ಶಾಂತಿಯುತ ಗ್ರಾಮ ಪಂಚಾಯಿತಿ ಚುನಾವಣೆಗೆ ಜಗಳೂರು ತಾಲ್ಲೂಕು ಸಿದ್ಧತೆ

ಜಗಳೂರು, ಡಿ.7 – ಗ್ರಾಮ ಪಂಚಾಯಿತಿ ಚುನಾವಣೆಯನ್ನು ತಾಲ್ಲೂಕಿನಲ್ಲಿ ವ್ಯವಸ್ಥಿತ ಹಾಗೂ ಶಾಂತಿಯುತವಾಗಿ ನಡೆಸಲು ಸಕಲ ಸಿದ್ದತೆಗಳನ್ನು ಮಾಡಿಕೊಳ್ಳಲಾಗಿದ್ದು, ಚುನಾವಣೆ ಯಶಸ್ವಿಯಾಗಲು ಪ್ರತಿಯೊಬ್ಬರ ಸಹಕಾರ ಅತಿ ಮುಖ್ಯ ಎಂದು ಗ್ರಾಮ ಪಂಚಾಯಿತಿ  ಚುನಾವಣೆಯ ತಾಲ್ಲೂಕು ನೋಡಲ್ ಅಧಿಕಾರಿ ಮತ್ತು ನಗರಾಭಿವೃದ್ದಿ ಕೋಶದ ಶ್ರೀಮತಿ ಪಿ.ಡಿ. ನಜ್ಮಾ ಹೇಳಿದರು.

ಪಟ್ಟಣದ ತಾಲ್ಲೂಕು ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ತಾಲ್ಲೂಕಿನಲ್ಲಿ 22 ಗ್ರಾಮ ಪಂಚಾಯಿತಿಗಳಿಗೆ ಚುನಾವಣೆ ನಡೆಯಲಿದೆ. 45 ಸೂಕ್ಷ್ಮ, 16 ಅತೀ ಸೂಕ್ಷ್ಮ , 158 ಸಾಮಾನ್ಯ ಮತಗಟ್ಟೆಗಳು ಸೇರಿದಂತೆ ಒಟ್ಟು 219 ಮತಗಟ್ಟೆಗಳನ್ನು ತೆರೆಯಲಾಗಿದೆ ಎಂದು ತಿಳಿಸಿದರು.

ಒಟ್ಟು 179 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ವ್ಯವಸ್ಥಿತವಾಗಿ ನಡೆಯಲು 8 ಸೆಕ್ಟ್‍ರ್ ಅಧಿಕಾರಿಗಳನ್ನು ನೇಮಿಸಲಾಗಿದ್ದು, ಪ್ರತಿಯೊಂದು ಮತಗಟ್ಟೆಗಳಿಗೆ ಚುನಾವಣಾಧಿ ಕಾರಿ ಮತ್ತು ಸಹಾಯಕ ಚುನಾವಣಾಧಿಕಾರಿಗಳನ್ನು ನೇಮಿಸಿದ್ದು ಈಗಾಗಲೇ ಅವರಿಗೆ ತರಬೇತಿಯನ್ನು ನೀಡಲಾಗಿದೆ 

ನಾಮಪತ್ರ ಸಲ್ಲಿಸಲು ಇದೇ ದಿನಾಂಕ 11 ರಂದು ಕೊನೆಯ ದಿನವಾಗಿದ್ದು, ದಿನಾಂಕ 12ರಂದು ನಾಮಪತ್ರ ಪರೀಶಿಲನೆ, 14 ರಂದು ಉಮೇದುವಾರಿಕೆಯನ್ನು ಹಿಂಪಡೆಯಲು ಕೊನೆಯ ದಿನವಾಗಿದ್ದು, ದಿನಾಂಕ 22 ರಂದು ಮತದಾನ, 30 ರಂದು ಮತ ಎಣಿಕೆ ಕಾರ್ಯ ನಡೆಯಲಿದೆ.

ಕೋವಿಡ್ ಸೋಂಕಿತರಿಗೆ ಕೊನೆಯ 1 ಗಂಟೆ ಮತದಾನಕ್ಕೆ ಅವಕಾಶ ಕಲ್ಪಿಸಲಾಗಿದೆ, ಮತಗಟ್ಟೆ ಕೇಂದ್ರಗಳಿಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸಲಾಗಿದೆ ಎಂದು ಅವರು ವಿವರಿಸಿದರು.

ಹಳ್ಳಿಗಳಲ್ಲಿ ಅಕ್ರಮ ಮದ್ಯ ಮಾರಾಟ ತಡೆಯಲು ಒಂದು  ತಿಂಗಳು ಪೋಲಿಸ್ ಮತ್ತು ಅಬಕಾರಿ ಅಧಿಕಾರಿಗಳ ತಂಡ ಗಸ್ತು ತಿರುಗಲಿದ್ದಾರೆ ಎಂದು ಅವರು ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ತಹಶೀಲ್ದಾರ್ ನಾಗವೇಣಿ, ಇ.ಓ. ಮಲ್ಲನಾಯ್ಕ, ತಾಲ್ಲೂಕು ಆರೋಗ್ಯಾಧಿಕಾರಿ ಜಿ.ಓ.ನಾಗರಾಜ್, ಮತ್ತಿತರರು ಹಾಜರಿದ್ದರು.

error: Content is protected !!