ತೋಳಹುಣಸೆ ಗ್ರಾಮ ಪಂಚಾಯಿತಿಗೆ ಮುತ್ತಿಗೆ

ಪಾಮೇನಹಳ್ಳಿ ಗ್ರಾಮಸ್ಥರಿಂದ ನಿವೇಶನ ಹಂಚಿಕೆಗೆ ಒತ್ತಾಯ

ದಾವಣಗೆರೆ, ಆ.26- ಸೂರಿಲ್ಲದವರಿಗೆ ಸೂರು ಕಲ್ಪಿಸುವ ಸಲುವಾಗಿ ನಿವೇಶನಗಳ ಹಂಚಿಕೆಗೆ ಒತ್ತಾಯಿಸಿ, ಪಾಮೇನಹಳ್ಳಿ ಗ್ರಾಮಸ್ಥರು ತೋಳಹುಣಸೆ ಗ್ರಾಮ ಪಂಚಾಯ್ತಿಗೆ ಇಂದು ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

ಈ ಸಂದರ್ಭದಲ್ಲಿ ಸ್ಥಳಕ್ಕಾಗಮಿಸಿದ ಆನಗೋಡು ಕ್ಷೇತ್ರದ ಜಿ.ಪಂ. ಸದಸ್ಯ ಕೆ.ಎಸ್. ಬಸವಂತಪ್ಪ ಮಾತನಾಡಿ, ತಮ್ಮ ಗ್ರಾಮದ ಸಮಸ್ಯೆ ನನಗೆ ಅರ್ಥವಾಗಿದೆ. ಪಾಮೇನಹಳ್ಳಿ ಗ್ರಾಮದ ಸರ್ವೇ ನಂ.42 ಮತ್ತು 43 ರಲ್ಲಿ ಸುಮಾರು 5-20 ಎಕರೆ ಜಮೀನು ಮೀಸಲಿಟ್ಟಿದ್ದು, ಈಗಾಗಲೇ ಈ ಕುರಿತು ನನ್ನ ನೇತೃತ್ವದಲ್ಲಿ ಅನೇಕ ಸಲ ಈ ಕುರಿತು  ಪ್ರತಿಭಟನೆ ನಡೆಸಿರುತ್ತೇನೆ. ಈ ಹಿಂದೆ ಗ್ರಾಮ ಪಂಚಾಯಿತಿ ಸಭೆಯಲ್ಲಿ ನಿವೇಶನ ಹಂಚಿಕೆಗಾಗಿ ತೀರ್ಮಾನ  ಕೈಗೊಂಡಿದ್ದು, ಗ್ರಾಮ ಪಂಚಾಯಿತಿಯ ನಿರ್ಲಕ್ಷ್ಯದಿಂದಾಗಿ ನಿವೇಶನದ ಫಲಾನುಭವಿಗಳ ಪಟ್ಟಿಯನ್ನು  ಸಂಬಂಧಪಟ್ಟ ಅಧಿಕಾರಿಗಳಿಗೆ ಸಲ್ಲಿಸಲು ವಿಳಂಬ ಮಾಡುತ್ತಿರುತ್ತಾರೆ. ಈ ಕುರಿತು ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಗ್ರಾಮ ಪಂಚಾಯಿತಿಗೆ ಪಟ್ಟಿಯನ್ನು ಒದಗಿಸಲು ಸೂಚಿಸಿರುತ್ತಾರೆ ಎಂದು ತಿಳಿಸಿದರು.

ಈ ಕುರಿತು ನಾನೂ ಸಹ ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಹಾಗೂ ಪಿ.ಡಿ.ಓ. ಅವರ ಮೇಲೆ ಒತ್ತಡ ತಂದಿದ್ದು, ಶೀಘ್ರದಲ್ಲಿಯೇ ಗ್ರಾಮದ ನಿವೇಶನ ರಹಿತ ಫಲಾನುಭವಿಗಳ ಪಟ್ಟಿಯನ್ನು ಒದಗಿಸಲು ಸೂಚಿಸಲಾಗಿದೆ. ಇದಕ್ಕೆ ಗ್ರಾಮ ಪಂಚಾಯಿತಿ ಪಿ.ಡಿ.ಓ. ಗೀತಾ, ಕಾರ್ಯದರ್ಶಿ ಸೌಮ್ಯ ಒಪ್ಪಿರುವುದಾಗಿ  ಬಸವಂತಪ್ಪ ತಿಳಿಸಿದ ನಂತರ ಗ್ರಾಮಸ್ಥರು ಪ್ರತಿಭಟನೆಯನ್ನು ಹಿಂಪಡೆದುಕೊಂಡರು.

ಈ ಸಂದರ್ಭದಲ್ಲಿ ಮಂಜುನಾಥ್ ಗೌಡ್ರು, ಗ್ರಾ.ಪಂ. ಮಾಜಿ ಸದಸ್ಯರುಗಳಾದ ನಾಗರಾಜ್ ಪಾಮೇನಹಳ್ಳಿ, ಶೇಖರಪ್ಪ ತೋಳಹುಣಸೆ, ಶ್ರೀನಿವಾಸ್, ಗ್ರಾಮ ಮುಖಂಡರುಗಳಾದ ತಿಪ್ಪಣ್ಣ, ತಿರ್ಲಪ್ಪ ಮತ್ತಿತರರು ಭಾಗವಹಿಸಿದ್ದರು. ಸಬ್ ಇನ್‌ಸ್ಪೆಕ್ಟರ್‌ ಸಂಜೀವ್‌ಕುಮಾರ್ ನೇತೃತ್ವದಲ್ಲಿ ಬಂದೋಬಸ್ತ್‌ ಏರ್ಪಡಿಸಲಾಗಿತ್ತು.

error: Content is protected !!