ಕೆ.ಆರ್. ರಸ್ತೆ ಎಂಬ ಅಪಘಾತಗಳ ರಸ್ತೆ

ದಾವಣಗೆರೆ, ಡಿ.17- ನಗರದ ಕೆ.ಆರ್‌. ರಸ್ತೆ (ಬೇತೂರು ರಸ್ತೆ) ಇಲ್ಲಿ ಪ್ರತಿದಿನ ಹತ್ತಾರು ಚಿಕ್ಕಪುಟ್ಟ ಅಪಘಾತಗಳು, ಸವಾರರು ಜಗಳವಾಡುವ ದೃಶ್ಯಗಳು ಸಾಮಾನ್ಯವಾಗಿವೆ.

ಪೂರ್ವ ದಿಕ್ಕು ಜಗಳೂರು ಕಡೆಯಿಂದ ಉತ್ತರ ದಿಕ್ಕು ಹರಪನಹಳ್ಳಿಯಿಂದ ಬರುವ ವಾಹನಗಳು ಸಂಗಮಗೊಳ್ಳುವುದು ಅರಳಿಮರ ಸರ್ಕಲ್‌ನಲ್ಲಿ. ಪ್ರಸ್ತುತ ಭಾರೀ ವಾಹನಗಳಿಗೆ ಈ ರಸ್ತೆ ಒಮ್ಮುಖ ರಸ್ತೆಯಾಗಿ ಸಂಚಾರಿ ಪೊಲೀಸ್‌ ಇಲಾಖೆಯಿಂದ ನಾಮಫಲಕ ಹಾಕಿದರೂ   `ಕ್ಯಾರೇ’ ಎನ್ನದೆ ವಾಹನ ಸವಾರರು ಇಲ್ಲಿ ಭಾರೀ ವಾಹನ ಚಲಾಯಿಸುವುದು ಕಂಡರೆ ನಿಜಕ್ಕೂ `ಅಂಧಾ ಕಾನೂನ್‌’ ಪುಷ್ಠಿ ನೀಡುವಂತಿದೆ.

ಅರಳಿಮರ ಜಗಳೂರು ಇಮಾಂಸಾಬ್‌ ಸರ್ಕಲ್‌ನಿಂದ ಹಿಡಿದು ಅಶೋಕ ಟಾಕೀಸ್‌ ರೈಲ್ವೆ ಗೇಟ್‌ವರೆಗೆ ದ್ವಿಚಕ್ರ ವಾಹನ ಚಲಾಯಿಸಬೇಕೆಂದರೆ ಕೈಯಲ್ಲಿ ಜೀವ ಹಿಡಿದುಕೊಂಡು ಸಾಗಬೇಕು. 

ಅಷ್ಟೇ ಅಲ್ಲದೆ ಇದೇ ಸಂದರ್ಭದಲ್ಲಿ ವಾಹನ ಅಂಬ್ಯುಲೆನ್ಸ್‌ ಬಂದರೂ ಸಹ ಟ್ರಾಫಿಕ್‌ ಜಾಮ್‌ನಿಂದ ದಾರಿ ಸಿಗದ ಕಾರಣ ಎಷ್ಟೋ ಜೀವಗಳು ಅಂಬ್ಯುಲೆನ್ಸ್‌ನಲ್ಲಿಯೇ ಪ್ರಾಣ ಕಳೆದುಕೊಂಡಿರುವ ಘಟನೆಗಳು ಇಲ್ಲಿ ನಡೆದಿವೆ ಎನ್ನುತ್ತಾರೆ ಈ ಪ್ರದೇಶದ ನಾಗರಿಕರು.

ಈಗ ಹಾಲಿ ಸ್ಮಾರ್ಟ್‌ ಸಿಟಿ ಕಾಮಗಾರಿ ಅಂದರೆ ಜಗಳೂರು ಬಸ್‌ ನಿಲ್ದಾಣ ಗಣೇಶ್‌ ದೇವಸ್ಥಾನ ಬಳಿ  ಬಸ್‌ಸ್ಟ್ಯಾಂಡ್‌ ಕಾಮಗಾರಿ, ಶಾಮನೂರು ಶಿವಶಂಕರಪ್ಪ ಸಾರ್ವಜನಿಕ ಆಸ್ಪತ್ರೆ ಎದುರು ಚರಂಡಿ ಕಾಮಗಾರಿ, ಇದರ ಜೊತೆ ಆಟೋ ನಿಲ್ದಾಣ, ಹೂ, ಹಣ್ಣು ವ್ಯಾಪಾರಿಗಳು, ಹಳ್ಳಿಯಿಂದ ನಗರ ಪ್ರದೇಶಕ್ಕೆ ಕಾರ್ಯ ನಿಮಿತ್ತ ಬರುವ ಜನರು. ಇವೆಲ್ಲದರ ಮಧ್ಯೆ ಬಂಬೂ ಬಜಾರ್‌ ರಸ್ತೆಯಿಂದ ವಾಹನ ಸವಾರರ ಸಂಖ್ಯೆ ಕಿಷ್ಕಿಂಧೆಯಾಗಿರುವ ಈ ರಸ್ತೆಯಲ್ಲಿ ಸಾಗುವುದು ಬಹಳ ಕಷ್ಟವಾಗಿದೆ ಎನ್ನುತ್ತಾರೆ ಫುಟ್‌ಪಾತ್‌ ವ್ಯಾಪಾರಿಗಳು.

ಫೋಟೋ ಗ್ರಾಫರ್‌ಗಳಾಗಿರುವ ಸಂಚಾರಿ ಪೊಲೀಸರು : ಈ ಭಾಗದಲ್ಲಿ ಕೆಲವು ಪ್ರದೇಶಗಳಲ್ಲಿ ಟ್ರಾಫಿಕ್‌ ಜಾಮ್‌ ಆಗಿದ್ದರೂ ಇಲ್ಲಿನ ಪೊಲೀಸರು ಮಾಸ್ಕ್‌ ಧರಿಸದ, ಹೆಲ್ಮೆಟ್‌ ಧರಿಸದ ವಾಹನ ಸವಾರರ ಫೋಟೋ ಕ್ಲಿಕ್ಕಿಸುವುದರಲ್ಲಿ ಮಗ್ನರಾಗಿರುತ್ತಾರೆ. 

ಈ ಮಧ್ಯೆ ಕಬ್ಬಿಣ ಮಾರುಕಟ್ಟೆಯಲ್ಲಿನ ಸರಕು ಸಾಗಣೆ ವಾಹನಗಳು, ವಿಆರ್ಎಲ್‌ ಸಮೂಹಕ್ಕೆ ಸಂಬಂಧಿಸಿದ ವಾಹನಗಳು, ಕೆ.ಆರ್‌. ಮಾರುಕಟ್ಟೆಗೆ ತರಕಾರಿ ಹೊತ್ತು ತರುವ ವಾಹನಗಳು ಹೀಗಾಗಿ ದಿನಂಪ್ರತಿ ಸುಮಾರು ಸಾವಿರಾರು ದ್ವಿಚಕ್ರ ವಾಹನ, ನೂರಾರು ಲಘುವಾಹನ, ಹತ್ತಾರು ಭಾರೀ ವಾಹನಗಳು ಈ ಭಾಗದಲ್ಲಿ ಸಂಚರಿಸುತ್ತಿದ್ದು, ಟ್ರಾಫಿಕ್‌ ಜಾಮ್‌ ಆದಾಗ ರಸ್ತೆ ಸುಗಮಗೊಳಿಸುವುದೇ ದೊಡ್ಡ ಸಮಸ್ಯೆಯಾಗಿದೆ.

ಬೆಳಿಗ್ಗೆ 8 ಗಂಟೆಯಿಂದ ಸಾಯಂಕಾಲ 8 ಗಂಟೆವರೆಗೂ ಸಹ ಪ್ರತಿದಿನ ಸಮಸ್ಯೆಯಾಗಿರುವ ಈ ರಸ್ತೆಯಲ್ಲಿ ಸಂಚಾರಿ ಪೊಲೀಸರು ಸೂಕ್ತ ಕ್ರಮ ಕೈಗೊಳ್ಳುವ ಮೂಲಕ ಸಂಚಾರಿಗಳಿಗೆ, ಪಾದಚಾರಿಗಳಿಗೆ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕೆಂದು ಕೋರಿಕೊಳ್ಳುತ್ತಾರೆ ಆಟೋ ಚಾಲಕ ಗಣೇಶಪ್ಪ. 

ಹಳೇ ಪ್ರದೇಶದ ನಾಗರಿಕರು ಹೊಸ ಪ್ರದೇಶಕ್ಕೆ ಪ್ರವೇಶಿಸಬೇಕಾದರೆ ಹಲವಾರು ಜಲ್ವಂತ ಸಮಸ್ಯೆಗಳನ್ನು ಎದುರಿಸಿ ಸಾಗಬೇಕಾ ಗಿದೆ. ಇವೆಲ್ಲದರ ನಡುವೆ ಅಶೋಕ ಟಾಕೀಸ್‌ ರೈಲ್ವೆ ಗೇಟ್‌ ಸಮಸ್ಯೆ ಹೇಳತೀರದು. 

ಇಷ್ಟು ದಿನ ಕೊರೊನಾ ಭಯದಿಂದ ಜನರು ಕಡಿಮೆ ಸಂಖ್ಯೆ ಯಲ್ಲಿದ್ದರು. ಆದರೆ, ಈಗ ಸಹಜ ಸ್ಥಿತಿಯತ್ತ ಸಾಗಿರುವ ನಮ್ಮ ನಗರದಲ್ಲಿ ಜನಸಂಖ್ಯೆ ಬೆಳೆಯು ತ್ತಿದೆ. ಆದರೆ ಅಭಿವೃದ್ಧಿ ಕುಂಠಿತ ಗೊಂಡಿವೆ ಎಂದು ಬೇಸರ ವ್ಯಕ್ತಪಡಿಸಿರುವ ಜನರ ಸಂಖ್ಯೆ ಏನೂ ಕಡಿಮೆ ಇಲ್ಲ.


ಬಿ. ಸಿಕಂದರ್

error: Content is protected !!