ಮಲೇಬೆನ್ನೂರು, ಡಿ.15- ಭದ್ರಾ ಕಾಲುವೆಗ ಳಿಗೆ ಅಕ್ರಮ ಪಂಪ್‌ಸೆಟ್‌ಗಳನ್ನು ಹಾಕಿ ಕೊಂಡಿ ರುವವರ ವಿರುದ್ಧ ಕ್ರಿಮಿನಲ್ ಕೇಸ್ ಹಾಕುವುದಾಗಿ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಹೇಳಿದರು.
ಮಂಗಳವಾರ ರಾತ್ರಿ ಇಲ್ಲಿನ ಪೊಲೀಸ್ ಠಾಣೆ ಆವರಣದಲ್ಲಿ ಪೊಲೀಸ್ ಉದ್ಯಾನವನದ ಉದ್ಘಾಟನಾ ಸಮಾರಂಭದ ನಂತರ ಭದ್ರಾ ಅಚ್ಚುಕಟ್ಟಿನ ಕೆಳಭಾಗದ ರೈತರು ಜಿಲ್ಲಾಧಿಕಾರಿಗಳೊಂದಿಗೆ ಅಕ್ರಮ ಪಂಪ್‌ಸೆಟ್‌ಗಳನ್ನು ತೆರವುಗೊಳಿಸುವ ಬಗ್ಗೆ ಮಾತನಾಡಿದರು.
ಭದ್ರಾ ನಾಲೆಗಳಿಗೆ ಅಕ್ರಮವಾಗಿ ಅಳವಡಿಸಿರುವ ಪಂಪ್‌ಸೆಟ್‌ಗಳ ತೆರವಿಗೆ ಹೈಕೋರ್ಟ್ ಆದೇಶ ನೀಡಿದೆ. ಆ ಪ್ರಕಾರ ಅಧಿಕಾರಿಗಳು ಪಂಪ್‌ಸೆಟ್ ತೆರವು ಮಾಡಿದರೂ ಮತ್ತೆ ಹೊಸ ಪಂಪ್‌ಸೆಟ್‌ಗಳನ್ನು ಹಾಕಿಕೊಳ್ಳುತ್ತಿದ್ದಾರೆ. ಇದರಿಂದ ನಮಗೂ ತುಂಬಾ ಬೇಸರ ಆಗಿದೆ. ಹಾಗಾಗಿ ಮುಂದಿನ ದಿನಗಳಲ್ಲಿ ಅಕ್ರಮ ಪಂಪ್‌ಸೆಟ್‌ಗಳನ್ನು ಹಾಕಿಕೊಂಡಿರುವವರ ಮೇಲೆ ಕ್ರಿಮಿನಲ್ ಕೇಸು ಹಾಕುವ ಬಗ್ಗೆ ತೀರ್ಮಾನ ಕೈಗೊಳ್ಳುತ್ತೇವೆ ಎಂದು ಮಹಾಂತೇಶ್ ಬೀಳಗಿ ಅವರು ಎಚ್ಚರಿಕೆ ನೀಡಿದರು. ಈ ವೇಳೆ ಎಸ್ಪಿ ಹನುಮಂತರಾಯ ಹಾಜರಿದ್ದರು.
ಅಕ್ರಮ ಪಂಪ್‌ಸೆಟ್‌ಗಳನ್ನು ತೆರವುಗೊಳಿಸುವ ಬಗ್ಗೆ ಹೈಕೋರ್ಟ್ ಆದೇಶ ಪಾಲಿಸಿದ ಅಧಿಕಾರಿಗಳ ವಿರುದ್ಧ ನ್ಯಾಯಾಂಗ ನಿಂದನೆ ಕೇಸು ಹಾಕುವ ಬಗ್ಗೆ ಅಂತಿಮ ಸಿದ್ಧತೆ ನಡೆದಿದೆ ಎಂದು ಜಿಲ್ಲಾಧಿಕಾರಿಗಳ ಭೇಟಿ ನಂತರ ಹೊಳೆಸಿರಿಗೆರೆಯ ಪಾಲಾಕ್ಷಪ್ಪ, ಆರ್.ಟಿ. ಸೋಮಶೇಖರಪ್ಪ, ಎಂ. ತಿಪ್ಪೇರುದ್ರಪ್ಪ, ಎಂ. ದೇವರಾಜ್ ಪತ್ರಕರ್ತರಿಗೆ ತಿಳಿಸಿದರು.