ವಾಲ್ಮೀಕಿ ಜಾತ್ರೆ ಜ್ಞಾನದ ಹಸಿವು, ಸ್ವಾಭಿಮಾನ ಹುಟ್ಟುಹಾಕುವ ವೇದಿಕೆ

ಹೂವಿನಹಡಗಲಿ ಸಭೆಯಲ್ಲಿ ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಶ್ರೀ ಪ್ರಸನ್ನಾನಂದ ಸ್ವಾಮೀಜಿ

ಹೂವಿನಹಡಗಲಿ, ಡಿ.9- ವಾಲ್ಮೀಕಿ ಜಾತ್ರೆ ಸಮುದಾಯದ ಜನರಲ್ಲಿ ಜ್ಞಾನದ ಹಸಿವನ್ನು ಮತ್ತು ಸ್ವಾಭಿಮಾನವನ್ನು ಹುಟ್ಟುಹಾಕುವ ವೇದಿಕೆಯಾಗಿದೆ ಎಂದು ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಶ್ರೀ ಪ್ರಸನ್ನಾನಂದ ಸ್ವಾಮೀಜಿ ಹೇಳಿದರು.

ಪಟ್ಟಣದ ವಾಲ್ಮೀಕಿ ಸಮುದಾಯ ಭವನದಲ್ಲಿ ಜರುಗಿದ ವಾಲ್ಮೀಕಿ ಜಾತ್ರೆ ಪೂರ್ವಭಾವಿ ಸಭೆಯ ಸಾನ್ನಿಧ್ಯ ವಹಿಸಿ ಶ್ರೀಗಳು ಮಾತನಾಡಿದರು.

ವಾಲ್ಮೀಕಿ ನಾಯಕ ಸಮಾಜ  ಈ ನಾಡು, ನುಡಿಗೆ  ತನ್ನದೇ ಆದ ಕೊಡುಗೆ ನೀಡಿದೆ. ಇಂತಹ ಭವ್ಯ ಸಾಂಸ್ಕೃತಿಕ ಹಿನ್ನೆಲೆ ಹೊಂದಿರುವ  ಸಮುದಾಯ, ಜಾತ್ರೆಯ ಮೂಲಕ ನಾವೆಲ್ಲರೂ ಜಾಗೃತರಾಬೇಕಿದೆ ಎಂದರು.

ಸರ್ಕಾರ ಮೀಸಲಾತಿ ವಿಚಾರದಲ್ಲಿ ಬೇಡಿಕೆ  ಈಡೇರಿಸುವ  ಭರವಸೆ ನೀಡಿ ಕಾಲಹರಣ ಮಾಡುತ್ತಿದೆ. ನಾಗಮೋಹನ್ ದಾಸ್  ಆಯೋಗದ ವರದಿಯನ್ನು ಸಚಿವ ಸಂಪುಟ ಉಪ ಸಮಿತಿಯು ಶೀಘ್ರವೇ  ಜಾರಿಗೆ ತರಬೇಕು. ವಾಲ್ಮೀಕಿ ನಾಯಕ ಸಮಾಜಕ್ಕೆ ಶಿಕ್ಷಣ ಮತ್ತು  ಉದ್ಯೋಗದಲ್ಲಿ ಶೇ. 7.5 ಮೀಸಲಾತಿ ನೀಡಬೇಕು ಎಂದರು.

ರಾಜ್ಯದಲ್ಲಿ ಯಾವುದೇ  ಸರ್ಕಾರವಿರಲಿ,  ಯಾರೇ ಮುಖ್ಯ ಮಂತ್ರಿಗಳಿರಲಿ ನಮಗೆ ನ್ಯಾಯಬದ್ಧವಾದ  ಮೀಸಲಾತಿ ಹೆಚ್ಚಿಸಬೇಕು. ರಾಜ್ಯದ 4 ನೇ ಅತಿ ದೊಡ್ಡ ಸಮಾಜದಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದೇವೆ ಎಂದರು. 

ಇದೇ ವೇಳೆ ವಾಲ್ಮೀಕಿ ಸೇವಾ ಸಮಿತಿಗೆ  (ವಿ.ಎಸ್.ಎಸ್.) ಪದಾಧಿಕಾರಿಗಳ ಆಯ್ಕೆ ನಡೆಯಿತು. ವಾಲ್ಮೀಕಿ ನಾಯಕ ಸಮಾಜದ ತಾಲ್ಲೂಕು ಅಧ್ಯಕ್ಷ ಹೊನ್ನಪ್ಪ, ಮುಖಂಡರಾದ ಹನುಮಂತಪ್ಪ, ಶ್ರೀನಿವಾಸ ಇನ್ನಿತರರಿದ್ದರು.

error: Content is protected !!