ಸಿಲಿಂಡರ್‌ ಪ್ರದರ್ಶಿಸಿ ಪ್ರತಿಭಟಿಸಿದ ಕಾಂಗ್ರೆಸ್

ವಿಮಾನಯಾನ, ರೈಲ್ವೆ, ಎಲ್‌ಐಸಿ ಷೇರುಗಳನ್ನು ಖಾಸಗಿಗೆ ವಹಿಸಿದ್ದು,  ಬಿಎಸ್‌ಎನ್ಎಲ್ ಅಧೋಗತಿಗೆ ತಲುಪಲು ಮೋದಿ ಸರ್ಕಾರ ಕಾರಣ. ಕೇಂದ್ರ ಸರ್ಕಾರವನ್ನೇ ಅಂಬಾನಿ, ಅದಾನಿಯಂತಹವರಿಗೆ ಮಾರಾಟ ಮಾಡಿದರೆ ಸಾರ್ಥಕವಾಗುತ್ತದೆ. ಬ್ರಿಟಿಷರಿಗಿಂತಲೂ ಕೆಟ್ಟ ಆಡಳಿತವನ್ನು ಮೋದಿ ಸರ್ಕಾರ ನೀಡುತ್ತಿದೆ.

-ಡಿ. ಬಸವರಾಜ್, ಕೆಪಿಸಿಸಿ ವಕ್ತಾರರು

ದಾವಣಗೆರೆ, ಡಿ.20- ಅಡುಗೆ ಅನಿಲ ದರ ಏರಿಕೆ ವಿರೋಧಿಸಿ ನಗರದಲ್ಲಿ ಇಂದು ಜಿಲ್ಲಾ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಶಂಕರ ಲೀಲಾ ಗ್ಯಾಸ್ ಏಜೆನ್ಸಿ ಎದುರು ಜಮಾಯಿಸಿದ್ದ ಪ್ರತಿಭಟನಾಕಾರರು, ಸಿಲಿಂಡರ್‌ಗಳ ಪ್ರದರ್ಶಿಸುತ್ತಾ, ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್.ಬಿ. ಮಂಜಪ್ಪ ಮಾತನಾಡಿ, ಅಗತ್ಯ ವಸ್ತುಗಳ ಬೆಲೆ ನಿಯಂತ್ರಿಸುವು ದಾಗಿ ಅಧಿಕಾರಕ್ಕೆ ಬಂದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಬಿಜೆಪಿ ಸರ್ಕಾರವು ದಿನೇ ದಿನೇ ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡುತ್ತಾ ಮಾತಿಗೆ ತಪ್ಪಿ ನಡೆಯುತ್ತಿದೆ. ಕಾಂಗ್ರೆಸ್ ಅವಧಿಯಲ್ಲಿ 280 ಇದ್ದ ಸಿಲಿಂಡರ್ ಬೆಲೆ ಈಗ 780 ರೂ.ಗೆ ಏರಿಕೆ ಆಗಿದೆ. ಒಂದೇ ತಿಂಗಳಲ್ಲಿ ಬಿಜೆಪಿ ಸರ್ಕಾರವು ಅಡುಗೆ ಅನಿಲದ ಬೆಲೆಯನ್ನು ಎರಡು ಬಾರಿ 100 ರೂ.ಗೆ ಹೆಚ್ಚಿಸಿದೆ. ಅಡುಗೆ ಎಣ್ಣೆಯನ್ನು 80 ಇದ್ದಿದ್ದು, 130ಕ್ಕೆ ಹೆಚ್ಚಿಸುವ ಮೂಲಕ ಕೊರೊನಾ ಸಂಕಷ್ಟದಲ್ಲಿ ಜನರ ಗಾಯದ ಮೇಲೆ ಬರೆ ಎಳೆದಿದೆ ಎಂದು ಆರೋಪಿಸಿದರು.

ಕೆಪಿಸಿಸಿ ವಕ್ತಾರ ಡಿ. ಬಸವರಾಜ್ ಮಾತನಾಡಿ, ಯುಪಿಎ ಸರ್ಕಾರ ಅಧಿಕಾರದಲ್ಲಿದ್ದಾಗ ಕಚ್ಚಾ ತೈಲದ ಬೆಲೆಯು ಅತೀ ಹೆಚ್ಚಿದ್ದಾಗಲೂ 50ಕ್ಕೆ ಲೀಟರ್‌ನಂತೆ ಪೆಟ್ರೋಲ್ ಡೀಸೆಲ್ ಮಾರಾಟವಾಗುತಿತ್ತು. ಆದರೆ, ಈಗ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಕಡಿಮೆ ಇದ್ದರೂ ಮೋದಿ ಸರ್ಕಾರ ಲೀಟರ್‌ಗೆ 85 ರಂತೆ ಮಾರಾಟ ಮಾಡುತ್ತಿದೆ. ವಿಮಾನಯಾನ, ರೈಲ್ವೆ, ಎಲ್‌ಐಸಿ ಷೇರುಗಳನ್ನು ಖಾಸಗಿಗೆ ವಹಿಸಿದ್ದು, ಸರ್ಕಾರದ ಸಂಸ್ಥೆಯಾದ ಬಿಎಸ್‌ಎನ್ಎಲ್ ಅಧೋಗತಿಗೆ ತಲುಪಲು ಮೋದಿ ಸರ್ಕಾರ ಕಾರಣ. ಕೇಂದ್ರ ಸರ್ಕಾರವನ್ನೇ ಅಂಬಾನಿ, ಅದಾನಿಯಂತಹವರಿಗೆ ಮಾರಾಟ ಮಾಡಿದರೆ ಸಾರ್ಥಕವಾಗುತ್ತದೆ. ಬ್ರಿಟಿಷರಿಗಿಂತಲೂ ಕೆಟ್ಟ ಆಡಳಿತವನ್ನು ಮೋದಿ ಸರ್ಕಾರ ನೀಡುತ್ತಿದೆ ಎಂದು ದೂರಿದರು.

ಮಹಿಳಾ ಕಾಂಗ್ರೆಸ್ ಜಿಲ್ಲಾಧ್ಯಕ್ಷೆ ಅನಿತಾಬಾಯಿ ಮಾಲತೇಶ್ ಮಾತನಾಡಿ, ಅಡುಗೆ ಅನಿಲ ಹಾಗೂ ಖಾದ್ಯದ ಎಣ್ಣೆಯ ಬೆಲೆ ದುಬಾರಿಯಾಗಿದ್ದು, ನರೇಂದ್ರ ಮೋದಿಯವರಿಗೆ ಮಾನವೀಯತೆ ಇಲ್ಲವೇ. ಪರಿಸ್ಥಿತಿ ಹೀಗೆ ಮುಂದುವರಿದರೆ ಮಹಿಳೆಯರು ಸೌದೆಯಿಂದ ಒಲೆ ಹಚ್ಚಿ ಅಡುಗೆ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.

ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ. ಶೆಟ್ಟಿ ಮಾತನಾಡಿ, ಅಡುಗೆ ಅನಿಲ, ಪೆಟ್ರೋಲ್, ಡೀಸೆಲ್ ದರವನ್ನು ತಕ್ಷಣವೇ ಕಡಿಮೆ ಮಾಡಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಪಾಲಿಕೆ ವಿರೋಧ ಪಕ್ಷದ ನಾಯಕ ಎ.ನಾಗರಾಜ್, ಸದಸ್ಯರಾದ ಗಡಿಗುಡಾಳ್ ಮಂಜುನಾಥ್, ಚಮನ್ ಸಾಬ್, ಮುಖಂಡರುಗಳಾದ ಸೀಮೆಎಣ್ಣೆ ಮಲ್ಲೇಶ್, ಮೈನುದ್ದೀನ್, ಮುಜಾಹಿದ್, ದಾಕ್ಷಾಯಣಮ್ಮ, ಶುಭಮಂಗಳ, ಡೋಲಿ ಚಂದ್ರು, ಯುವರಾಜ ಸೇರಿದಂತೆ ಇತರರು ಭಾಗವಹಿಸಿದ್ದರು.

error: Content is protected !!