ಕೋವಿಡ್ ಕರಿನೆರಳು : ಗಣೇಶನ ಹಬ್ಬ ಸರಳ ಆಚರಣೆ

ಹರಪನಹಳ್ಳಿ, ಆ.23-  ಕೊರೊನಾ ಭಯ  ಗಣಪತಿಯ ಹಬ್ಬದ ಮೇಲೆ ಸಾಕಷ್ಟು ಪ್ರಭಾವ ಬಿರಿದ್ದು, ಈ ಬಾರಿ ತಾಲ್ಲೂಕಿನಲ್ಲಿ ವಿಘ್ನ ನಿವಾರಕನ ಹಬ್ಬ ತಾಲ್ಲೂಕಿನಲ್ಲಿ  ಕೋವಿಡ್  ಆತಂಕದಿಂದ  ಸರಳ ಸಂಪ್ರದಾಯಕ್ಕೆ ಸೀಮಿತವಾಗಿದೆ. 

ಪಟ್ಟಣದಲ್ಲಿ 24 ಹಾಗೂ ಗ್ರಾಮೀಣ ಭಾಗದಲ್ಲಿ 241 ಸಾರ್ವಜನಿಕ ಗಣೇಶ ಮೂರ್ತಿಗಳು ಪ್ರತಿಷ್ಠಾಪನೆ ಗೊಂಡಿದ್ದವು. ಅದರಲ್ಲಿ ಪಟ್ಟಣದಲ್ಲಿ 4 ಹೊರತು ಪಡಿಸಿ ಉಳಿದ 20 ಗಣೇಶ ಮೂರ್ತಿಗಳು ಹಾಗೂ ಗ್ರಾಮೀಣ ಭಾಗದಲ್ಲಿ 49 ಹೊರತು ಪಡಿಸಿ ಉಳಿದ 192 ಗಣಪತಿಗಳು ಅಂದರೆ ಒಟ್ಟು 212 ಗಣೇಶಮೂರ್ತಿಗಳು ಒಂದೇ ದಿನ ಅಂದರೆ ಬೆಳಿಗ್ಗೆ ಪ್ರತಿಷ್ಠಾಪನೆಗೊಂಡು ಸಂಜೆ ಹೊತ್ತಿಗೆ ವಿಸರ್ಜನೆಗೊಂಡವು.

ಹಿಂದೂ ಮಹಾಗಣಪತಿ ಸೇರಿದಂತೆ ತಾಲ್ಲೂಕಿನಲ್ಲಿ 53 ಸಾರ್ವಜನಿಕ ಗಣೇಶ ಮೂರ್ತಿಗಳು ನಾಳೆ ದಿನಾಂಕ 24ರ ರಂದು ಸೋಮವಾರ ಸಂಜೆ ವಿಸರ್ಜನೆಗೊಳ್ಳಲಿವೆ.

ಹಿಂದೂ ಮಹಾಗಣಪತಿ : ಪಟ್ಟಣದ ಕೋಟೆ ಆಂಜನೇಯ ದೇವಸ್ಥಾನದ ಆವರಣದಲ್ಲಿ ವಿಶ್ವ ಹಿಂದೂ ಪರಿಷತ್ ಹಾಗೂ ಭಜರಂಗದಳ ಕಾರ್ಯಕರ್ತರು ನಿರ್ಮಿಸಿರುವ ಹಿಂದೂ ಮಹಾಗಣಪತಿ ನಾಲ್ಕುವರೆ ಅಡಿ ಇದ್ದು, ಪೂಜಾ ವಿಧಿ ವಿಧಾನಗಳು ಮಾತ್ರ ಜರುಗಿದವು. ಹಿರೇಹಡಗಲಿಯ ಶ್ರೀ ಅಭಿನವ ಹಾಲಸ್ವಾಮಿಗಳ ಮಾರ್ಗದರ್ಶನದಲ್ಲಿ ವಿಎಚ್‌ಪಿ ಅಧ್ಯಕ್ಷ ಎಚ್.ಎಂ.ಜಗದೀಶ್, ಅಶೋಕ ಜಿ.ರಾವಲ್, ನಿಟ್ಟೂರು ಸುರೇಶ್, ಅಶೋಕ್ ಹಿಂದೂಸ್ಥಾನಿ, ಭರತ್ ಭೂದಿ, ಕಡೇಮನಿ ಸಂಗಮೇಶ್, ದ್ಯಾಮಜ್ಜಿ ಹನುಮಂತ, ಅಜ್ಜಯ್ಯ, ನರಸಿಂಹ ಆಲೂರು, ಛತ್ರಿಪತಿ ಹಾಲೇಶ್, ಮಂಜುನಾಥ ಕೂಲಹಳ್ಳಿ, ವೀರೂ ಹಿಂದೂಸ್ಥಾನಿ, ಕುಲದೀಪ ರಾಹುಲ ಇತರರು ಸಂಘಟಿಸಿದ್ದರು. 

ಐ.ಬಿ. ಸರ್ಕಲ್‌ನಲ್ಲಿ ಸ್ನೇಹ ಸಿಂಚನಾ ಫ್ರೆಂಡ್ಸ್ ಗ್ರೂಪ್‌ನಿಂದ ಮಿನಿ ಗೂಡ್ಸ್ ವಾಹನ ದಲ್ಲಿ ಸ್ಥಾಪಿಸಿದ್ದ ಗಣೇಶನನ್ನು ಒಂದೇ ದಿನಕ್ಕೆ ಸೀಮಿತಗೊಳಿಸಿ ವಿಸರ್ಜನೆ ಮಾಡಲಾಯಿತು. ಪದಾಧಿಕಾರಿಗಳಾದ ರಾಜು, ಕೋಟೆಪ್ಪ, ಅಜ್ಜಯ್ಯ, ಕಿಟ್ಟಿ, ಗಿರಿ, ಮಲ್ಲ, ಗಣೇಶ್, ಮಂಜು, ರಾಮ ಇತರರು ಸಂಘಟಿಸಿದ್ದರು.

ಗಜಾನನ ಯುವಕ ಮಂಡಳಿಯವರು ಬಣಗಾರ ಪೇಟೆಯಲ್ಲಿ,  ಕೆಂಪೇಶ್ವರ ದೇಗುಲದಲ್ಲಿ, ನೀಲಗಾರ ಓಣಿ ಶಿವನ ದೇವಸ್ಥಾನದಲ್ಲಿ, ಜೋಯಿಸರ ಓಣಿಯಲ್ಲಿ ಹೀಗೆ ಅಲ್ಲಲ್ಲಿ ದೇವಸ್ಥಾನಗಳಲ್ಲಿ ಗಣೇಶ ಮೂರ್ತಿಗಳನ್ನು ಸ್ಥಾಪನೆ ಮಾಡಿ ಅದ್ಧೂರಿ ಇಲ್ಲದೆ ಸರಳವಾಗಿ ಹಬ್ಬ ಆಚರಿಸಲಾಯಿತು.

ಅನೇಕರು ಪ್ರತಿಷ್ಠಾಪನೆ ಮಾಡಿದ ದಿನ ಸಂಜೆಯೇ ಆಟೊಗಳ ಮೂಲಕ ಸದ್ದುಗದ್ದಲವಿಲ್ಲದೆ ಪುರಸಭೆಯವರು ನಿರ್ಮಿಸಿದ್ದ ನೀರಿನ ಹೊಂಡಕ್ಕೆ ತೆರಳಿ ಮೂರ್ತಿಗಳನ್ನು ವಿಸರ್ಜನೆ ಮಾಡಿದರು.

error: Content is protected !!