ಮಾಯಕೊಂಡ ವಿಧಾನಸಭಾ ವ್ಯಾಪ್ತಿ ಗ್ರಾಮಗಳಿಗೆ ಕಾಡಾ ಅಧ್ಯಕ್ಷೆ ಪವಿತ್ರ ರಾಮಯ್ಯ ಭೇಟಿ
ದಾವಣಗೆರೆ, ಡಿ.10- ಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷೆ ಪವಿತ್ರರಾಮಯ್ಯ ಅವರು ಮಾಯಕೊಂಡ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಶ್ಯಾಗಲೆ, ಕೋಡಿಹಳ್ಳಿ, ಮಳಲಕೆರೆ, ಲೋಕಿಕೆರೆ ಭಾಗದ ರೈತರು ಕಚೇರಿಗೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸುವಂತೆ ಮನವಿ ಸಲ್ಲಿಸಿದ ಹಿನ್ನೆಲೆಯಲ್ಲಿ ಗುರುವಾರ ಭೇಟಿ ನೀಡಿ ಪರಿಶೀಲಿಸಿದರು.
ರೈತರು ಎದುರಿಸುತ್ತಿರುವ ಪ್ರಮುಖ ಸಮಸ್ಯೆಗಳ ಬಗ್ಗೆ ತಿಳಿಯುವ ಹಿನ್ನೆಲೆಯಲ್ಲಿ ನೇರವಾಗಿ ಭೇಟಿ ಮಾಡಿ ಸಮಸ್ಯೆಗಳ ಬಗ್ಗೆ ಕೂಲಂಕುಶವಾಗಿ ಪರಿಶೀಲಿಸಿದರು. ನಂತರ ದುರಸ್ತಿಗೊಂಡಿರುವ ಕಾಲುವೆಗ ಳನ್ನು, ಗುಂಡಿ ಬಿದ್ದಿರುವ ಅಚ್ಚುಕಟ್ಟು ರಸ್ತೆಗಳನ್ನು ಸಂಬಂಧಪಟ್ಟ ಅಧಿಕಾರಿಗ ಳೊಂದಿಗೆ ಪರಿಶೀಲನೆ ನಡೆಸಿದರು.
ಈ ಸಂದರ್ಭದಲ್ಲಿ ರೈತರನ್ನುದ್ದೇಶಿಸಿ ಮಾತನಾಡಿದ ಅವರು, ಕೊರೋನಾ ಕಾರಣದಿಂದ ರಾಜ್ಯ ಸರ್ಕಾರ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದರೂ, ಅನ್ನದಾತರಿಗೆ ಯಾವುದೇ ತೊಂದರೆಯಾಗದಂತೆ ಯೋಜನೆಗಳನ್ನು ರೂಪಿಸುತ್ತಿದೆ ಎಂದರು.
ನೀರಾವರಿ ಯೋಜನೆಗಳಿಗೆ, ಕಾಡಾ ಪ್ರಾಧಿಕಾರಗಳಿಗೆ ಸೂಕ್ತ ಅನುದಾನ ಬಿಡುಗಡೆ ಮಾಡುವುದಾಗಿ ಭರವಸೆ ನೀಡಿದ್ದಾರೆ. ರೈತರ ಕಷ್ಟಗಳನ್ನು ಹತ್ತಿರದಿಂದ ಬಲ್ಲ ನನಗೆ ಮಾನ್ಯ ಮುಖ್ಯಮಂತ್ರಿಗಳು ಈ ಜವಾಬ್ದಾರಿಯುತ ಸ್ಥಾನವನ್ನು ನೀಡಿದ್ದಾರೆ. ನಿಮ್ಮ ಪ್ರತಿಯೊಂದು ಸಮಸ್ಯೆಗಳು ನನ್ನ ಅರಿವಿಗೆ ಇದ್ದು, ಸರ್ಕಾರದಿಂದ ಅನುದಾನ ಬಿಡುಗಡೆಗೊಳ್ಳುತ್ತಿದ್ದ ಹಾಗೆ ಆದ್ಯತೆ ಮೇರೆಗೆ ಕೆಲಸಗಳನ್ನು ಕೈಗೆತ್ತಿಕೊಳ್ಳಲು ರೂಪುರೇಷೆ ಸಿದ್ದಪಡಿಸಿದ್ದು, ರೈತರು ತಾಳ್ಮೆಯಿಂದ ವರ್ತಿಸಬೇಕು ಎಂದು ಮನವಿ ಮಾಡಿದರು.
ಈಗಾಗಲೇ ನೀರು ಪೋಲಾಗುವುದನ್ನು ರೈತರು ನೀರಾವರಿ ಇಲಾಖೆಯ ಗಮನಕ್ಕೆ ತರಲು ಅನುಕೂಲವಾಗುವಂತೆ ಸಹಾಯವಾಣಿ ತೆರೆಯಲು ನಿರ್ದೇಶನ ನೀಡಿದ್ದು, ಅದು ಕೂಡ ಪ್ರಗತಿಯಲ್ಲಿದೆ ಎಂದು ಹೇಳಿದರು.
ಕಾಡಾ ಪ್ರಾಧಿಕಾರವನ್ನು ಮಾದರಿಯಾಗಿ ಮಾಡುವುದು ನನ್ನ ಕನಸಾಗಿದ್ದು, ನಿಮ್ಮ ಸಲಹೆ ಸಹಕಾರ ಅತಿ ಮುಖ್ಯ ಎಂದು ಹೇಳಿದರು.
ಈ ಸಂದರ್ಭದಲ್ಲಿ ನೀರು ಬಳಕೆದಾರರ ಸಹಕಾರ ಸಂಘದ ಪದಾಧಿಕಾರಿಗಳು, ಗ್ರಾಮದ ಪ್ರಮುಖರು ಉಪಸ್ಥಿತರಿದ್ದರು.