ತುಂಗಭದ್ರಾ ಯೋಜನೆ: ಶಾಸಕರ ಆರೋಪದಲ್ಲಿ ಸತ್ಯಾಂಶವಿಲ್ಲ

ಜಗಳೂರು, ಡಿ.22- ತುಂಗಭದ್ರಾ ಕುಡಿಯುವ ನೀರಿನ ಯೋಜನೆ ತಾಲ್ಲೂಕಿಗೆ ಕೈತಪ್ಪಲು ನನ್ನ ನಿರ್ಲಕ್ಷ್ಯವೇ ಕಾರಣ ಎಂಬ ಶಾಸಕ ಎಸ್.ವಿ. ರಾಮಚಂದ್ರ ಅವರ ಆರೋಪದಲ್ಲಿ ಯಾವುದೇ ಸತ್ಯಾಂಶವಿಲ್ಲ ಎಂದು ಮಾಜಿ ಶಾಸಕ ಎಚ್.ಪಿ. ರಾಜೇಶ್ ಹೇಳಿದರು.

ಇಲ್ಲಿನ ಪತ್ರಿಕಾ ಭವನದಲ್ಲಿ ಇಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾಜಿ ಶಾಸಕರು, ನನ್ನ ಅಧಿಕಾರವಧಿಯಲ್ಲಿ ಸಂತೆಮುದ್ದಾಪುರ ಮತ್ತು ಇತರೆ 157 ಹಳ್ಳಿಗಳಿಗೆ ಕುಡಿಯುವ ನೀರು ಪೂರೈಸುವ ಬಹುಗ್ರಾಮ ಯೋಜನೆಯಡಿ ಟೆಂಡರ್ ಹಂತದಲ್ಲಿತ್ತು. ಅದೇ ವೇಳೆ ತುಂಗಭದ್ರಾ ಹಿನ್ನೀರು 2,500 ಕೋಟಿ ರೂ.ಗಳ ಯೋಜನೆ ಜಾರಿಯಾಯಿತು.

ಈ ಹಂತದಲ್ಲಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಜಾರಿಗೊಳ್ಳುವ ಹಂತದಲ್ಲಿರುವುದರಿಂದ, ತುಂಗಭದ್ರಾ ಹಿನ್ನೀರು ಯೋಜನೆಯಲ್ಲಿ ಸೇರ್ಪಡೆಗೊಳ್ಳುವ ಅಗತ್ಯವಿಲ್ಲ ಎಂದು ಅಧಿಕಾರಿಗಳು ತಿಳಿಸಿದರು. ಜಗಳೂರು ತಾಲ್ಲೂಕು ಸೇರ್ಪಡೆ ಆಗಲಿಲ್ಲ. ಆದರೆ ಆನಂತರ ಬಂದ ಶಾಸಕರು ಬಹುಗ್ರಾಮ ಕುಡಿಯುವ ನೀರಿನ ಯೋಜನೆಯ ಬಗ್ಗೆ ಯಾವುದೇ ಕ್ರಮ ಕೈಗೊಳ್ಳಲಿಲ್ಲ. ಅದರ ಜಾರಿಗೂ ಪ್ರಯತ್ನಿಸಲಿಲ್ಲ ಎಂದು ದೂರಿದರು.

ಭದ್ರಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆಯಾಗಿ ಸರ್ಕಾರ ಜಾರಿಗೊಳಿಸಿರುವುದು ಶ್ಲಾಘನೀಯ. ಇದು ಮುಖ್ಯಮಂತ್ರಿ ಎಸ್. ನಿಜಲಿಂಗಪ್ಪ ಅವರ ಕನಸಾಗಿತ್ತೇ ಹೊರತು, ಶಾಸಕ ರಾಮಚಂದ್ರ ಅವರ ಕನಸಿನ ಯೋಜನೆ ಅಲ್ಲ ಎಂದು ಟೀಕಿಸಿದರು.

ಎಸ್‌ಸಿಪಿ/ಟಿಎಸ್‌ಪಿ ಅನುದಾನ ದುರುಪಯೋಗ: ನನ್ನ ಅಧಿಕಾರವಧಿಯಲ್ಲಿ ಭದ್ರಾ ಮೇಲ್ದಂಡೆ ಯೋಜನೆಯಡಿ ಎಸ್‌ಸಿಪಿ/ಟಿಎಸ್‌ಪಿ ಅನುದಾನವನ್ನು ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಕಾಲೋನಿಗಳ ಅಭಿವೃದ್ಧಿಗೆ ಬಳಕೆ ಮಾಡಿದ್ದೆ. ಆದರೆ ಹಾಲಿ ಶಾಸಕರು ಈ ಯೋಜನೆಯಡಿ ಬಿಡುಗಡೆಯಾದ ಸುಮಾರು 12 ಕೋಟಿ ರೂಪಾಯಿಗಳನ್ನು ಕೆರೆಗಳ ಅಭಿವೃದ್ಧಿ ಹೆಸರಿನಲ್ಲಿ ಹೂಳು ತೆಗೆಯುವುದಾಗಿ ಹೇಳಿ ದುರುಪಯೋಗಪಡಿಸಿದ್ದಾರೆ ಎಂದು ದೂರಿದರು.

ಭದ್ರಾ ಮೇಲ್ದಂಡೆ ಯೋಜನೆಯಡಿ ಜಗಳೂರು ಕಾಲುವೆ ಮಾರ್ಗಕ್ಕೆ ಸಂಬಂಧಿಸಿದಂತೆ, ಸರ್ಕಾರ ಸಮಿತಿಯೊಂದನ್ನು ರಚಿಸಿತ್ತು. 

ಆ ಸಮಿತಿಯಲ್ಲಿ ಯಾವ ನಿರ್ಧಾರ ಕೈಗೊಳ್ಳಲಾಯಿತು ಹಾಗೂ ಸರ್ಕಾರ ಕೈಗೊಂಡ ಕ್ರಮದ ಬಗ್ಗೆ ಶಾಸಕರು ಜನತೆಗೆ ತಿಳಿಸಬೇಕು. ಯಾವ ಮಾರ್ಗದಿಂದ ಜಗಳೂರಿಗೆ ಭದ್ರಾ ನೀರು ಹರಿದು ಬರಲಿದೆ ಎಂಬುದನ್ನು ಸ್ಪಷ್ಟಪಡಿಸಬೇಕು ಎಂದು ರಾಜೇಶ್ ಆಗ್ರಹಿಸಿದರು.

ಕೆಪಿಸಿಸಿ ಎಸ್ಟಿ ಘಟಕದ ರಾಜ್ಯಾಧ್ಯಕ್ಷ ಕೆ.ಪಿ. ಪಾಲಯ್ಯ ಮಾತನಾಡಿ, ಭದ್ರಾ ಮೇಲ್ದಂಡೆ ಮಂಜೂರಾತಿಯ ಹಿಂದೆ ತಾಲ್ಲೂಕಿನ ಸರ್ವಪಕ್ಷ ಮುಖಂಡರು, ವಿವಿಧ ಸಂಘಟನೆಗಳ ಶ್ರಮವಿದೆ. ಶಾಸಕರು ಎಲ್ಲರಿಗೂ ಕೃತಜ್ಞತೆ ಸಲ್ಲಿಸಬೇಕಾಗಿತ್ತು ಎಂದರು. 

ತಾಲ್ಲೂಕು ಉಸ್ತುವಾರಿ ಕಲ್ಲೇಶ್ ಪಾಟೀಲ್ ಮಾತನಾಡಿ, 157 ಗ್ರಾಮಗಳ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಜಾರಿಗೆ ಶಾಸಕರು ಪ್ರಯತ್ನಿಸಬೇಕು. ಇಲ್ಲವಾದರೆ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸುವುದಾಗಿ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಂಷೀರ್ ಅಹ್ಮದ್, ಮುಖಂಡರಾದ ತಿಪ್ಪೇಸ್ವಾಮಿ ಗೌಡ, ಪಲ್ಲಾಗಟ್ಟೆ ಶೇಖರಪ್ಪ, ಎಲ್.ಬಿ. ಭೈರೇಶ್, ಗೋಡೆ ಪ್ರಕಾಶ್, ಲೋಕೇಶ್, ತಿಪ್ಪೇಸ್ವಾಮಿ ಇನ್ನಿತರರಿದ್ದರು.

error: Content is protected !!