ಹರಪನಹಳ್ಳಿ : ಹೆಚ್ಚಿನ ದರದಲ್ಲಿ ರಸಗೊಬ್ಬರ ಮಾರಾಟ – ಅಂಗಡಿಗಳಿಗೆ ನೋಟೀಸ್ ಜಾರಿ

ಹರಪನಹಳ್ಳಿ, ಆ.10- ತಾಲ್ಲೂಕಿನಲ್ಲಿ ನಿಗದಿತ ದರಕ್ಕಿಂತ ರಸಗೊಬ್ಬರವನ್ನು ಹೆಚ್ಚಿನಲ್ಲಿ ದರದಲ್ಲಿ ಮಾರಾಟ ಮಾಡಿದ ಆರೋಪದ ಮೇಲೆ ಅಂತಹ ಅಂಗಡಿಗಳಿಗೆ ನೋಟಿಸ್ ನೀಡಲಾಗಿದೆ ಎಂದು ಸಹಾಯಕ ಕೃಷಿ ನಿರ್ದೇಶಕ ಮಂಜುನಾಥ್‌ ಗೊಂದಿ ಹೇಳಿದರು.

ಪಟ್ಟಣದ ತಾ.ಪಂ. ರಾಜೀವ್‌ಗಾಂಧಿ ಸಭಾಂಗಣದಲ್ಲಿ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾಹಿತಿ ನೀಡಿದ ಅವರು, ಬೀಜ, ಗೊಬ್ಬರಗಳನ್ನು ನಿಗದಿತ ದರಕ್ಕಿಂತ ಹೆಚ್ಚಿನ ದರದಲ್ಲಿ ಮಾರಾಟ ಮಾಡುವ ಕುರಿತು ಕಂಡು ಬಂದಲ್ಲಿ ಅಂತಹ ರಸಗೊಬ್ಬರ ಅಂಗಡಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗವುದು ಎಂದು ತಿಳಿಸಿದರು. ಮಳೆ ಬಂದ ಹಿನ್ನೆಲೆಯಲ್ಲಿ ರೈತರು ಸಾಕಷ್ಟು ಹಾಕಿದ್ದರಿಂದ ಯೂರಿಯಾ ಗೊಬ್ಬರದ ಕೊರತೆ ತಾಲ್ಲೂಕಿನಲ್ಲಿ ಕಂಡು ಬಂದಿದ್ದು, ಪುನಃ ಇದೀಗ 500 ಟನ್ ಯೂರಿಯಾ ತರಿಸಲಾಗುತ್ತದೆ. ಯೂರಿಯಾ ಗೊಬ್ಬರವನ್ನು ನಿಗದಿತ ಪ್ರಮಾಣ ಬಿಟ್ಟು ಹೆಚ್ಚಿಗೆ ಹಾಕಬಾರದು. ಅದರಲ್ಲೂ ಮೆಕ್ಕೆಜೋಳ ಸೂಲಂಗಿ ಬರುವ ಸಂದರ್ಭದಲ್ಲಿ ಹಾಕಲೇ ಬಾರದು ಎಂದು ಅವರು ರೈತರಿಗೆ ಸಲಹೆ ನೀಡಿದರು.

ತಾ.ಪಂ. ಉಪಾಧ್ಯಕ್ಷ ಎಲ್.ಮಂಜಾನಾಯ್ಕ ಮಾತನಾಡಿ, ಯೂರಿಯಾ ಕೊರತೆಯಾಗದಂತೆ ನೋಡಿ ಕೊಳ್ಳಿ. ಅದರಲ್ಲೂ ಸಮಯಕ್ಕೆ ಸರಿಯಾಗಿ ಗೊಬ್ಬರ ಸಿಗಬೇಕು ಎಂದು ಅವರು ಸೂಚಿಸಿದರು. ಗ್ರಾಮೀಣ ಭಾಗದಲ್ಲಿ ಗ್ರಾಮದ ಕುಡಿಯುವ ನೀರಿಗೆ ಸಂಬಂಧಪಟ್ಟಂತೆ ವಿದ್ಯುತ್ ಸಂಪರ್ಕದ ಸುರಕ್ಷತಾ ಕ್ರಮ ಕೈಗೊಳ್ಳಬೇಕು ಎಂದು ಬೆಸ್ಕಾಂ ಹರಪನಹಳ್ಳಿ ಉಪವಿಭಾಗದ ಎಇಇ ಭೀಮಪ್ಪ ಹೇಳಿದರು. ಒಂದೊಂದು ಗ್ರಾ.ಪಂ. ಗಳಲ್ಲಿ ಮಾಸಿಕ ವಿದ್ಯುತ್ ಬಿಲ್ 7-8 ಲಕ್ಷ ರೂ. ವರೆಗೂ ಇದೆ ಎಂದು ತೆಲಿಗಿ ಉಪವಿಭಾಗದ ಎಇಇ ಜಯಪ್ಪ ತಿಳಿಸಿದರು. ಆಗ ತಾ.ಪಂ ಸ್ಥಾಯಿ ಸಮಿತಿ ಅಧ್ಯಕ್ಷ ಕೆಂಚನಗೌಡ ಅವರು, ಗ್ರಾಮಗಳಲ್ಲಿ ಬೀದಿ ದೀಪ ಹಗಲು – ರಾತ್ರಿ ಬೆಳಗಿದರೆ ಹೇಗೆ, ಸಿಬ್ಬಂದಿ ಬೇಜವಾಬ್ದಾರಿಯಿಂದ ಕೆಲಸ ಮಾಡುತ್ತಿದ್ದಾರೆ ಎಂದು ಅವರು ಬೇಸರ ವ್ಯಕ್ತ ಪಡಿಸಿದರು.

ತಾ.ಪಂ. ಉಪಾಧ್ಯಕ್ಷ ಮಂಜನಾಯ್ಕ ಮಾತನಾಡಿ, ತಾ.ಪಂ.ನಲ್ಲಿ ಲಕ್ಷಾಂತರ ಹಣ ಪೋಲಾಗುತ್ತದೆ. ನೀರಗಂಟಿ ಹಾಗೂ ಪಿಡಿಒಗಳು ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಪಡಿತರವನ್ನು ಸಮರ್ಪಕವಾಗಿ ವಿತರಣೆ ಮಾಡದ ಕಾರಣ ತಾಲ್ಲೂಕಿನಲ್ಲಿ ನಾಲ್ಕು ನ್ಯಾಯ ಬೆಲೆ ಅಂಗಡಿಗಳನ್ನು ಅಮಾನತ್ತು ಮಾಡಲಾಗಿದೆ ಎಂದು ಆಹಾರ ಇಲಾಖೆಯ ಅಧಿಕಾರಿ ತಿಳಿಸಿದರು.

ತಾಲ್ಲೂಕಿನಲ್ಲಿ 586 ವಠಾರ ಶಾಲೆಗಳನ್ನು ಆರಂಭಿಸಲಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಎಂ.ವೀರಭದ್ರಯ್ಯ ತಿಳಿಸಿದರು. 

ತಾ.ಪಂ ಅಧ್ಯಕ್ಷರಾದ ಅನ್ನಪೂರ್ಣಮ್ಮ ಅವರು ತಾ.ಪಂ ಗೆ ಅನುದಾನ ಬಾಯಲ್ಲಿ ಮಾತ್ರ ಬರುತ್ತದೆ. ಕೈಗೆ ಬರಲ್ಲ, ಈ ವರ್ಷದಲ್ಲಿ ಅನುದಾನವೇ ಬಂದಿಲ್ಲ ಎಂದ ಅವರು, ತಾ.ಪಂ.ನಲ್ಲಿ ಈಗ ಏನು ಉಳಿದಿಲ್ಲ. ಇನ್ನು ನಮ್ಮ ಅವಧಿ ಸಹ 7-8 ತಿಂಗಳು ಉಳಿದಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಇಒ ಅನಂತರಾಜ್‌, ಯೋಜನಾಧಿಕಾರಿ ವಿಜಯಕುಮಾರ್‌ ಹಾಜರಿದ್ದರು.

error: Content is protected !!