ದಾವಣಗೆರೆ, ಆ 17- ಸಾರ್ವಜನಿಕ ಗಣಪತಿ ಪ್ರತಿಷ್ಠಾಪನೆಗೆ ಅನುಮತಿ ನೀಡುವಂತೆ ಶ್ರೀರಾಮ ಸೇನೆಯು ಜಿಲ್ಲಾಡಳಿತವನ್ನು ಆಗ್ರಹಿಸಿದೆ.
ಇಂದಿಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸೇನೆಯ ರಾಜ್ಯ ಕಾರ್ಯಾಧ್ಯಕ್ಷ ಗಂಗಾಧರ ಕುಲಕರ್ಣಿ, ನಾವು ಕೋವಿಡ್ ಎಲ್ಲಾ ನಿಯಮ ಪಾಲಿಸಲು ಸಿದ್ಧರಿದ್ದೇವೆ. ಸರ್ಕಾರವು ಸಂಪ್ರದಾಯ ಮುರಿಯದಂತೆ ಆಚರಣೆಗೆ ಅನುವು ಮಾಡಿಕೊಡಬೇಕು ಎಂದು ಒತ್ತಾಯಿಸಿದರು.
ಒಂದು ವೇಳೆ ಸರ್ಕಾರ ಅನುಮತಿ ನೀಡದಿದ್ದರೂ ಕೋವಿಡ್ ನಿಯಮವಾಳಿ ಅನ್ವಯವೇ ನಾವು ಉತ್ಸವ ಆಚರಿಸುತ್ತೇವೆ. ನಮ್ಮನ್ನು ಬಂಧಿಸುವುದಾದರೆ ಬಂಧಿಸಲಿ. ಜೈಲಿನಲ್ಲಿದ್ದೇ ಗಣಪತಿ ಹಬ್ಬ ಆಚರಿಸುತ್ತೇವೆ ಎಂದು ಕುಲಕರ್ಣಿ ತಮ್ಮ ನಿಲುವು ಸ್ಪಷ್ಟಪಡಿಸಿದರು.
ಬಾರ್, ಮಾಲ್ ಗಳ ವ್ಯಾಪಾರ ವಹಿವಾಟಿಗೆ ಅವಕಾಶ ನೀಡಿದ ಸರ್ಕಾರ, ಕೊರೊನಾ ಸೋಂಕಿನ ನೆಪದಲ್ಲಿ ಸಾರ್ವಜನಿಕ ಗಣೇಶ ಉತ್ಸವವನ್ನು ನಿಷೇಧಿಸಿದೆ. ಇದು ಸರ್ಕಾರದ ಲಜ್ಜೆಗೇಡಿತನ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಾಲಗಂಗಾಧರ ತಿಲಕ್ ಅವರ ಆಶಯದಂತೆ 125 ವರ್ಷಗಳಿಂದ ಗಣೇಶೋತ್ಸವ ಆಚರಿಸಲಾಗುತ್ತಿದೆ. ಈ ಉತ್ಸವ ದೇಶವನ್ನು ಏಕಸೂತ್ರದಲ್ಲಿ ಬಂಧಿಸುತ್ತದೆ. ಈ ಹಬ್ಬ ನಿಷೇಧ ಸರಿಯಲ್ಲ. ಹಿಂದೂಗಳ ಭಾವನೆಗೆ ಸರ್ಕಾರ ಮನ್ನಣೆ ನೀಡಬೇಕು. ಈ ಬಗ್ಗೆ ಜಿಲ್ಲಾಧಿಕಾರಿ ಗಳಿಗೂ ಮನವಿ ಸಲ್ಲಿಸುವುದಾಗಿ ಹೇಳಿದರು.
ಡಿ.ಜಿ.ಹಳ್ಳಿ ಘಟನೆ ಪೂರ್ವ ನಿಯೋಜಿತ ಕೃತ್ಯ: ಕೆ.ಜಿ. ಹಳ್ಳಿ ಹಾಗೂ ಡಿ.ಜಿ. ಹಳ್ಳಿ ಗಲಭೆ ಪೂರ್ವ ನಿಯೋ ಜಿತ ಕೃತ್ಯವಾಗಿದೆ. ಇದರಲ್ಲಿ ಪಿಎಫ್ಐ, ಎನ್ಡಿಪಿಐ ಸಂಘಟನೆ ಕೈವಾಡವಿದೆ. ವಿರೋಧ ಪಕ್ಷದಲ್ಲಿದ್ದಾಗಲೇ ಬಿಜೆಪಿ ಈ ಸಂಘಟನೆಗಳ ನಿಷೇಧಕ್ಕೆ ಆಗ್ರಹಿಸಿತ್ತು. ಈಗ ಬಿಜೆಪಿಯದ್ದೇ ಅಧಿಕಾರವಿದ್ದರೂ ಸಂಘಟನೆ ನಿಷೇಧಕ್ಕೆ ಮೀನಾ ಮೇಷ ಎಣಿಸುತ್ತಿದೆ ಎಂದು ಆರೋಪಿಸಿದರು. ತಕ್ಷಣ ಪಿಎಫ್ಐ ಹಾಗೂ ಎಸ್ಡಿಪಿಐ ಸಂಘಟನೆ ನಿಷೇಧಿಸುವಂತೆ ಒತ್ತಾಯಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಶ್ರೀರಾಮ ಸೇನೆಯ ರಾಜ್ಯ ಸಂಪರ್ಕ ಪ್ರಮುಖ್ ಪರಶುರಾಮ ನಡುಮನಿ, ಜಿಲ್ಲಾಧ್ಯಕ್ಷ ಮಣಿ ಸರ್ಕಾರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿನೋದ್ ರಾಜ್, ಜಿಲ್ಲಾ ಸಂಪರ್ಕ ಪ್ರಮುಖ್ ಕುಮಾರ್ ನಾಯಕ, ಶ್ರೀಧರ್, ಸಾಗರ್, ಕರಾಟೆ ರಮೇಶ್ ಉಪಸ್ಥಿತರಿದ್ದರು.