ಹರಿಹರ, ಡಿ.21- ನಗರದ ಹರಿಹರ, ಶಿವಮೊಗ್ಗ ರಸ್ತೆಯ ಮಧ್ಯದ ವಿಭಜಕದಲ್ಲಿ 50 ಲಕ್ಷ ರೂ.ಗಳ ವೆಚ್ಚದ ವಿದ್ಯುತ್ ಅಲಂಕಾರಿಕ ಎಲ್.ಇ.ಡಿ ದೀಪಗಳಿಗೆ, 50 ಲಕ್ಷ ರೂ ವೆಚ್ಚದ ವಿದ್ಯಾನಗರದ ಉದ್ಯಾನವನ ಕಾಮಗಾರಿಗೆ ಸಂಸದ ಜಿ.ಎಂ. ಸಿದ್ದೇಶ್ವರ ಮತ್ತು ಶಾಸಕ ಎಸ್. ರಾಮಪ್ಪ ಅವರುಗಳು ಇಂದು ಚಾಲನೆ ನೀಡಿದರು.
ಈ ವೇಳೆ ಪತ್ರಕರ್ತರೊಂದಿಗೆ ಮಾತನಾಡಿದ ಸಂಸದ ಸಿದ್ದೇಶ್ವರ ಅವರು, ನಗರದ ಅಭಿವೃದ್ಧಿಗೆ ದಾವಣಗೆರೆ – ಹರಿಹರ ಪ್ರಾಧಿಕಾರದಿಂದ ಅನೇಕ ಕೆಲಸಗಳಿಗೆ ಆದ್ಯತೆ ನೀಡಲಾಗಿದೆ. ಸ್ಥಳೀಯ ವಿದ್ಯಾನಗರ ಪಾರ್ಕ್ ಅನ್ನು ಸುಸಜ್ಜಿತವಾಗಿ ನಿರ್ಮಿಸಲು 50 ಲಕ್ಷ ರೂ.ಗಳ ವೆಚ್ಚದಲ್ಲಿ ಅಭಿವೃದ್ಧಿ ಮಾಡಲಾಗುತ್ತದೆ. ನಗರದ ಹಿಂದೂ ರುದ್ರಭೂಮಿ ಅಭಿವೃದ್ಧಿಗೆ 35 ಲಕ್ಷ ಸೇರಿದಂತೆ ನಗರದ ವಿವಿಧ ಕೆಲಸಗಳಿಗೆ ದೂಡಾದಿಂದ ಮಾಡಿಸಲಾಗುತ್ತಿದೆ ಎಂದು ಹೇಳಿದರು.
ಸಾರಥಿ ಗ್ರಾಮದ ಪಕ್ಕದಲ್ಲಿ ಗೊಬ್ಬರ ಕಾರ್ಖಾನೆ ಪ್ರಾರಂಭಿಸುವ ವಿಚಾರಕ್ಕೆ ದೆಹಲಿಯಿಂದ ಹಲವು ಅಧಿಕಾರಿಗಳು ಭೇಟಿ ನೀಡಿ, ಸ್ಥಳವನ್ನು ಪರಿಶೀಲನೆ ನಡೆಸಿ ವಿದ್ಯುತ್, ನೀರು, ರಸ್ತೆ, ರೈಲ್ವೆ, ಗ್ಯಾಸ್ ಸೇರಿದಂತೆ ಎಲ್ಲವೂ ಸರಿಯಾಗಿ ಇದೆ ಎಂದು ವರದಿಯನ್ನು ನೀಡಿದ್ದಾರೆ. ಶೀಘ್ರದಲ್ಲಿ ಕಾರ್ಖಾನೆಯ ನಿರ್ಮಾಣಕ್ಕೆ ಚಾಲನೆ ನೀಡಲಾಗುತ್ತದೆ.
ಶಾಸಕ ಎಸ್. ರಾಮಪ್ಪ ಮಾತನಾಡಿ, ನನ್ನ ಹೋರಾಟಕ್ಕೆ ಸುಮಾರು 1 ಕೋಟಿ 40 ಲಕ್ಷ ರೂ.ಗಳನ್ನು ದೂಡಾ ಬಿಡುಗಡೆ ಮಾಡಿ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಂಡಿದೆ. ನಗರದ ಇನ್ನೂ ಹಲವಾರು ಕೆಲಸಗಳಿಗೆ ಸುಮಾರು 40 ಲಕ್ಷ ರೂ. ವೆಚ್ಚದ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.
ಈ ಸಂದರ್ಭದಲ್ಲಿ ಮಾಜಿ ಶಾಸಕ ಬಿ.ಪಿ. ಹರೀಶ್, ಬಿಜೆಪಿ ಜಿಲ್ಲಾ ಅಧ್ಯಕ್ಷ ಎಸ್.ಎಂ. ವೀರೇಶ್ ಹನಗವಾಡಿ, ದೂಡಾ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್, ದೇವೀರಮ್ಮ, ಸೌಭಾಗ್ಯ, ರಾಜು, ನಗರಸಭೆ ಸದಸ್ಯರಾದ ಹನುಮಂತಪ್ಪ, ಅಶ್ವಿನಿ, ಮಹಬೂಬ್ ಬಾಷಾ, ಬಾಬುಲಾಲ್, ಮುಖಂಡರಾದ ಬಾತಿ ಚಂದ್ರಶೇಖರ್, ಟಿ.ಜೆ. ಮುರುಗೇಶಪ್ಪ, ಅರುಣ್ ಬೊಂಗಾಳೆ, ಅಜಿತ್ ಸಾವಂತ್, ಪ್ರಮೀಳಾ ನಲ್ಲೂರು, ದೂಡಾ ಆಯುಕ್ತ ಕುಮಾರಸ್ವಾಮಿ, ನಗರಸಭೆ ಪೌರಾಯುಕ್ತ ಉದಯ್ ತಳವಾರ್, ಎಇಇ ಬಿರಾದಾರ್ ಮತ್ತು ಇತರರು ಹಾಜರಿದ್ದರು.