕಟ್ಟಿಮನಿ, ದೇಶಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದೆ. ತನ್ನದೇ ಆದ ಪರಂಪರೆ, ಸಂಸ್ಕೃತಿ, ಸಂಪ್ರದಾಯ, ಮೌಲ್ಯಗಳನ್ನು ಒಳಗೊಂಡಿದೆ. ಅನುಭವದಿಂದ ಕಂಡುಕೊಂಡ ಕೌಶಲ್ಯ, ವೃತ್ತಿ, ತಂತ್ರಜ್ಞಾನಗಳು ಆಧುನಿಕತೆಯ ಹೆಸರಿನಲ್ಲಿ ಅವನತಿ ಹೊಂದುತ್ತಿವೆ. ಆದರೆ ಅವುಗಳ ಮೌಲ್ಯಗಳನ್ನು ಅರ್ಥ ಮಾಡಿಕೊಂಡು, ಮತ್ತೆ ಅಳವಡಿಸಿಕೊಳ್ಳುವ, ಮುಖ್ಯವಾಹಿನಿಗೆ ತರುವ ಅವಶ್ಯಕತೆಗೆ ಹೊಸ ಶಿಕ್ಷಣ ನೀತಿ ನೆರವಾಗಲಿದೆ ಎಂದರು.
ಬಾಲ್ಯದ ಹಂತದಿಂದಲೇ ಮಕ್ಕಳಿಗೆ ದೇಶಾಭಿಮಾನ, ಸ್ವಾವಲಂಬನೆ, ಮಾನವೀಯ ಮತ್ತು ಸಾಮಾಜಿಕ ಮೌಲ್ಯಗಳನ್ನು ತಿಳಿಸುವ ಶಿಕ್ಷಣ ಸಿಗಲಿದೆ. ಮಾತೃ ಭಾಷೆಯ ಶಿಕ್ಷಣ ಮಕ್ಕಳ ಭವಿಷ್ಯಕ್ಕೆ ಬುನಾದಿ ಆಗಲಿದೆ. ಆತ್ಮವಿಶ್ವಾಸದಿಂದ ಬದುಕನ್ನು ನಡೆಸುವ, ಸಂಕಷ್ಟಗಳನ್ನು ಎದುರಿಸುವ ಸಾಮರ್ಥ್ಯವನ್ನು ರೂಢಿಸುವ ಶಕ್ತಿ ಹೊಸ ಶಿಕ್ಷಣ ನೀತಿಗೆ ಇದೆ. ಮಕ್ಕಳಲ್ಲಿ ಸ್ವತಂತ್ರ ಆಲೋಚನಾ ಶಕ್ತಿಯನ್ನು ವೃದ್ಧಿಸಿ, ಅವರ ಆಸಕ್ತಿಯ ವಿಷಯದಲ್ಲಿ ಜ್ಞಾನ ಪಡೆಯಲು ನೆರವಾಗಲು ಸಹಕಾರಿಯಾಗಲಿದೆ ಎಂದು ನೂತನ ಶಿಕ್ಷಣ ನೀತಿ ರಚನಾ ಸಮಿತಿ ಸದಸ್ಯರೂ ಆಗಿರುವ ಕುಲಪತಿ ಪ್ರೊ. ಕಟ್ಟಿಮನಿ ತಿಳಿಸಿದರು.
ಯಾವುದೇ ಸಾಧನೆಗೆ ಭಾಷೆ ಮುಖ್ಯವಾಗುತ್ತದೆ. ಅದೇ ಮಕ್ಕಳ ಕಲಿಕಾ ಮಟ್ಟಕ್ಕೂ ಕಾರಣವಾಗುತ್ತದೆ. ಇದನ್ನು ಅರಿತು ಮಾತೃಭಾಷೆಯಲ್ಲಿಯೇ ಆರಂಭಿಕ ಶಿಕ್ಷಣ ನೀಡಲು ಉದ್ದೇಶಿಸಿದೆ. ಇದರ ಜೊತೆಗೆ ಮಕ್ಕಳಿಗೆ ಸ್ಥಳೀಯವಾಗಿ ಲಭ್ಯವಿರುವ ಸಂಪನ್ಮೂಲಗಳ ಪರಿಚಯ, ಆಚರಣೆ, ಕೃಷಿ ಪದ್ಧತಿ, ಗಿಡ, ಮರ, ಬಳ್ಳಿಗಳನ್ನು ಪರಿಚಯಿಸುವ ಜೊತೆಗೆ ಸ್ಥಳೀಯ ಕಲೆ, ಸಾಹಿತ್ಯ, ಸಂಸ್ಕೃತಿ, ಹಬ್ಬ ಹರಿದಿನಗಳ ಆಚರಣೆ, ಊಟ, ಉಪಹಾರ, ಉಡುಗೆ, ತೊಡುಗೆ, ಕೆರೆಕಟ್ಟೆ, ನೀರಿನ ಸಂಗ್ರಹ, ದನಕರುಗಳ ನಿರ್ವಹಣೆಯನ್ನೂ ಅನುಭವದ ಮೂಲಕ ತಿಳಿಸುವುದಕ್ಕೆ ಆದ್ಯತೆ ನೀಡಲಾಗಿದೆ. ಇದರಿಂದ ಪ್ರತಿಯೊಬ್ಬ ಮಗುವು ಪರಿಪೂರ್ಣ ವ್ಯಕ್ತಿಯಾಗಿ ಹೊರಹೊಮ್ಮಲು ಸಾಧ್ಯವಾಗುತ್ತದೆ ಎಂದು ವಿವರಿಸಿದರು.
ಹಳ್ಳಿಗಳಿಂದ ಪಟ್ಟಣಕ್ಕೆ ವಲಸೆ ಹೋಗುವುದನ್ನು ತಪ್ಪಿಸಿ, ಹಳ್ಳಿಯಲ್ಲಿಯೇ ಪಟ್ಟಣದ ಸೌಲಭ್ಯ ಒದಗಿಸಲು ಒತ್ತು ನೀಡಬೇಕಾಗಿದೆ. ಇದಕ್ಕೆ ಸಂಬಂಧಿಸಿದಂತೆ ವಿಶ್ವವಿದ್ಯಾಲಯಗಳು ಗ್ರಾಮೀಣ ಪ್ರದೇಶಗಳನ್ನು ದತ್ತು ಪಡೆದು, ಸಮಗ್ರ ಅಧ್ಯಯನ ನಡೆಸಿ ವಲಸೆಯನ್ನು ತಪ್ಪಿಸಲು ಮುಂದಾಗಬೇಕು. ಅಲ್ಲದೆ ಸ್ಥಳೀಯವಾಗಿರುವ ವಿಶಿಷ್ಟ ವಿಚಾರಗಳ ಬಗ್ಗೆ ಅಧ್ಯಯನ ನಡೆಸಿ ಅದರ ಮೂಲ ಅಂಶಗಳನ್ನು, ಅದರೊಳಗೆ ಅಡಗಿರುವ ಮಹತ್ವದ ಸತ್ವಗಳನ್ನು ಜನರಿಗೆ ಪರಿಚಯಿಸುವ ಕೆಲಸವನ್ನೂ ಮಾಡಬೇಕಾಗಿದೆ ಎಂದು ಸಲಹೆ ನೀಡಿದರು.
ಕುಲಸಚಿವ ಪ್ರೊ. ಬಸವರಾಜ ಬಣಕಾರ ಮಾತನಾಡಿ, ಪಾರಂಪರಿಕ ಕೃಷಿ, ಗುಡಿ ಕೈಗಾರಿಕೆ, ವೈದ್ಯ ಪದ್ಧತಿಯಲ್ಲಿಯೂ ಸಾಕಷ್ಟು ವಿಜ್ಞಾನ, ತಂತ್ರಜ್ಞಾನ ಅಡಗಿದೆ. ಅದನ್ನು ಗುರುತಿಸಿ ಮಕ್ಕಳಿಗೆ ತಿಳಿಸಿದರೆ, ಅವರ ಭವಿಷ್ಯಕ್ಕೊಂದು ದಾರಿ ಆಗಲಿದೆ ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ದಾವಣಗೆರೆ ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಶರಣಪ್ಪ ವಿ. ಹಲಸೆ ಮಾತನಾಡಿ, ದೇಶೀ ಕಲೆ, ಸಾಹಿತ್ಯ, ವಿಜ್ಞಾನ, ತಂತ್ರಜ್ಞಾನವನ್ನು ಬಳಸಿಕೊಂಡು ಕಡಿಮೆ ಖರ್ಚಿನಲ್ಲಿ ಹೆಚ್ಚು ಪ್ರಯೋಜನಕಾರಿಯಾಗಿ ಉಪಯೋಗಿಸುವ ಕೌಶಲ್ಯಗಳನ್ನು ರೂಢಿಸಿಕೊಳ್ಳುವುದು ಮುಖ್ಯವಾಗಿದೆ ಎಂದು ನುಡಿದರು.
ಕುಲಸಚಿವರಾದ ಪ್ರೊ. ಎಚ್.ಎಸ್. ಅನಿತಾ ಮಾತನಾಡಿದರು. ಐಕ್ಯೂಎಸಿ ನಿರ್ದೇಶಕರಾದ ಪ್ರೊ. ಗಾಯತ್ರಿ ದೇವರಾಜ್ ಸ್ವಾಗತಿಸಿದರು. ಡಾ. ನಾಗಸ್ವರೂಪ ಕಾರ್ಯಕ್ರಮ ನಿರೂಪಿಸಿದರು.