ಅರ್ಹತೆ ಹೊಂದಿದ ಎಲ್ಲ ಮೀಸಲಾತಿ ವರ್ಗದವರನ್ನು ಸಾಮಾನ್ಯರ ವಿಭಾಗಕ್ಕೆ ಸೇರಿಸಲು ಸುಪ್ರೀಂ ತೀರ್ಪು
ನವದೆಹಲಿ, ಡಿ. 21 – ಸರ್ಕಾರಿ ಉದ್ಯೋಗಗಳಲ್ಲಿ ಸಾಮಾನ್ಯ ವರ್ಗದ ಸ್ಥಾನಗಳನ್ನು ಇತರೆ ಹಿಂದುಳಿದ ವರ್ಗ, ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ಸೇರಿದಂತೆ ಎಲ್ಲ ವರ್ಗದವರೂ ಪಡೆಯಬಹುದು ಎಂದು ಸುಪ್ರೀಂ ಕೋರ್ಟ್ ತಿಳಿಸಿದೆ.
ನ್ಯಾಯಮೂರ್ತಿಗಳಾದ ಯು.ಯು. ಲಲಿತ್, ರವೀಂದ್ರ ಭಟ್ ಹಾಗೂ ಹೃಶಿಕೇಶ್ ರಾಯ್ ಅವರನ್ನು ಒಳಗೊಂಡ ಪೀಠ ಈ ತೀರ್ಪು ನೀಡಿದೆ. ಅರ್ಹತೆ ಹೊಂದಿರುವ ಮೀಸಲು ವರ್ಗದ ಅಭ್ಯರ್ಥಿಗಳು ಸಾಮಾನ್ಯ ವರ್ಗದಲ್ಲಿ ಸ್ಥಾನ ಪಡೆಯಬಾರದು ಎಂದರೆ ಅದು ಕೋಮು ಮೀಸಲಾತಿಯಾಗುತ್ತದೆ ಎಂದು ಪೀಠ ಹೇಳಿದೆ.
ಯಾವುದೇ ಮೀಸಲಾತಿ ವರ್ಗಕ್ಕೆ ಸೇರಿದವರು ಸಾಮಾನ್ಯ ವರ್ಗದಲ್ಲಿ ಸ್ಥಾನಗಳನ್ನು ಪಡೆಯಬಹುದು ಎಂಬುದು ಈಗಾಗಲೇ ನಿರ್ಧರಿತವಾಗಿ ರುವ ಅಂಶವಾಗಿದೆ. ಮೀಸಲು ವರ್ಗದಲ್ಲಿರುವ ಅಭ್ಯರ್ಥಿ ತನ್ನ ಅರ್ಹತೆಯಿಂದಲೇ ಆಯ್ಕೆಯಾಗುವ ಸಾಮರ್ಥ್ಯ ಹೊಂದಿದ್ದರೆ, ಮೀಸಲಾತಿ ಕೋಟಾದಲ್ಲಿ ಸ್ಥಾನ ನೀಡುವ ಬದಲು ಸಾಮಾನ್ಯ ವರ್ಗದಲ್ಲಿಯೇ ಸ್ಥಾನ ಕಲ್ಪಿಸಬೇಕು ಎಂದು ನ್ಯಾಯಮೂರ್ತಿ ಲಲಿತ್ ಹಾಗೂ ನ್ಯಾಯಮೂರ್ತಿ ರಾಯ್ ತೀರ್ಪಿನಲ್ಲಿ ಹೇಳಿದ್ದಾರೆ.
ಪ್ರತ್ಯೇಕ ತೀರ್ಪು ನೀಡಿರುವ ನ್ಯಾಯಮೂರ್ತಿ ಭಟ್, ಸಾಮಾನ್ಯ ವರ್ಗ ಎಂಬುದು ಮೀಸಲಲ್ಲ. ಇದು ಎಲ್ಲ ಮಹಿಳೆಯ ಹಾಗೂ ಪುರುಷರಿಗೆ ಸಮಾನವಾಗಿ ಲಭ್ಯವಿರುವ ಸ್ಥಾನಗಳು. ಅರ್ಹತೆಯೊಂದೇ ಇಲ್ಲಿರುವ ಮಾನದಂಡ ಎಂದು ಹೇಳಿದ್ದಾರೆ.
ಇತರೆ ಹಿಂದುಳಿದ ವರ್ಗದ ಮಹಿಳೆ ಹಾಗೂ ಪರಿಶಿಷ್ಟ ಜಾತಿ ಮಹಿಳೆ ವರ್ಗದ ಅಭ್ಯರ್ಥಿಗಳು 2013ರಲ್ಲಿ ಉತ್ತರ ಪ್ರದೇಶದಲ್ಲಿ ಪೇದೆಗಳ ಹುದ್ದೆಗೆ ಆಯ್ಕೆಯಾಗಿದ್ದರು. ಅವರು ದಾಖಲಿಸಿ ದ ಅರ್ಜಿಯ ವಿಚಾರಣೆ ನಡೆಸುವಾಗ ಸುಪ್ರೀಂ ಕೋರ್ಟ್, ಸಾಮಾನ್ಯ ವರ್ಗ ಎಲ್ಲರಿಗೂ ಸೇರಿದ್ದು ಎಂದು ತಿಳಿಸಿದೆ.