ರಾಜ್ಯಕ್ಕೆ ಮೊದಲ ಹಂತದಲ್ಲಿ 10 ಲಕ್ಷ ಡೋಸ್ ಕೊರೊನಾ ಲಸಿಕೆ ಲಭ್ಯ

ಬೆಂಗಳೂರು, ಡಿ.17 – ಕೊರೊನಾ ಸೋಂಕು ತಡೆ ಕಾರ್ಯಕ್ರಮದ ಅಂಗವಾಗಿ ಕರ್ನಾಟಕಕ್ಕೆ ಮೊದಲ ಹಂತದಲ್ಲಿ 10 ಲಕ್ಷ ಡೋಸ್ ಲಸಿಕೆ ಸದ್ಯದಲ್ಲೇ ಲಭ್ಯವಾಗಲಿದೆ. 

ಕೇಂದ್ರ ಸರ್ಕಾರದಿಂದ ದೊರೆಯುವ ಲಸಿಕೆಯನ್ನು ಸಂಗ್ರಹಿಸಿ ರಾಜ್ಯಾದ್ಯಂತ ವಿಸ್ತರಿಸಲು ಬೆಂಗಳೂರು ನಗರ ಮತ್ತು ಕಲಬುರಗಿಯನ್ನು ರಾಜ್ಯದ ದಾಸ್ತಾನು ಕೇಂದ್ರಗಳಾಗಿ ಗುರುತಿಸಲಾಗಿದೆ. 

ಈ ಎರಡು ಕೇಂದ್ರಗಳ ಜೊತೆಗೆ ಶಿವಮೊಗ್ಗ, ಬಳ್ಳಾರಿ ಮತ್ತು ಬೆಂಗಳೂರು ಗ್ರಾಮಾಂತರ ನಗರಗ ಳನ್ನು ಪ್ರಾದೇಶಿಕ ಕೇಂದ್ರಗಳಾಗಿ ಗುರುತಿಸಲಾಗಿದೆ.

ಇಡೀ ರಾಜ್ಯಕ್ಕೆ ಈ ಘಟಕಗಳಿಂದಲೇ ಲಸಿಕೆ ರವಾನೆ ಆಗಲಿದೆ, ಇದಕ್ಕಾಗಿ ಕೇಂದ್ರ ಸರ್ಕಾರ 10 ವಾಕಿಂಗ್ ಕೂಲರ್ ಮತ್ತು 10 ವಾಕಿಂಗ್ ಫ್ರೀಜರ್‌ಗಳನ್ನು ನೀಡಿದೆ. ರಾಜ್ಯ ಸರ್ಕಾರದ ಬಳಿ ಪ್ರಸ್ತುತ ಮೂರು ವಾಕಿಂಗ್ ಕೂಲರ್ ಮತ್ತು 2 ವಾಕಿಂಗ್ ಫ್ರೀಜರ್‌ಗಳಿವೆ. ರಾಜ್ಯಕ್ಕೆ 866 ಸ್ಮಾಲ್ ಐಸ್ ಲೈನ್ಡ್, 64 ದೊಡ್ಡ ಐಸ್ ಲೈನ್ಡ್ ರೆಫ್ರಿಜಿರೇಟರ್‌ಗಳನ್ನು ಕೇಂದ್ರ ನೀಡಲಿದೆ.  

ಇದು ಸಾಲದಾಗಿದ್ದು, ಮತ್ತೆ ಮೂರು ವಾಕಿಂಗ್ ಕೂಲರ್ ಮತ್ತು ಮೂರು ವಾಕಿಂಗ್ ಫ್ರೀಜರ್‌ಗಳನ್ನು ನೀಡುವಂತೆ ಕೇಂದ್ರ ಆರೋಗ್ಯ ಇಲಾಖೆಯನ್ನು ರಾಜ್ಯ ಸರ್ಕಾರ ಕೋರಿದೆ.  ಕರ್ನಾಟಕಕ್ಕೆ ಎರಡು ಕಂಪನಿಗಳ ಲಸಿಕೆ ಬರುವ ನಿರೀಕ್ಷೆ ಇದ್ದು, ಅದು ಯಾವುವು ಎಂಬ ಬಗ್ಗೆ ಗುಟ್ಟು ಬಿಟ್ಟುಕೊಟ್ಟಿಲ್ಲ. 

ಲಸಿಕೆ ಬಂದ ತಕ್ಷಣವೇ ಮೊದಲು ಆರೋಗ್ಯ ಸೇವಾ ಸಿಬ್ಬಂದಿಗೆ ಮೊದಲ ಆದ್ಯತೆಯಲ್ಲಿ ಲಸಿಕೆ ನೀಡಲಿದ್ದು, ಈಗಾಗಲೇ 4.17 ಲಕ್ಷ ಆರೋಗ್ಯ ಸಿಬ್ಬಂದಿಯನ್ನು ನೋಂದಾಯಿಸಲಾಗಿದೆ. 

ಮಾಸಾಂತ್ಯದ ವೇಳೆಗೆ ಈ ಸಂಖ್ಯೆ ಮತ್ತಷ್ಟು ಹೆಚ್ಚಲಿದೆ, ಇದನ್ನು ಆಧರಿಸಿಯೇ ರಾಜ್ಯಕ್ಕೆ ಲಸಿಕೆಗಳ ಪ್ರಮಾಣ ಹೆಚ್ಚಿಸಲಾಗಿದೆ ಎಂದು ತಿಳಿದುಬಂದಿದೆ. 

ಮೊದಲ ಹಂತದಲ್ಲಿ ನಾಲ್ಕೂವರೆಯಿಂದ 5 ಲಕ್ಷ ಮಂದಿ ನೋಂದಾಯಿತರಿಗೆ ಲಸಿಕೆ ಅಗತ್ಯವಿದೆ, ಮೊದಲ ಲಸಿಕೆ ಪಡೆದ 27 ದಿನಗಳ ನಂತರ 28ನೇ ದಿನದಂದು ಎರಡನೇ ಲಸಿಕೆ ನೀಡಲಾಗುತ್ತದೆ. 

ಈ ಅಂಕಿ-ಅಂಶಗಳನ್ನು ಆಧಾರವಾಗಿಟ್ಟು ಕೊಂಡು ಕೇಂದ್ರ ಹೆಚ್ಚಿನ ಪ್ರಮಾಣದಲ್ಲಿ ಲಸಿಕೆ ಬಿಡುಗಡೆ ಮಾಡುತ್ತಿದೆ.  ಲಸಿಕಾ ಕೇಂದ್ರಗಳಿಂದ ಸಂಚಾರಿ ಶೈತ್ಯಾಗಾರದಲ್ಲಿ ಜಿಲ್ಲಾ ಮತ್ತು ತಾಲ್ಲೂಕು ಕೇಂದ್ರಗಳಿಗೆ ರವಾನೆ ಆಗಲಿದ್ದು, ಆ ನಂತರ ತರಬೇತಿ ಹೊಂದಿದ ಸಿಬ್ಬಂದಿ ಲಸಿಕೆಗಳನ್ನು ನೋಂದಾಯಿತ ಆರೋಗ್ಯ ಸೇವಕರಿಗೆ ನೀಡಲಿದೆ. 

ಇವರ ನಂತರ ಕೊರೊನಾ ವಾರಿಯರ್‌ಗಳಿಗೆ, ನಂತರ 60 ವರ್ಷಕ್ಕಿಂತ ಮೇಲ್ಪಟ್ಟವರು ಮತ್ತು ಮಾರಣಾಂತಿಕ ರೋಗದಿಂದ ಬಳಲುತ್ತಿರುವವರಿಗೆ ಎರಡನೇ ಹಂತದಲ್ಲಿ ದೊರೆಯಲಿದೆ. 

ಚುನಾವಣಾ ಬೂತ್ ಮಾದರಿಯಲ್ಲಿ ರಾಜ್ಯಾದ್ಯಂತ ಕೇಂದ್ರಗಳನ್ನು ಆರಂಭಿಸಿ ಅಲ್ಲಿಂದಲೇ ಪರಿಣಿತರು ಲಸಿಕೆ ಹಾಕಲಿದ್ದಾರೆ. 

ಪ್ರತಿ ಜಿಲ್ಲೆಯ ಎರಡು ತಾಲ್ಲೂಕುಗಳನ್ನು ಆಯ್ಕೆ ಮಾಡಿ ಲಸಿಕೆಯನ್ನು ನೀಡಲು ಕೇಂದ್ರ ಆರೋಗ್ಯ ಇಲಾಖೆ ಕೆಲವು ಸೂಚನೆಗಳನ್ನು ನೀಡಿದೆ. 

ಲಸಿಕೆ ಎಂದು ಬರುತ್ತದೆ, ಯಾವಾಗ ನೀಡಬೇಕು ಎಂಬ ಬಗ್ಗೆ ಗುಟ್ಟು ಬಿಟ್ಟು ಕೊಡದ ಕೇಂದ್ರ, ದಿನನಿತ್ಯ ರಾಜ್ಯ ಸರ್ಕಾರಗಳಿಗೆ ಮಾರ್ಗಸೂಚಿಗಳನ್ನು ರವಾನಿಸುತ್ತಿದೆ. 

ಮೈಸೂರು, ಮಂಡ್ಯ, ಚಾಮರಾಜನಗರ, ಕೊಡಗು, ರಾಮನಗರ, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು ಜಿಲ್ಲೆಗಳಿಗೆ ಬೆಂಗಳೂರಿನ ದಾಸ್ತಾನು ಕೇಂದ್ರದಿಂದ ಲಸಿಕೆ ರವಾನೆಯಾಗಲಿದೆ. 

ದಾವಣಗೆರೆ, ಚಿತ್ರದುರ್ಗ, ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಗದಗ, ಹಾವೇರಿಗೆ ಶಿವಮೊ ಗ್ಗದ ಪ್ರಾದೇಶಿಕ ಕೇಂದ್ರದಿಂದ ರವಾನೆಯಾಗಲಿದೆ.

ಕೊಪ್ಪಳ, ರಾಯಚೂರು, ವಿಜಯನಗರ, ಬಾಗಲಕೋಟೆಗೆ ಬಳ್ಳಾರಿ ಪ್ರಾದೇಶಿಕ ಕೇಂದ್ರದಿಂದ, ಬೀದರ್, ವಿಜಯಪುರ, ಧಾರವಾಡಕ್ಕೆ ಕಲಬುರಗಿ ಪ್ರಾದೇಶಿಕ ಕೇಂದ್ರಗಳಿಂದ ಲಸಿಕೆ ರವಾನಿಸಲು ಸರ್ಕಾರ ಸಿದ್ಧತೆ ಮಾಡಿಕೊಂಡಿದೆ.

error: Content is protected !!