ಡಿ.ಸಿ.ಎಂ. ರೈಲ್ವೆ ಸೇತುವೆ ಸಂಚಾರಕ್ಕೆ ಮುಕ್ತ: ಸಂಸದ

ದಾವಣಗೆರೆ, ಆ. 11-  ನಗರದ  ಡಿ.ಸಿ.ಎಂ. ಟೌನ್‍ಶಿಪ್ ಬಳಿಯ ರೈಲ್ವೆ ಗೇಟ್ ಮೇಲು ಸೇತುವೆ ಶೀಘ್ರವೇ ಸುಗಮ ಸಂಚಾಲಕ್ಕೆ ಮುಕ್ತವಾಗಲಿದೆ ಎಂದು ಸಂಸದ ಜಿ.ಎಂ. ಸಿದ್ದೇಶ್ವರ ಹೇಳಿದ್ದಾರೆ.

ಈ ಸೇತುವೆಯನ್ನು ಈ ಹಿಂದೆ ಅವೈಜ್ಞಾನಿಕವಾಗಿ ನಿರ್ಮಾಣ ಮಾಡಲಾಗಿತ್ತು, ಸೇತುವೆ ಕೆಳಭಾಗದಲ್ಲಿ ಅಂಕುಡೊಂಕಾದ ರಸ್ತೆ ನಿರ್ಮಾಣ ಮಾಡಿದ ಹಿನ್ನೆಲೆಯಲ್ಲಿ ವಾಹನ ಸಂಚಾರ ದುಸ್ತರವಾಗಿತ್ತು.

ಚಿಕ್ಕಜಾಜೂರು-ಹುಬ್ಬಳ್ಳಿ ರೈಲ್ವೆ ಡಬ್ಲಿಂಗ್ ಯೋಜನೆಯಡಿ ಸದರಿ ಸೇತುವೆ ಮೇಲೆ ಕೇವಲ ಒಂದು ಹಳಿಗೆ ಮಾತ್ರ 120 ಮೀಟರ್ ಉದ್ದದ ಸ್ಟೀಲ್ ಗರ್ಡರ್ ನಿರ್ಮಾಣ ಮಾಡಿ ಇನ್ನೊಂದನ್ನು ಯತಾಸ್ಥಿತಿಯಲ್ಲಿ ಉಳಿಸಿಕೊಳ್ಳಲು ರೈಲ್ವೆ ಇಲಾಖೆಯವರು ಚಿಂತನೆ ನಡೆಸಿದ್ದರು. ಆಗ ಸ್ಥಳ ಪರಿಶೀಲನೆ ನಡೆಸಿದ ಸಂಸದರು ಒಂದು ಹಳಿಗೆ ಮಾತ್ರ ಸ್ಟೀಲ್ ಗರ್ಡರ್ ಅಳವಡಿಸಲು ಬಿಡುವುದಿಲ್ಲ, ಎರಡೂ ಹಳಿಗಳಿಗೂ 120 ಮೀಟರ್ ಉದ್ದದ ಸ್ಟೀಲ್ ಗರ್ಡರ್ ನಿರ್ಮಾಣ ಮಾಡಿ, ಅದೇ ರೀತಿ ಕೆಳಸೇತುವೆಯನ್ನು ಒಡೆದುಹಾಕಿ ರಸ್ತೆಯನ್ನು ನೇರ ಮಾಡಿಕೊಡಿ ಎಂದು ಪಟ್ಟು ಹಿಡಿದಿದ್ದರು.

ನೈರುತ್ಯ ರೈಲ್ವೆ ಮಹಾಪ್ರಬಂಧಕ ಅಶೋಕ್ ಸಿಂಗ್‍ರವರನ್ನು ಸದರಿ ಸೇತುವೆಯ ಸ್ಥಳಕ್ಕೆ ಕರೆದೊಯ್ದು ಮನದಟ್ಟು ಮಾಡಿಸಿದ್ದರು. ಸಂಸದರ ಮನವಿಗೆ ಸ್ಪಂದಿಸಿದ ರೈಲ್ವೆ ಇಲಾಖೆ, ಬಾಕಿ ಉಳಿದ ಇನ್ನೊಂದು ಹಳಿಗೆ ಸ್ಟೀಲ್ ಗರ್ಡರ್ ಹಾಗೂ ನೇರ ರಸ್ತೆ ನಿರ್ಮಾಣ ಮಾಡಲು 10 ಕೋಟಿ ಅನುದಾನ ನೀಡಿತ್ತು. ಸದರಿ ಕಾಮಗಾರಿ ಈಗ ಭರದಿಂದ ಸಾಗುತ್ತಿದ್ದು. ಒಂದರೆಡು ತಿಂಗಳ ಒಳಗಾಗಿ ಡಿ.ಸಿ.ಎಂ. ರೈಲ್ವೆ ಸೇತುವೆ ವಾಹನಗಳ ಸುಗಮ ಸಂಚಾರಕ್ಕೆ ಮುಕ್ತವಾಗಲಿದೆ ಎಂದರು.

ಸದರಿ ಕೆಳಸೇತುವೆ ಕಾಮಗಾರಿಯನ್ನು ಇಂದು ಸಂಸದರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ಗುರುಮೂರ್ತಿ, ನಟರಾಜ್ ಸೇರಿದಂತೆ ಇತರರು ಸಂಸದರ ಜೊತೆಗಿದ್ದರು.

error: Content is protected !!