ದಾವಣಗೆರೆ, ಡಿ.6- ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ವಿಶ್ವದ ಮಹಾನ್ ಚಿಂತಕರಲ್ಲಿ ಒಬ್ಬರಾಗಿದ್ದರು. ಅವರು ಭಾರತ ದೇಶಕ್ಕಾಗಿ ರಚಿಸಿದ ಸಂವಿಧಾನ ಜಗತ್ತಿನಲ್ಲಿಯೇ ಶ್ರೇಷ್ಠ ಸಂವಿಧಾನ ಎಂಬ ಹೆಗ್ಗಳಿಕೆ ಹೊಂದಿದೆ. ಕೇಂದ್ರ ಹಾಗೂ ರಾಜ್ಯದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಆಡಳಿತಕ್ಕೆ ಬಂದ ದಿನದಿಂದಲೂ ತೆರೆಮರೆಯಲ್ಲಿ ಅಂಬೇಡ್ಕರ್ ರಚಿಸಿದ ಸಂವಿಧಾನವನ್ನು ಬದಲಿಸಲು ಹುನ್ನಾರ ನಡೆಸುತ್ತಿದೆ. ಬಿಜೆಪಿ ಸಂವಿಧಾನ ಬದಲಿಸಿದರೆ, ದೇಶದಲ್ಲಿ ರಕ್ತಕ್ರಾಂತಿ ಆಗಲಿದೆ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ವಕ್ತಾರ ಡಿ. ಬಸವರಾಜ್ ಎಚ್ಚರಿಕೆ ಎಚ್ಚರಿಸಿದ್ದಾರೆ.
ನಗರದ ಅಂಬೇಡ್ಕರ್ ಸರ್ಕಲ್ನಲ್ಲಿ ಜಿಲ್ಲಾ ಕಾಂಗ್ರೆಸ್ ಕಾರ್ಮಿಕ ಘಟಕದಿಂದ ಇಂದು ಏರ್ಪಡಿಸಿದ್ದ ಡಾ. ಅಂಬೇಡ್ಕರ್ರವರ 64ನೇ ಮಹಾಪರಿನಿರ್ವಾಣ ದಿನಾಚರಣೆ ಕಾರ್ಯಕ್ರಮದಲ್ಲಿ ಡಾ. ಅಂಬೇಡ್ಕರ್ ಭಾವ ಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಅವರು ಮಾತನಾಡಿದರು.
ಬಾಲ್ಯದಲ್ಲಿ ವಿದ್ಯಾಭ್ಯಾಸ ಮಾಡಲು ಹಲವು ಅಡ್ಡಿ-ಆತಂಕಗಳನ್ನು ಎದುರಿಸಿದ ಅಂಬೇಡ್ಕರ್ ಅವರು ಶಿಕ್ಷಣಕ್ಕೆ ಮಹತ್ವ ನೀಡಿ, ಸದಾ ಅಧ್ಯಯನಶೀಲರಾಗಿದ್ದರು. ಇಂದು ಜಗತ್ತಿನಲ್ಲಿಯೇ ಅತೀ ಹೆಚ್ಚು ಜ್ಞಾನ ಸಂಪಾದಿಸಿದವರು ಯಾರಾದರು ಇದ್ದರೆ ಅದು ಡಾ. ಅಂಬೇಡ್ಕರ್ ಮಾತ್ರ. ಹಾಗಾಗಿ ವಿಶ್ವ ಸಂಸ್ಥೆ ಅಂಬೇಡ್ಕರ್ರವರ ಜನ್ಮ ದಿನವಾದ ಏಪ್ರಿಲ್ 14ನ್ನು ವಿಶ್ವ ಜ್ಞಾನ ದಿನವನ್ನಾಗಿ ಆಚರಿಸಲು ಘೋಷಿಸಿದೆ ಎಂದು ಅವರು ತಿಳಿಸಿದರು.
ಜಿಲ್ಲಾ ಕಾಂಗ್ರೆಸ್, ಕಾರ್ಮಿಕ ಘಟಕದ ಅಧ್ಯಕ್ಷ ಕೆ.ಎಂ. ಮಂಜುನಾಥ್, ಜಿಲ್ಲಾ ಕಾಂಗ್ರೆಸ್ ಕಿಸಾನ್ ಘಟಕದ ಪ್ರಧಾನ ಕಾರ್ಯದರ್ಶಿ ಎಸ್.ಕೆ. ಪ್ರವೀಣ್ ಕುಮಾರ್, ಮುಖಂಡರಾದ ಎ.ರಾಜಶೇಖರ್, ಡಿ.ಶಿವಕುಮಾರ್, ಬಾಷಾ ಆರ್.ಬಿ.ಝಡ್, ಶ್ರೀನಿವಾಸ್ ಬಿ., ಪ್ರಕಾಶ್, ಮಂಜುನಾಥ್, ಜೆ.ವಿ. ವೆಂಕಟೇಶ್, ಬಿ.ಹೆಚ್. ಉದಯ್ ಕುಮಾರ್ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.