ದೇಶದ ವಿಕಾಸಕ್ಕಾಗಿ ಕಾಲಕ್ಕೆ ತಕ್ಕಂತೆ ಕಾಂಗ್ರೆಸ್ ಶ್ರಮಿಸಿದೆ

ಹರಪನಹಳ್ಳಿ,ಡಿ.29- ಕಾಂಗ್ರೆಸ್ ಪಕ್ಷವು ತ್ಯಾಗ, ಬಲಿದಾನದ ಮೂಲಕ ಕಟ್ಟಿದಂತಹ ಪಕ್ಷವಾಗಿದೆ. ದೇಶದ ಸ್ವಾತಂತ್ರ್ಯಕ್ಕಾಗಿ ಅನೇಕ ಕಾಂಗ್ರೆಸ್ ಮಹನೀಯರು ತಮ್ಮ ಪ್ರಾಣವನ್ನೇ ಒತ್ತೆ ಇಟ್ಟಿದ್ದಾರೆ ಎಂದು ಕೆಪಿಸಿಸಿ ಮಹಿಳಾ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ.ಪಿ.ಲತಾ ಮಲ್ಲಿಕಾರ್ಜುನ್ ಹೇಳಿದರು. 

ಪಟ್ಟಣದ ಕಾಂಗ್ರೆಸ್ ಕಛೇರಿಯಲ್ಲಿ ಕಾಂಗ್ರೆಸ್ ಪಕ್ಷದ 136ನೇ ಸಂಸ್ಥಾಪನಾ ದಿನವನ್ನು ಸಮರ್ಪಣಾ ದಿನವನ್ನಾಗಿ ಆಚರಿಸಲಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. 

ಸ್ವಾತಂತ್ರ್ಯ ಸಂಗ್ರಾಮದಲ್ಲಿ ಬಹುತೇಕ ಕಾಂಗ್ರೆಸ್ಸಿಗರು ದೇಶಕ್ಕಾಗಿ ಪ್ರಾಣ ಕೊಟ್ಟಿದ್ದಾರೆ. ಆಯಾ ಕಾಲಕ್ಕೆ ತಕ್ಕ ಬೇಡಿಕೆಯಂತೆ ಹೋರಾಟಗಳನ್ನು ಮಾಡಿ ರಾಜಕೀಯ ಮತ್ತು ಆರ್ಥಿಕ, ಸಾಮಾಜಿಕ ಬೆಳವಣಿಗೆಗೆ
ಕೊಡುಗೆ ನೀಡಿದ್ದಾರೆ. ಇದು ಕೆಲವೇ ಜನರ ಪಕ್ಷವಲ್ಲ. ಇದೊಂದು ದೇಶದ ಜನರೇ ನಡೆಸುತ್ತಿರುವ ಪಕ್ಷವಾಗಿದೆ. ಆದರೂ, ಬಿಜೆಪಿ ಮತ್ತು ಸಂಘ ಪರಿವಾರದವರು ಕಾಂಗ್ರೆಸ್ ಏನು ಮಾಡಿದೆ, ಏನು ಮಾಡಿದೆ ಎಂದು ಪ್ರಶ್ನಿಸುತ್ತಾರೆ. ಇವರಿಗೆ ಕಾಂಗ್ರೆಸ್ ಕೊಡುಗೆ ಕಾಣುತ್ತಿಲ್ಲವೇ ಎಂದು ಪ್ರಶ್ನಿಸಿದರು.

ಸಾಮಾಜಿಕ ನ್ಯಾಯದಡಿ ಸ್ಥಾಪಿತವಾಗಿರುವ ಕಾಂಗ್ರೆಸ್ ಪಕ್ಷವು ಇಂದಿಗೂ ದಲಿತರು, ಹಿಂದುಳಿದವರು, ಅಲ್ಪಸಂಖ್ಯಾತರು ಸೇರಿದಂತೆ ಎಲ್ಲಾ ವರ್ಗದ ಹಿತ ಕಾಯುವ ಕೆಲಸ ಮಾಡುತ್ತಿದೆ. ದೇಶಕ್ಕೆ ಕಾಂಗ್ರೆಸ್ ಪಕ್ಷ
ಅಪಾರ ಕೊಡುಗೆ ನೀಡಿದೆ. ಸ್ವಾತಂತ್ರ್ಯ ಸಂಗ್ರಾಮದಿಂದ ಹಿಡಿದು ಮನಮೋಹನ ಸಿಂಗ್ ಅವರವರೆಗೂ ದೇಶದ ಸಮಗ್ರ ವಿಕಾಸಕ್ಕಾಗಿ ಕಾಲಕ್ಕೆ ತಕ್ಕಂತೆ ಶ್ರಮಿಸಿದೆ. ಕಾಂಗ್ರೆಸ್ ಪಕ್ಷವೊಂದೇ ದೇಶದ ಬದ್ಧತೆ ಮತ್ತು ಸಮಗ್ರತೆಗಾಗಿ ಚಿಂತನೆ ಮಾಡಿ ಪಕ್ಷದ ನಾಯಕರು ಕೆಲಸ ಮಾಡಿದ್ದಾರೆ ಎಂದರು. 

ಬ್ರಿಟಿಷರಿಂದ ದೇಶವನ್ನು ಮುಕ್ತ ಮಾಡುವಾಗಲೂ ನಮ್ಮ ನಾಯಕರು ತಮ್ಮ ಜೀವವನ್ನೇ ಬಲಿದಾನ ಮಾಡಿದ್ದಾರೆ.  ಬಿಜೆಪಿಯವರು ನಮ್ಮ ದೇಶ, ನಾವು ಹಿಂದೂ ಎನ್ನುವ ಹೆಸರಿನಲ್ಲಿ ರಾಜಕೀಯ ಮಾಡಿ ಜನರಲ್ಲಿರುವ ಒಗ್ಗಟ್ಟು ಹೊಡೆಯುವ ಪ್ರಯತ್ನವನ್ನು ನಿರಂತರವಾಗಿ ಮಾಡುತ್ತಲೇ ಬರುತ್ತಿದ್ದಾರೆ ಎಂದು ದೂರಿದರು. 

ತಾ.ಪಂ ಮಾಜಿ ಸದಸ್ಯೆ ಕಂಚಿಕೇರಿ ಜಯಲಕ್ಷ್ಮಿ, ರವಿ ಯುವ ಶಕ್ತಿ ಅಧ್ಯಕ್ಷ ಉದಯ ಶಂಕರ್, ಕಾರ್ಯದರ್ಶಿ ಮತ್ತೂರು ಬಸವ ರಾಜ್, ಮುಖಂಡರಾದ ಮಟ್ಟೇರ ಮುತ್ತಣ್ಣ, ಉಮಾಶಂಕರ್, ಸುಧಾ, ಹಾಲಮ್ಮ, ಯಡಿಹಳ್ಳಿ ರಾಜೇಂದ್ರ, ಬಾಗಳಿ ಹರ್ಷವರ್ಧನ್, ಕೊಟ್ರೇಶ್, ಅಲ್ಮರಸೀಕೆರೆ ಮಂಜುನಾಥ್‍, ಬಾಗಳಿ ಕೊಟ್ರೇಶ್, ಅಡವಿಹಳ್ಳಿ ಪೂಜಾರ್ ರಾಜು, ಚಿಕ್ಕಹಳ್ಳಿ ಶಿವರಾಜ್, ಮಂಜಣ್ಣ, ಆನಂದ್, ಎಂ.ಶಿವರಾಜ್, ನಾಗರಾಜ್, ವಿ.ಹನುಮಂತ, ಪಿ.ಬಸವರಾಜ್, ಸುನೀಲ್, ಜಿ.ಮಂಜುನಾಥ, ಅಂಜಿನಪ್ಪ ಮತ್ತಿತರರು ಉಪಸ್ಥಿತರಿದ್ದರು. 

error: Content is protected !!