ಕಾನ್ಸ್‌ಟೇಬಲ್ ಸನಾವುಲ್ಲಾ ವಿರುದ್ಧ ಹಿಂಜಾವೇ ಪ್ರತಿಭಟನೆ

ದಾವಣಗೆರೆ, ಆ.26- ರಾಷ್ಟ್ರದ್ರೋಹಿ ಕೃತ್ಯ ಎಸಗಿರುವ ಇಲ್ಲಿನ ಪೊಲೀಸ್ ಕಾನ್ಸ್ ಟೇಬಲ್ ಸನಾವುಲ್ಲಾ ಅವರನ್ನು ಕರ್ತವ್ಯದಿಂದ ವಜಾಗೊಳಿಸಬೇಕು ಎಂದು ಆಗ್ರಹಿಸಿ ಹಿಂದೂ ಜಾಗರಣಾ ವೇದಿಕೆ ವತಿಯಿಂದ ನಗರದಲ್ಲಿ  ಮೊನ್ನೆ ಪ್ರತಿಭಟನೆ ನಡೆಸಲಾಯಿತು.

ಜಯದೇವ ವೃತ್ತದಲ್ಲಿ ಜಮಾಯಿಸಿದ್ದ ಪ್ರತಿಭಟನಾಕಾರರು, ದೇಶ ವಿರೋಧಿ ಪೋಸ್ಟ್ ಮಾಡಿದ ಪೊಲೀಸ್ ಕಾನ್ಸ್ ಟೇಬಲ್ ಸನಾವುಲ್ಲಾ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಹಿಂಜಾವೇ ಮುಖಂಡ ಹಾಗೂ ಪಾಲಿಕೆ ಸ್ಥಾಯಿ ಸಮಿತಿ ಅಧ್ಯಕ್ಷ ಎಸ್.ಟಿ. ವೀರೇಶ್ ಮಾತನಾಡಿ, ಕಾನ್ಸ್ ಟೇಬಲ್ ಸನಾವುಲ್ಲಾ ಪಾಕ್ ಪರ ಲಿಂಕ್ ಶೇರ್ ಮಾಡುತ್ತಾನೆಂದರೆ ಆತನ ಬಗ್ಗೆ ಸಹಜವಾಗಿಯೇ ಅನುಮಾನ ಹುಟ್ಟುತ್ತದೆ. 2014ರಲ್ಲಿ ತನ್ನ ಕುಕೃತ್ಯದಿಂದ ಆತ ಅಮಾನತ್ತುಗೊಂಡಿದ್ದ. ಆತನನ್ನು ತಕ್ಷಣವೇ ಸೇವೆಯಿಂದ ವಜಾಗೊಳಿಸಿ, ಇಡೀ ಪ್ರಕರಣವನ್ನು ರಾಷ್ಟ್ರೀಯ ತನಿಖಾ ದಳಕ್ಕೆ ಒಪ್ಪಿಸಬೇಕು ಎಂದು ಒತ್ತಾಯಿಸಿದರು.

2014ರಲ್ಲೂ ಇಂತಹದ್ದೇ ಕೃತ್ಯಕ್ಕಾಗಿ ಆತ ಅಮಾನತ್ತುಗೊಂಡಿದ್ದರೂ ಚಾಳಿ ಬಿಟ್ಟಿಲ್ಲ. ವಿನೋಬ ನಗರ, ನಿಜಲಿಂಗಪ್ಪ ಬಡಾವಣೆ, ಅಮೃತಾನಂದಮಯಿ ಶಾಲೆ ಬಳಿ ಮುಸ್ಲಿಂ ಯುವಕರ ಗುಂಪು ಕಟ್ಟಿ ಕೊಂಡು ಹುಡುಗರಿಗೆ ಹೊಡೆಯುವುದು, ಅವಾಚ್ಯವಾಗಿ ನಿಂದಿಸುವು ದನ್ನು ಮಾಡುತ್ತಾ ಬಂದಿದ್ದಾನೆ ಎಂದು ದೂರಿದರು.

ಯುವ ಮುಖಂಡ ಎನ್. ರಾಜಶೇಖರ್ ಮಾತನಾಡಿ, ಪೊಲೀಸ್ ಇಲಾಖೆಯಲ್ಲಿದ್ದು, ಮುಸ್ಲಿಂ ಹುಡುಗರ ಗುಂಪು ಕಟ್ಟಿಕೊಂಡು ನೈತಿಕ ಪೊಲೀಸ್‍ಗಿರಿ ಮಾಡುತ್ತಿದ್ದ ಸನಾವುಲ್ಲಾ ಬಗ್ಗೆ ಜನರೇ ದೂರುತ್ತಾರೆ. ಈ ಮಾನಸಿಕತೆ ಇರುವ ಸನಾವುಲ್ಲಾ ಬಗ್ಗೆ ಆಳವಾದ ತನಿಖೆ ಅತ್ಯಗತ್ಯವೆಂದರು.

ಶಿವಮೊಗ್ಗ ವಿಭಾಗ ಸಂಪರ್ಕ ಪ್ರಮುಖ ಸತೀಶ ಪೂಜಾರಿ ಮಾತನಾಡಿದರು.

ಪ್ರತಿಭಟನೆಯಲ್ಲಿ ಮುಖಂಡರಾದ ಮೃತ್ಯುಂಜಯ ಉಪ್ಪಿನ್, ವಿಶ್ವನಾಥ, ಲೋಕೇಶ್, ಮನು, ಪುನೀತ್, ಕೊಟ್ರೇಶ, ಮಂಜುನಾಥ, ಪವನ್, ಚೇತನ್, ರಾಕೇಶ, ಈರಣ್ಣ, ಗಣೇಶ, ಕಲ್ಲೇಶ, ತಿಮ್ಮಣ್ಣ, ಶ್ರೀನಿವಾಸ, ಜಗದೀಶ, ಸಂತೋಷ್, ಯು.ಆರ್.ಅರುಣ ಕುಮಾರ, ಕೆ.ಗಣೇಶ ಸುರ್ವೆ,  ಹರೀಶ ಪವಾರ್, ಅನಿಕ್ ಕುಟ್ಪಾಟೆ, ಕೃಷ್ಣಮೂರ್ತಿ ಬೋಸ್, ಮಂಜುನಾಥ, ರವೀಂದ್ರಾಚಾರ್, ಮಿಥುನ್ ಗಾಯಕವಾಡ್, ಸೋಮೇಶ, ವಿಕಾಸ್, ರುದ್ರೇಶ, ಸಿ.ಎಸ್. ರಾಜು ಸೇರಿದಂತೆ ಇತರರು ಪಾಲ್ಗೊಂಡಿದ್ದರು.

error: Content is protected !!