ಜಗಳೂರು, ಆ. 12- ಕೊರೊನಾ ನಿಯಂತ್ರಣಕ್ಕೆ ಗ್ರಾಮೀಣ ಪ್ರದೇಶದ ಆಶಾ ಕಾರ್ಯಕರ್ತರು ಮಾಡಿದ ಸೇವೆ ಶ್ಲ್ಯಾಘನೀಯ ಎಂದು ಶಾಸಕ ಎಸ್.ವಿ. ರಾಮಚಂದ್ರ ಹೇಳಿದರು.
ಪಟ್ಟಣದ ತರಳಬಾಳು ಕೇಂದ್ರದಲ್ಲಿ ಜಿಲ್ಲಾಡಳಿತ ಹಾಗೂ ಸಹಕಾರ ಇಲಾಖೆ ಮತ್ತು ಸಹಕಾರ ಸಂಘಗಳ ಆಶ್ರಯದಲ್ಲಿ ನಿನ್ನೆ ಆಯೋಜಿಸಿದ್ದ ಸಮಾರಂಭದಲ್ಲಿ ತಾಲ್ಲೂಕಿನ 173 ಆಶಾ ಕಾರ್ಯಕರ್ತರಿಗೆ ರೂ. 3000 ಪ್ರೋತ್ಸಾಹ ಧನ ಚೆಕ್ ವಿತರಿಸಿ ಅವರು ಮಾತನಾಡಿದರು.
ಆಶಾ ಕಾರ್ಯಕರ್ತೆಯರು ತಮ್ಮ ಪ್ರಾಣದ ಹಂಗು ತೊರೆದು ಧೈರ್ಯವಾಗಿ ನಿಯಂತ್ರಣ ಕಾರ್ಯದಲ್ಲಿ ಸೇವೆ ಮಾಡಿದ್ದಾರೆ. ಬೇಡಿಕೆಗಳಿಗೆ ಒತ್ತಾಯಿಸಿ, ಮುಷ್ಕರ ನಡೆಸಿರುವುದು ನನ್ನ ಗಮನಕ್ಕೆ ಬಂದಿದೆ. ಆಡಳಿತ ಪಕ್ಷದ ಶಾಸಕನಾಗಿ ನಾನು ಆಶಾ ಕಾರ್ಯಕರ್ತರ ಬೇಡಿಕೆಗಳ ಪರವಾಗಿ ಸರ್ಕಾರದಲ್ಲಿ ಧ್ವನಿ ಎತ್ತುತ್ತೇನೆ ಎಂದು ಶಾಸಕರು ಭರವಸೆ ನೀಡಿದರು.
ಕೊರೊನಾ ಕಾರ್ಯದಲ್ಲಿ ಕೆಲಸ ನಿರ್ವಹಿಸಿದ ಆಶಾ ಕಾರ್ಯಕರ್ತರಿಗೆ ಸರ್ಕಾರ ಯಾವುದೇ ವಿಶೇಷ ಅನುದಾನ, ವೇತನ ನೀಡಿಲ್ಲ. ಆದರೂ ಅವರು ಸಮಾಜದ ಸ್ವಾಸ್ಥ್ಯ ಕಾಪಾಡುವಲ್ಲಿ ಶ್ರಮಿಸಿದ್ದಾರೆ ಎಂದು ಶಾಸಕರು ತಿಳಿಸಿದರು.
ಜಗಳೂರು ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಉತ್ತಮ ಮಳೆಯಾಗಿದ್ದು, ಉತ್ತಮ ಫಸಲು ಬೆಳೆದು ನಿಂತಿದೆ. ರೈತರ ಮುಖದಲ್ಲಿ ಮಂದಹಾಸ ಮೂಡಿದೆ. ಜಿಲ್ಲಾ ಸಹಕಾರ ಬ್ಯಾಂಕ್ ಅಧ್ಯಕ್ಷರು ತಾಲ್ಲೂಕಿನ ರೈತರಿಗೆ ಹೆಚ್ಚಿನ ಸಾಲ ಸೌಲಭ್ಯ ಒದಗಿಸಿಕೊಡಬೇಕೆಂದು ಒತ್ತಾಯಿಸಿದರು.
ಜಿಲ್ಲಾ ಸಹಕಾರ ಬ್ಯಾಂಕ್ ಅಧ್ಯಕ್ಷ ಷಣ್ಮುಖಪ್ಪ ಮಾತನಾಡಿ, ಆಶಾ ಕಾರ್ಯಕರ್ತರ ಸೇವೆ ಶ್ಲ್ಯಾಘನೀಯವಾಗಿದೆ. ಸರ್ಕಾರದ ಸೂಚನೆಯಂತೆ ಇಲಾಖಾ ವತಿಯಿಂದ ಜಿಲ್ಲೆಯ ಎಲ್ಲಾ ಆಶಾ ಕಾರ್ಯಕರ್ತರಿಗೆ ತಲಾ 3000 ರೂ. ಪ್ರೋತ್ಸಾಹ ಧನ ನೀಡಲಾಗಿದೆ. ಈ ಮೂಲಕ ಆಶಾ ಕಾರ್ಯಕರ್ತರನ್ನು ಗೌರವಿಸಲಾಗಿದೆ ಎಂದರು.
ತಾಲ್ಲೂಕಿಗೆ ಈವರೆಗೂ 43 ಕೋಟಿ ರೂ. ಸಾಲವನ್ನು ವಿಎಸ್ಸೆಸ್ಸೆನ್ ಮೂಲಕ ವಿತರಿಸಲಾಗಿದೆ. ಶಾಸಕರ ಮನ ವಿಯ ಮೇರೆಗೆ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಸಾಲ ವಿತರಿ ಸಲು ಕ್ರಮ ಕೈಗೊಳ್ಳುವುದಾಗಿ ಅಧ್ಯಕ್ಷರು ಭರವಸೆ ನೀಡಿದರು.
ಜಿಲ್ಲೆಯಲ್ಲಿ ಯೂರಿಯಾ ಗೊಬ್ಬರದ ಕೊರತೆ ಉಂಟಾಗಿದೆ. ಜಿಲ್ಲೆಯ ಸಂಸದರು, ಶಾಸಕರುಗಳು, ರೈತರಿಗೆ ಯೂರಿಯಾ ಗೊಬ್ಬರ ದೊರೆಯುವಂತೆ ಮಾಡಬೇಕು. ಹೆಚ್ಚಿನ ಪ್ರಮಾಣದಲ್ಲಿ ಯೂರಿಯಾ ಗೊಬ್ಬರವನ್ನು ಜಿಲ್ಲೆಗೆ ಮಂಜೂರು ಮಾಡಿಸಬೇಕು ಎಂದು ಷಣ್ಮುಖಪ್ಪ ಒತ್ತಾಯಿಸಿದರು.
ಸಮಾರಂಭದಲ್ಲಿ ಡಿಸಿಸಿ ಬ್ಯಾಂಕ್ ನಿರ್ದೇಶಕ ವೇಣುಗೋಪಾಲ ರೆಡ್ಡಿ, ಜಿಪಿ ಶರಣಪ್ಪ, ಜಿ.ಪಂ. ಸದಸ್ಯ ಎಸ್.ಕೆ. ಮಂಜುನಾಥ್, ಭೂಮೇಶ್ ಮಾತನಾಡಿದರು.
ವೇದಿಕೆಯಲ್ಲಿ ಹಿರಿಯ ಸಹಕಾರಿ ಧುರೀಣ ಬಿ.ವಿ. ಚಂದ್ರಶೇಖರ್, ನಿರ್ದೇಶಕರಾದ ಸ್ವಾಮಿ, ಜಿ.ಪಂ. ಉಪ ಕಾರ್ಯದರ್ಶಿ ಆನಂದ್, ಡಿಸಿಸಿ ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕ ಲಕ್ಷ್ಮಣ್, ಎಪಿಎಂಸಿ ಅಧ್ಯಕ್ಷ ರೇಣುಕಾನಂದ, ಪ್ರಭಾರ ತಹಶೀಲ್ದಾರ್ ರಾಮಚಂದ್ರಪ್ಪ, ತಾ.ಪಂ. ಇಓ ಮಲ್ಲನಾಯಕ್, ಸಿಪಿಐ ದುರುಗಪ್ಪ, ವೈದ್ಯಾಧಿಕಾರಿ ಡಾ. ನಾಗರಾಜ್, ಹಿರಿಯ ಕ್ಷೇತ್ರ ಅಧಿಕಾರಿ ಹಾಲಸ್ವಾಮಿ, ತಾಲ್ಲೂಕು ಬಿಜೆಪಿ ಅಧ್ಯಕ್ಷ ಹೆಚ್.ಸಿ. ಮಹೇಶ್, ವಿಎಸ್ಎಸ್ಎನ್ ಅಧ್ಯಕ್ಷ ಬಿಸ್ತುವಳ್ಳಿ ಬಾಬು ಸೇರಿದಂತೆ ಸಹಕಾರ ಇಲಾಖೆಯ ಅಧಿಕಾರಿಗಳು ಭಾಗವಹಿಸಿದ್ದರು.