ದಾವಣಗೆರೆ, ಡಿ.5- 2020ನೇ ಸಾಲಿನ ಕೃಷಿ ಬಿಲ್ ಹಿಂಪಡೆಯುವಂತೆ ಭಾರತೀಯ ರಾಷ್ಟ್ರೀಯ ಯುವ ಕಾಂಗ್ರೆಸ್ ವಕ್ತಾರ ಹೆಚ್.ಜೆ. ಮೈನುದ್ದೀನ್ ಆಗ್ರಹಿಸಿದರು.
130 ಕೋಟಿಗಿಂತಲೂ ಹೆಚ್ಚು ಜನರಿಗೆ ಅನ್ನದಾತರಾಗಿರುವಂತಹ ರೈತರು ಈಗಾಗಲೇ ನೂರಾರು ಕಷ್ಟಗಳನ್ನು ಎದುರಿಸುತ್ತಿರುವ ಇಂತಹ ಸಂದರ್ಭದಲ್ಲಿ ಕೇಂದ್ರ ಸರ್ಕಾರ ವಿಧಿಸಿರುವ 2020 ನೇ ಸಾಲಿನ ಕೃಷಿ ಬಿಲ್ಲನ್ನು ಹಿಂಪಡೆಯಬೇಕೆಂದು ಪತ್ರಿಕಾಗೋಷ್ಠಿಯಲ್ಲಿ ಒತ್ತಾಯಿಸಿದರು.
ಬಿಜೆಪಿ ಅಧಿಕಾರಕ್ಕೆ ಬಂದರೆ 2022 ಕ್ಕೆ ರೈತರ ಆದಾಯವನ್ನು ದುಪ್ಪಟ್ಟು ಮಾಡುತ್ತೇವೆ ಎಂದು ನಮ್ಮ ದೇಶದ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಆಶ್ವಾಸನೆ ನೀಡಿದ್ದರು.
ಆದರೆ, 2019-20ರ ಆರ್ಥಿಕ ಸರ್ವೇ ಪ್ರಕಾರ 2016-17ರಲ್ಲಿ ಕೃಷಿ ಅಭಿವೃದ್ಧಿ ಶೇ. 6.3ರಷ್ಟು ಹೊಂದಿದ್ದು, 2019-20ರ ಪ್ರಕಾರ ಶೇ. 2.8 ರಷ್ಟು ಹೊಂದಿರುತ್ತದೆ. ವರ್ಷದಿಂದ ವರ್ಷಕ್ಕೆ ಅಭಿವೃದ್ಧಿ ಇಳಿಕೆಯಾಗುತ್ತಿದ್ದು, ಯಾವುದೇ ರೀತಿಯಲ್ಲಿ ಪ್ರಗತಿ ಹೊಂದುತ್ತಿಲ್ಲ. ಆದ್ದರಿಂದ ಕೃಷಿ ಬಿಲ್ನಲ್ಲಿ ರೈತರಿಗೆ ಅನುಕೂಲವಾಗುವಂತಹ ಯಾವುದೇ ಅಂಶವನ್ನು ಹೊಂದಿರದೆ, ಬಂಡವಾಳ ಶಾಹಿಗಳ ಪರವಾಗಿ ಈ ಕೃಷಿ ಬಿಲ್ ಇದ್ದು, ರೈತರು ಇನ್ನೂ ಪರಿತಪಿಸುವ ಪರಿಸ್ಥಿತಿ ಎದುರಾಗಿದೆ. ಇದನ್ನು ಪ್ರತಿಭಟಿಸಲು ಬರುವ ರೈತರಿಗೆ ಪ್ರತಿಭಟನೆಗೆ ಅವಕಾಶ ಕೊಡದೇ ಅವರುಗಳನ್ನು ಅಲ್ಲಿಯೇ ಬಂಧಿಸುವ ಮತ್ತು ಅವರ ಮೇಲೆ ದೌರ್ಜನ್ಯ ನಡೆಯುತ್ತಲಿದೆ ಎಂದು ಆರೋಪಿಸಿದರು.
ಈ ದೇಶದ ಜಿಡಿಪಿಯಲ್ಲಿ ಶೇ.17ರಷ್ಟು ಆದಾಯ ಕೃಷಿ ಮೂಲದಿಂದಲೇ ಬರುತ್ತಿದ್ದು, ಕೃಷಿ ಬಿಲ್ನಲ್ಲಿ ಎಂಎಸ್ ಪಿ ಕೂಡ ಬಂದಿಲ್ಲ. ಒಬ್ಬ ಪಾನ್ ಕಾರ್ಡ್ ಹೊಂದಿರುವಂತವನು ರೈತರ ಬೆಳೆಗಳನ್ನು ಖರೀದಿಸ ಬಹುದಾಗಿದೆ.
ಪಾನ್ ಕಾರ್ಡ್ ಹೊಂದಿರುವ ವ್ಯಕ್ತಿ ಮೋಸ ಮಾಡಿದರೆ ರೈತರು ತಮಗಾದ ಅನ್ಯಾಯವನ್ನು ಪೊಲೀಸ್ ಠಾಣೆಯಲ್ಲಾಗಲೀ, ನ್ಯಾಯಾಲಯದಲ್ಲಾ ಗಲೀ ಹೇಳಿಕೊಳ್ಳಲು ಬರುವುದಿಲ್ಲ. ಇಂತಹ ಅನೇಕ ಅಂಶಗಳು ಕಿಸಾನ್ ಬಿಲ್ಲಿನಲ್ಲಿ ಜಾರಿಗೆ ತಂದಿದ್ದು, ಕೂಡಲೇ ಕಿಸಾನ್ ಬಿಲ್ಲನ್ನು ಹಿಂಪಡೆಯಬೇಕೆಂದರು.
ಪತ್ರಿಕಾಗೋಷ್ಠಿಯಲ್ಲಿ ಮೊಹಮ್ಮದ್ ಸಾಧಿಕ್, ಸಾಗರ್, ಬಾಷಾ ಸೇರಿದಂತೆ ಇತರರು ಉಪಸ್ಥಿತರಿದ್ದರು.