ಮತ್ತೆ ಕಲ್ಯಾಣ ಅಂತರ್ಜಾಲ ಉಪನ್ಯಾಸ ಮಾಲಿಕೆಯಲ್ಲಿ ಸಾಣೇಹಳ್ಳಿ ಶ್ರೀಗಳು
ಸಾಣೇಹಳ್ಳಿ, ಆ.6- ವ್ಯಕ್ತಿಯ ಆಸೆ ಆಶಯವಾದಾಗ ವ್ಯಕ್ತಿತ್ವ ಮತ್ತು ಸಾಮಾಜಿಕ ಬದುಕು ಕಳೆಗಟ್ಟುವುದು. ಆಸೆ ಆಶಯವಾಗಿ ಬದಲಾಗಬೇಕು. ಬಸವಾದಿ ಶರಣರಿಗಿದ್ದ ಆಶಯ ಆತ್ಮಕಲ್ಯಾಣ ಮತ್ತು ಲೋಕಕಲ್ಯಾಣವಾಗಿತ್ತು ಎಂದು ಸಾಣೇಹಳ್ಳಿ ಶ್ರೀ ಪಂಡಿತಾರಾಧ್ಯ ಸ್ವಾಮಿಗಳು ನುಡಿದರು.
ಶ್ರೀ ತರಳಬಾಳು ಜಗದ್ಗುರು ಶಾಖಾ ಸಾಣೇಹಳ್ಳಿ ಶ್ರೀಮಠದಿಂದ ಆಯೋಜನೆಗೊಂಡಿರುವ `ಮತ್ತೆ ಕಲ್ಯಾಣ ಅಂತರ್ಜಾಲ ಉಪನ್ಯಾಸ ಮಾಲಿಕೆ’ಯ ಐದನೆಯ ದಿನದ ಕಾರ್ಯಕ್ರಮದಲ್ಲಿ ಶ್ರೀಗಳು ಮಾತನಾಡಿದರು.
ಮನುಷ್ಯನ ಆಸೆಗೆ ಮಿತಿ ಇಲ್ಲ. ಆದರೆ ಆಸೆಯೇ ಬದುಕಿನ ಬಂಡವಾಳ. ಆಸೆ ದುರಾಸೆ ಆದರೆ ಅಪಾಯ ತಪ್ಪಿದ್ದಲ್ಲ. ಶರಣರು ವ್ಯಕ್ತಿಗತ ಬದುಕಿಗೆ ಹತ್ತು ಹಲವು ರೀತಿಯ ಚೌಕಟ್ಟುಗಳನ್ನು ತಮ್ಮಷ್ಟಕ್ಕೆ ತಾವೇ ಹಾಕಿಕೊಂಡು ಅದರಂತೆ ಬದುಕಿದವರು. ಹೀಗಾಗಿ ಅವರು ಪ್ರಚಲಿತದಲ್ಲಿದ್ದ ಅನೇಕ ರೀತಿಯ ಮೌಢ್ಯಗಳನ್ನು, ಅಸಮಾನತೆಗಳನ್ನು ತೊಡೆಯಲು, ಕಲ್ಯಾಣ ರಾಜ್ಯವನ್ನು ಕಟ್ಟಲು ಸಾಧ್ಯವಾಯಿತು ಎಂದರು.
ಜ್ಞಾನ-ಕ್ರಿಯೆ ಒಂದಾಗಬೇಕು ಎನ್ನುವುದು ಶರಣರ ಆಶಯವಾಗಿತ್ತು. ಇಂದಿನ ದುಡಿಯುವ ಜನರಿಗೆ ಜ್ಞಾನದ, ಜ್ಞಾನವಿದ್ದವರಿಗೆ ಕ್ರಿಯೆಯ ಕೊರತೆ ಎದ್ದು ಕಾಣುತ್ತಿದೆ. ಇವೆರಡರ ಸಮ್ಮಿಲನವೇ ಶರಣರ ತತ್ವ-ಸಿದ್ಧಾಂತಗಳ ಆಶಯ. ಬಡವ-ಶ್ರೀಮಂತ, ಜ್ಞಾನಿ-ಅಜ್ಞಾನಿ, ಗಂಡು-ಹೆಣ್ಣು, ವರ್ಗ-ವರ್ಣ ಮುಂತಾದ ತಾರತಮ್ಯ ಸಮಾಜದಲ್ಲಿ ಉಂಟಾಗಿರುವುದಕ್ಕೆ ಜ್ಞಾನ-ಕ್ರಿಯೆಗಳು ಒಂದಾಗದಿರುವುದೇ ಕಾರಣ. ಜ್ಞಾನ-ಕ್ರಿಯೆಗಳನ್ನು ಒಂದಾಗಿಸಿಕೊಂಡಾಗ ಅದ್ಭುತ ಸಾಧನೆ ಸಾಧ್ಯ. ವಚನಗಳ ಬೆಳಕಿನಲ್ಲಿ ನಾವು ನಮ್ಮ ಆತ್ಮಕಲ್ಯಾಣದ ಜೊತೆ ಲೋಕಕಲ್ಯಾಣವನ್ನೂ ಮಾಡಿಕೊಳ್ಳಬೇಕಾಗಿದೆ ಎಂದು ಕರೆ ನೀಡಿದರು.
§ವಚನಕಾರರ ಆಶಯ¬ ಕುರಿತಂತೆ ಡಂಬಳ-ಗದಗದ ಶ್ರೀ ಜಗದ್ಗುರು ತೋಂಟದಾರ್ಯ ಸಂಸ್ಥಾನ ಮಠದ ಜಗದ್ಗುರು ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳು ಮಾತನಾಡಿ, ವಚನಕಾರರದು ವಿವಿಧತೆಯಲ್ಲಿ ಏಕತೆಯನ್ನು ಕಾಣುವ ಮನೋಭಾವ ಹೊಂದಿದ್ದರು. ವಚನಕಾರರ ಮೇಲು, ಕೇಳು, ಜಾತಿ, ಮತ, ಪಂಥ, ಸ್ತ್ರೀ, ಪುರುಷ ಭೇದವಿಲ್ಲದ ಮಾನವೀಯ ಸಮ ಸಮಾಜದ ಹೋರಾಟ ಮತ್ತೆ ಮತ್ತೆ ಕಲ್ಯಾಣವನ್ನು ನೆನಪಿಗೆ ತರುತ್ತದೆ. ಈ ಹಿನ್ನೆಲೆಯಲ್ಲಿಯೇ ಅವರು ಜನರಾಡುವ ಭಾಷೆಯಲ್ಲಿಯೇ ವಚನಗಳನ್ನು ಅಭಿವ್ಯಕ್ತಿಗೊಳಿಸಿದರು. ಈ ಮೂಲಕ ಸಾಮಾಜಿಕ, ಧಾರ್ಮಿಕ, ಸಾಂಸ್ಕೃತಿಕವಾಗಿ ಆಮೂಲಾಗ್ರ ಪರಿವರ್ತನೆ ತರುವುದು ಅವರ ಆಶಯವಾಗಿತ್ತು ಎಂದರು.
ವಚನಕಾರರು ಬಹುದೇವೋಪಾಸನೆಯನ್ನು ನಿರಾಕರಿಸಿ ಏಕದೇವಾಪಾಸನೆಯನ್ನು ಪುರಸ್ಕರಿಸಿದರು. ಈ ಹಿನ್ನೆಲೆಯಲ್ಲಿಯೇ ಬಸವಣ್ಣನವರು ಇಷ್ಟಲಿಂಗದ ಪರಿಕಲ್ಪನೆಯನ್ನು ಸಾಕಾರಗೊಳಿಸಿದರು. ಇದು ಸಾಮಾಜಿಕ ಮತ್ತು ಧಾರ್ಮಿಕವಾಗಿ ಬಹು ಮಹತ್ವದ್ದು. ಇದರಿಂದ ಲೋಕಕಲ್ಯಾಣ ಮತ್ತು ಆತ್ಮಕಲ್ಯಾಣ ಎರಡನ್ನೂ ಸಾಧಿಸಬಹುದು ಎಂದರು. ಇಷ್ಟಲಿಂಗವನ್ನು ನಿರ್ಲಕ್ಷಿಸಿದವರನ್ನು ವಚನಕಾರರು ತೀವ್ರ ಮಾತುಗಳ ಮೂಲಕ ಛೇಡಿಸಿದ್ದಾರೆ ಎಂದರು.
ಆರಂಭದಲ್ಲಿ ಶಿವಸಂಚಾರದ ಕಲಾವಿದರಾದ ಕೆ. ಜ್ಯೋತಿ, ಕೆ. ದಾಕ್ಷಾಯಣಿ ಮತ್ತು ಹೆಚ್. ಎಸ್. ನಾಗರಾಜ್ ತಬಲ ಸಾಥಿ ಶರಣ್ ಕುಮಾರ್ ಸುಶ್ರಾವ್ಯವಾಗಿ ವಚನಗೀತೆಗಳನ್ನು ಹಾಡಿದರು.