ಮಲೇಬೆನ್ನೂರು, ಡಿ.23- ಭದ್ರಾ ಕಾಡಾ ನೀರಾವರಿ ಸಲಹಾ ಸಮಿತಿ ಸಭೆಯನ್ನು ಇದೇ ಮೊದಲ ಬಾರಿಗೆ ಮಲೇಬೆನ್ನೂರಿನಲ್ಲಿ ಹಮ್ಮಿಕೊಳ್ಳುವ ಮೂಲಕ ಭದ್ರಾ ಕಾಡಾ ಅಧ್ಯಕ್ಷರಾದ ಶ್ರೀಮತಿ ಪವಿತ್ರ ರಾಮಯ್ಯ ಅವರು ಕೊನೆ ಭಾಗದ ರೈತರ ಬೇಡಿಕೆಗೆ ಸ್ಪಂದಿಸಿದ್ದಾರೆ.
ಸೋಮವಾರ ಮಲೇಬೆನ್ನೂರಿಗೆ ಭೇಟಿ ನೀಡಿದ್ದ ಶ್ರೀಮತಿ ಪವಿತ್ರ ರಾಮಯ್ಯ ಅವರಿಗೆ ಹೊಳೆಸಿರಿಗೆ ರೆಯ ಪಾಲಾಕ್ಷಪ್ಪ, ಆರ್.ಟಿ.ಸೋಮಶೇಖರ್, ಎಂ.ತಿಪ್ಪೇರುದ್ರಪ್ಪ ಮತ್ತು ಎಪಿಎಂಸಿ ಸದಸ್ಯ ಜಿ.ಮಂಜುನಾಥ್ ಪಟೇಲ್, ಡಿಸಿಸಿ ಬ್ಯಾಂಕಿನ ಮಾಜಿ ಉಪಾಧ್ಯಕ್ಷ ಜಿಗಳಿ ಆನಂದಪ್ಪ, ಕೊಕ್ಕನೂರು ಸೋಮಶೇಖರ್, ಕುಣೆಬೆಳಕೆರೆ ಅಂಜಿನಪ್ಪ ಮಲೇಬೆನ್ನೂರಿನಲ್ಲಿ ಕಾಡಾ ಸಭೆ ನಡೆಸುವಂತೆ ಒತ್ತಾಯಿಸಿದ್ದರು.
ಈ ಬಗ್ಗೆ ಒಂದೆರಡು ದಿನಗಳಲ್ಲಿ ತಿಳಿಸುತ್ತೇನೆಂದು ಹೇಳಿ ಹೋಗಿದ್ದ ಪವಿತ್ರ ರಾಮಯ್ಯ ಅವರು ಬರುವ ಜನವರಿ 4 ರಂದು ಬೆಳಿಗ್ಗೆ 11 ಕ್ಕೆ ಮಲೇಬೆನ್ನೂರಿನ ನೀರಾವರಿ ಕಚೇರಿಯಲ್ಲಿ ಭದ್ರಾ ಕಾಡಾ ಸಭೆ ನಿಗದಿ ಮಾಡುವ ಮೂಲಕ ರೈತರಿಗೆ ಕೊಟ್ಟ ಮಾತನ್ನು ಈಡೇರಿಸಿದ್ದಾರೆ.
ಭದ್ರಾ ಕಾಡಾ ಅಧ್ಯಕ್ಷರ ನಿರ್ಧಾರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿರುವ ಕೊನೆ ಭಾಗದ ರೈತರು ಬೇಸಿಗೆ ಬೆಳೆಯಲ್ಲೂ ಅಧ್ಯಕ್ಷರ ಕಾಳಜಿ ಹೀಗೆ ಇರಲೆಂದು ಮನವಿ ಮಾಡಿದ್ದಾರೆ.