ದಾವಣಗೆರೆ, ಡಿ.7- ಮನೆ ಮನೆಗೆ ನಗರ ಪಾಲಿಕೆ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿ ನಡೆಯುತ್ತಿದ್ದರೂ, ವಿರೋಧ ಪಕ್ಷ ಕಾಂಗ್ರೆಸ್ ನಿಂದ ಅಪಪ್ರಚಾರ ಮಾಡುವ ಮೂಲಕ ಸುಳ್ಳು ಆರೋಪ ಮಾಡುತ್ತಿರುವುದಾಗಿ ಪಾಲಿಕೆ ನಾಮನಿರ್ದೇಶನ ಸದಸ್ಯರಾದ ಹೆಚ್.ಸಿ. ಜಯಮ್ಮ ತಿಳಿಸಿದರು.
ಈ ಕಾರ್ಯಕ್ರಮಕ್ಕೆ ಹೊಸ ಸಿಬ್ಬಂದಿ ನೇಮಿಸಿಲ್ಲ. ಪ್ರತಿ ಇಲಾಖೆಯಿಂದ ಇಬ್ಬರಂತೆ ಒಟ್ಟು 16 ಸಿಬ್ಬಂದಿಗಳನ್ನು ಮಾತ್ರ ಈ ಕಾರ್ಯಕ್ರಮಕ್ಕೆ ಬಳಸಿಕೊಳ್ಳಲಾಗುತ್ತಿದೆ. ಅಂತಹವರಿಗೆ ವಿಶೇಷ ಭತ್ಯೆ ನೀಡುತ್ತಿಲ್ಲ. ಇನ್ನುಳಿದ 300ಕ್ಕೂ ಅಧಿಕ ಸಿಬ್ಬಂದಿ ಪಾಲಿಕೆ ಕಚೇರಿಯಲ್ಲಿ ಕಾರ್ಯ ನಿರ್ವಹಿಸುವುದರಿಂದ ಜನರಿಗೆ ಯಾವುದೇ ತೊಂದರೆಯಾಗುತ್ತಿಲ್ಲ ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ಪಾಲಿಕೆ ಕಚೇರಿಯಿಂದ ದೂರದಲ್ಲಿರುವ ಆಜಾದ್ ನಗರ, ಭಾಷಾ ನಗರ, ಗಾಂಧಿ ನಗರ, ಶಿವನಗರ, ಎಸ್.ಎಂ.ಕೃಷ್ಣ ನಗರ, ಎಸ್ಪಿಎಸ್ ನಗರದಂತಹ ಪ್ರದೇಶಗಳ ಜನರಿಗೆ ಮನೆ ಬಾಗಿಲಿಗೆ ನಗರ ಪಾಲಿಕೆ ಕಾರ್ಯಕ್ರಮದಿಂದ ಪ್ರಯೋಜನವಾಗುತ್ತಿದೆ. ಈವರೆಗೆ 8 ವಾರ್ಡ್ಗಳಲ್ಲಿ ಕಾರ್ಯಕ್ರಮ ನಡೆದಿದ್ದು, 10,94,697 ರೂ. ಆಸ್ತಿ ತೆರಿಗೆ, ನೀರಿನ ತೆರಿಗೆ ಸಂಗ್ರಹವಾಗಿದೆ. 123 ಜನನ-ಮರಣ ಪ್ರಮಾಣ ಪತ್ರ, 7 ಕಟ್ಟಡ ಪರವಾನಿಗೆ, 86 ಉದ್ಯಮ ಪರವಾನಿಗೆ, 21 ಖಾತೆ ಬದಲಾವಣೆ, 48 ಖಾತೆ ಉತಾರ, 71 ಆಶ್ರಯ ಸೇರಿದಂತೆ ಅನೇಕ ಸೌಲಭ್ಯಗಳನ್ನು ಜನರ ಮನೆ ಬಾಗಿಲಿಗೆ ಒದಗಿಸಲಾಗಿದೆ ಎಂದು ಮಾಹಿತಿ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ಪಾಲಿಕೆ ನಾಮ ನಿರ್ದೇಶನ ಸದಸ್ಯರಾದ ಶಿವನಗೌಡ ಪಾಟೀಲ್, ರುದ್ರೇಗೌಡ ಸೇರಿದಂತೆ ಇತರರು ಇದ್ದರು.