ಜಗಳೂರು, ಡಿ.8- ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ರೈತ ವಿರೋಧಿ ನೀತಿಗಳನ್ನು ಖಂಡಿಸಿ ರೈತ ಸಂಘಟನೆಗಳು ಇಂದು ನಡೆಸಿದ ಭಾರತ್ ಬಂದ್‌ಗೆ ಪ್ರಗತಿ ಪರ ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದವು.
ಪಟ್ಟಣದ ಪ್ರವಾಸಿ ಮಂದಿರದಿಂದ ಹೊರಟ ರೈತರು ಮತ್ತು ವಿವಿಧ ಸಂಘಟನೆಗಳ ಪ್ರತಿಭಟನಾಕಾರರು ಮಹಾತ್ಮ ಗಾಂಧಿ ವೃತ್ತದ ಬಳಿ ಮಾನವ ಸರಪಳಿ ನಿರ್ಮಿಸಿ, ಬಿಜೆಪಿ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದರು. ನಂತರ ಹೊಸ ಬಸ್ ನಿಲ್ದಾಣ, ಡಾ. ಬಿ.ಆರ್. ಅಂಬೇಡ್ಕರ್ ವೃತ್ತದ ಬಳಿ ರೈತಗೀತೆ, ಕ್ರಾಂತಿಗೀತೆ ಹಾಡುವ ಮೂಲಕ ಆಕ್ರೋಶ ವ್ಯಕ್ತ ಪಡಿಸಿದರು.
ಪ್ರತಿಭಟನೆಯಲ್ಲಿ ರೈತ ಸಂಘಟನೆಯ ಅಧ್ಯಕ್ಷ ಚಿರಂಜೀವಿ, ನಿಂಗಪ್ಪ, ಎಐಟಿಯುಸಿ ಕಾರ್ಯದರ್ಶಿ ಮಹಮ್ಮದ್ ಬಾಷಾ, ಭದ್ರಾ ಮೇಲ್ದಂಡೆ ಹೋರಾಟ ಸಮಿತಿಯ ವಕೀಲ ಆರ್. ಓಬಳೇಶ್, ಪ್ರಗತಿಪರ ಸಂಘಟನೆಗಳ ಮುಖಂಡರಾದ ಮಾದಿಹಳ್ಳಿ ಮಂಜುನಾಥ್, ಅನಂತರಾಜ್, ಹೇಮರೆಡ್ಡಿ ಸತೀಶ್, ರಾಜು, ದೊಣ್ಣೆಹಳ್ಳಿ ಚೌಡಮ್ಮ, ಗ್ರಾಕೋಸ್ ಸಂಘಟನೆಯ ಸುಧಾ, ಭಾರತಿ, ಗೀತಾ, ಶಿಲ್ಪ, ವಸಂತ, ಭೀಮ್ ಆರ್ಮಿ ಸಂಘಟನೆಯ ಹನುಮಂತಪ್ಪ, ಲೋಕೇಶ್ ಶರಣಪ್ಪ, ಕೆಂಚಪ್ಪ ಇನ್ನಿತರರಿದ್ದರು.
ಬಂದ್‌ಗೆ ಮಿಶ್ರ ಪ್ರತಿಕ್ರಿಯೆ: ಭಾರತ್ ಬಂದ್ ಹಿನ್ನೆಲೆಯಲ್ಲಿ ಸ್ವಯಂಪ್ರೇರಿತರಾಗಿ ಬಟ್ಟೆ ಅಂಗಡಿ, ಕಿರಾಣಿ ಅಂಗಡಿ ಬಂದ್ ಮಾಡಲಾಗಿತ್ತು. ಸರ್ಕಾರಿ ಕಛೇರಿಗಳು, ಬ್ಯಾಂಕ್, ಮೆಡಿಕಲ್ ಸ್ಟೋರ್, ಹಣ್ಣು, ತರಕಾರಿ, ಅಗತ್ಯ ವಸ್ತುಗಳ ವ್ಯಾಪಾರ, ಬಸ್ ಸಂಚಾರ ಎಂದಿನಂತೆ ಕಾರ್ಯ ನಿರ್ವಹಿಸಿದವು.