ಹರಿಹರ, ಡಿ.8- ಕೇಂದ್ರ ಸರ್ಕಾರದ ಕೃಷಿ ನೀತಿ ವಿರೋಧಿಸಿ ರೈತ ಸಂಘಟನೆಯವರು ಕರೆದಿದ್ದ ಭಾರತ್ ಬಂದ್ಗೆ ನಗರದಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ.
ರೈತ ಸಂಘಟನೆಯವರ ನೇತೃತ್ವದಲ್ಲಿ ನಡೆಯುತ್ತಿರುವ ಬಂದ್ಗೆ ಕಾಂಗ್ರೆಸ್ ಪಕ್ಷದ ಮುಖಂಡರು ಬೆಂಬಲ ನೀಡಿದ್ದು, ವ್ಯಾಪಾರ ವಹಿವಾಟು ನಡೆಸುತ್ತಿದ್ದ ಅಂಗಡಿ ಮುಂಗಟ್ಟನ್ನು ಬೆಳಗ್ಗೆಯಿಂದಲೇ ಬಂದ್ ಮಾಡುವಂತೆ ಮನವಿ ಮಾಡಿಕೊಂಡರು.
ಪ್ರತಿಭಟನಾಕಾರರು ವಹಿವಾಟು ಬಂದ್
ಮಾಡಿಸಿ, ಮುಂದೆ ಹೋಗುತ್ತಿದ್ದಂತೆ ಮತ್ತೆ ತಮ್ಮ ತಮ್ಮ ಅಂಗಡಿಗಳನ್ನು ತೆರೆದು ಮಾಮೂಲಿಯಂತೆ ವ್ಯಾಪಾರ, ವಹಿವಾಟು ನಡೆಸಿದರು.
ಸರ್ಕಾರಿ ಕಚೇರಿಗಳಾದ ನಗರಸಭೆ, ತಹಶೀಲ್ದಾರ್ ಕಚೇರಿ, ಕೆ.ಇ.ಬಿ. ಶಿಕ್ಷಣ ಇಲಾಖೆ, ಇಓ ಕಚೇರಿ, ಆರೋಗ್ಯ ಇಲಾಖೆ ಮತ್ತು ಸರ್ಕಾರಿ ಮತ್ತು ಖಾಸಗಿ ಬ್ಯಾಂಕುಗಳು, ಪೆಟ್ರೋಲ್ ಬಂಕ್, ಔಷಧಿ ಅಂಗಡಿ, ಆಸ್ಪತ್ರೆ, ಆಟೋಮೊಬೈಲ್, ಇವುಗಳು ಎಂದಿನಂತೆ ತೆರೆಿದಿದ್ದವು.
ಆಟೋ, ಟ್ಯಾಕ್ಸಿ, ಬಸ್ ಓಡಾಟ ಎಂದಿನಂತೆ ಇತ್ತು. ಹಲವು ವ್ಯಾಪಾರಿ ಕೇಂದ್ರಗಳು ಎಂದಿನಂತೆ ತೆರೆದುಕೊಂಡು ದಿನ ನಿತ್ಯದಂತೆ ವ್ಯಾಪಾರ ವಹಿವಾಟು ನಡೆಸಿದವು.
ಇಂದು ಮಂಗಳವಾರ ಸಂತೆಯ ದಿನವಾಗಿದ್ದರಿಂದ ಶಿವಮೊಗ್ಗ ರಸ್ತೆ ಮತ್ತು ದೊಡ್ಡಬೀದಿ ಸಂತೆ ಎಂದಿನಂತೆ ನಡೆಯಿತು. ಗ್ರಾಮೀಣ ಪ್ರದೇಶದ ಜನರು ಆಗಮಿಸದೇ ಇರುವುದರಿಂದ ಜನಸಂದಣಿ ಕಡಿಮೆ ಇತ್ತು.
ಈ ಸಂದರ್ಭದಲ್ಲಿ ರೈತ ಮುಖಂಡರಾದ ಕೆ.ವಿ. ರುದ್ರಮುನಿ, ಹಾಳೂರು ನಾಗರಾಜ್, ಭಾನುವಳ್ಳಿ ಪ್ರಕಾಶ್, ಚಂದ್ರಪ್ಪ ಅಮರಾವತಿ, ನಗರಸಭೆ ಸದಸ್ಯ ಶಂಕರ್ ಖಟಾವ್ಕರ್, ಎಪಿಎಂಸಿ ಸದಸ್ಯ ಮಂಜುನಾಥ್ ಪಟೇಲ್ ಕೊಮಾರನಹಳ್ಳಿ, ಡಿಸಿಸಿ ಬ್ಯಾಂಕ್ ಮಾಜಿ ಉಪಾಧ್ಯಕ್ಷ ಜಿಗಳಿ ಆನಂದಪ್ಪ, ಮಲೇಬೆನ್ನೂರಿನ ಎಂ.ಬಿ. ಅಬೀದ್ ಅಲಿ, ಯಲವಟ್ಟಿ ನಾಯಕ್, ರೇವಣಸಿದ್ದಪ್ಪ ಹನಗವಾಡಿ,
ಪ್ರಕಾಶ್ ಹನಗವಾಡಿ, ಹೆಚ್.ಕೆ. ತಿಪ್ಪೇಸ್ವಾಮಿ, ಡಿ.ಜಿ. ಷಣ್ಮುಖಪ್ಪ, ಮಹೇಶ್ವರಪ್ಪ ಕೆಂಚನಹಳ್ಳಿ, ಶೇಖರಪ್ಪ, ನಾರಪ್ಪ, ಅಮರಾವತಿ ನಾಗರಾಜ್, ಎಲ್.ಬಿ. ಹನುಮಂತಪ್ಪ, ನಸ್ರುಲ್ಲಾ, ಗೋಣೆಪ್ಪ, ಆನಂದ್, ಸಿ.ಎನ್. ಹುಲಗೇಶ್, ಭಾಗ್ಯದೇವಿ, ಜೈ. ಶಂಕರ್, ಹನುಮಂತಪ್ಪ, ಪೈ, ದಾದಾಪೀರ್, ಮಹಬೂಬ್ ಬಾಷಾ ಇನ್ನಿತರರಿದ್ದರು.