ರೈತ ವಿರೋಧಿ ಕಾಯ್ದೆಗಳನ್ನು ಕೈಬಿಡಲು ಆಗ್ರಹ

ಗ್ರಾಮ ಪಂಚಾಯ್ತಿಗಳ ಎದುರು ಪ್ರತಿಭಟನೆ

ದಾವಣಗೆರೆ, ಆ.14- ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ರೈತ ವಿರೋಧಿ ನೀತಿಗಳಾದ ಭೂಮಿ ಕಾಯ್ದೆ , ಎಪಿಎಂಸಿ ಕಾಯ್ದೆ , ವಿದ್ಯುತ್ ಖಾಸಗೀಕರಣ ಕೈಬಿಡುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ನೇತೃತ್ವದಲ್ಲಿ ಇಂದು ಗ್ರಾಮ ಪಂಚಾಯ್ತಿಗಳ ಎದುರು ಪ್ರತಿಭಟನೆ ನಡೆಸಲಾಯಿತು.

ತಾಲ್ಲೂಕಿನ ಕನಗೊಂಡನಹಳ್ಳಿ ಗ್ರಾಮ ಪಂಚಾಯ್ತಿ ಕಚೇರಿ ಹತ್ತಿರ ಹಾಗೂ ಕುಕ್ಕವಾಡ ಗ್ರಾಮ ಪಂಚಾಯ್ತಿಯ ಎದುರು ಜಮಾಯಿಸಿದ್ದ ಆ ಭಾಗದ ರೈತರು, ಪ್ರತಿಭಟನಾ ಧರಣಿ ನಡೆಸಿ ಭೂಮಿ ಕಾಯ್ದೆ, ಎಪಿಎಂಸಿ ಕಾಯ್ದೆ, ವಿದ್ಯುತ್ ಖಾಸಗಿಕರಣ ತಿದ್ದುಪಡಿ ಕಾಯ್ದೆಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.

ಭೂಮಿ ಕಾಯ್ದೆ ಈ ಹಿಂದೆ ಉಳುವವನೆ ಒಡೆಯ, ಭೂಮಿಯಿಂದಲೇ ಬದುಕು ಕಟ್ಟಿಕೊಂಡ ರೈತರೇ ಭೂಮಿಯನ್ನು ಖರೀದಿ ಮಾಡಬಹುದೆಂದು ಕಾಯ್ದೆ ಇದ್ದು, ಈಗ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಉಳ್ಳವನೇ ಒಡೆಯ ಎಂಬಂತೆ ಶ್ರೀಮಂತರ ಪರವಾಗಿ ಕಾಯ್ದೆ ರೂಪಿಸಿದೆ. ಹಾಗಾದರೆ ರೈತರು ಸಾಕು ಪ್ರಾಣಿ ಗಳಾದ ಕುರಿ, ಕೋಳಿ, ಮೇಕೆ , ಹಂದಿ , ಎತ್ತ-ಆಕಳು , ಎಮ್ಮೆ ಸೇರಿದಂತೆ ಇತರೆ ಸಾಕು ಪ್ರಾಣಿ ಗಳನ್ನು ಎಲ್ಲಿಗೆ ಕಳುಹಿಸಬೇಕು ಹಾಗೂ ಎಲ್ಲಿ ಸಾಕಬೇಕು  ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ಎಪಿಎಂಸಿ ಕಾಯ್ದೆ ತಿದ್ದುಪಡಿಯಿಂದ ಎಪಿಎಂಸಿ ಯಲ್ಲಿ ನೂರಾರು ವರ್ಷಗಳಿಂದ ಆಹಾರ ಧಾನ್ಯಗಳ ವ್ಯಾಪಾರ-ವಹಿವಾಟು ಮಾಡುತ್ತಿದ್ದು, ಗುರುತು ಬಲ್ಲವರು ಹಾಗೂ ಮುಖ ಪರಿಚಯವಿರುವಂತಹ ವ್ಯಕ್ತಿಗಳು ವ್ಯಾಪಾರ ಮಾಡುತ್ತಿದ್ದರು. ಈ ಕಾಯ್ದೆಯಿಂದ ಬೇರೆ ದೇಶ ಮತ್ತು ಬೇರೆ ರಾಜ್ಯಗಳ ಶ್ರೀಮಂತರು ಆಹಾರ ಧಾನ್ಯ ವಹಿವಾಟು ಮಾಡಿದ್ದಕ್ಕೆ ಹಾಗೂ ರೈತರಿಗೆ ಅನ್ಯಾಯವಾದಲ್ಲಿ ರೈತರು ಯಾರನ್ನು ಕೇಳಬೇಕು. ಸರ್ಕಾರವೋ ಆಥವಾ ವ್ಯಾಪಾರಿಯೋ ಎಂಬುದು ರೈತರ ಗೋಳಾಗಿದೆ. ಕೇಂದ್ರ ಸರ್ಕಾರವು ವಿದ್ಯುತ್ ಕಾಯ್ದೆಯನ್ನು ತಿದ್ದುಪಡಿ ಮಾಡಿ, ಖಾಸಗೀ ಕಂಪನಿಯವರಿಗೆ ವಹಿಸಿರುದೆ. ಈ ಹಿಂದೆ ವಿದ್ಯುತ್ ಸರ್ಕಾರದ ಸಹಭಾಗಿತ್ವದಲ್ಲಿದ್ದು, ರೈತರ ಪಂಪ್‌ಸೆಟ್‌ಗೆ ಉಚಿತವಾಗಿ ನೀಡುತ್ತಿದ್ದು, ರೈತರು ದೇಶದ 138 ಕೋಟಿ ಜನರಿಗೆ ಆಹಾರ ಧಾನ್ಯಗಳನ್ನು ಬೆಳೆಯುತ್ತಿದ್ದು, ಶ್ರೀಮಂತ ಕಂಪನಿಗಳು ರೈತರಿಗೆ ಯಾವುದೇ ಕಾರಣಕ್ಕೂ ಉಚಿತ ವಿದ್ಯುತ್ ನೀಡುವುದಿಲ್ಲ.‌ ದೇಶದಲ್ಲಿ ಆಹಾರ ಧಾನ್ಯದ ಕೊರತೆಯಾಗುತ್ತದೆ ಎಂದು‌ ಆಕ್ಷೇಪಿಸಿದರು.

ಪ್ರತಿಭಟನೆಯಲ್ಲಿ ಸಂಘಟನೆಯ ರಾಜ್ಯ ಕಾರ್ಯದರ್ಶಿ ಬಲ್ಲೂರು ರವಿಕುಮಾರ್, ಜಿಲ್ಲಾಧ್ಯಕ್ಷ ಕಬ್ಬಳ ಪ್ರಸಾದ್, ಕಾರ್ಯದರ್ಶಿ ಆನಗೋಡು ಭೀಮಣ್ಣ, ಜಿಲ್ಲಾ ಸಂಚಾಲಕ ಚಿನ್ನಸಮುದ್ರ ರಮೇಶ್ ನಾಯ್ಕ, ತಾಲ್ಲೂಕು ಗೌರವಾಧ್ಯಕ್ಷ   ಭೀಮಾನಾಯ್ಕ, ತಾಲ್ಲೂಕು ಅಧ್ಯಕ್ಷ ಮಾಯಕೊಂಡ ನಿಂಗಣ್ಣ ಸೇರಿದಂತೆ ಇತರರು ಭಾಗವಹಿಸಿದ್ದರು.

error: Content is protected !!