ದಾವಣಗೆರೆ, ಡಿ.6- ಬಿ.ಎಸ್. ಯಡಿಯೂರಪ್ಪ ಅವರ ನೇತೃತ್ವದ ರಾಜ್ಯ ಸರ್ಕಾರ ಅಲ್ಪಸಂ ಖ್ಯಾತರ ಕಲ್ಯಾಣ ನಿಧಿಗೆ ಅನುದಾನ ಕಡಿತ ಗೊಳಿಸಿ, ಹಲವು ಯೋಜನೆಗಳನ್ನು ನಿಲ್ಲಿಸುವ ಮೂಲಕ ತಾರತಮ್ಯ ಮಾಡುತ್ತಿದೆ ಎಂದು ಮುಸ್ಲಿಂ ಚಿಂತಕರ ಚಾವಡಿಯ ರಾಜ್ಯ ಕಾರ್ಯ ದರ್ಶಿ ಅನೀಸ್ ಪಾಷಾ ಆರೋಪಿಸಿದ್ದಾರೆ.
ಇಂದಿಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 2019-20ನೇ ಸಾಲಿನಲ್ಲಿ ಹೆಚ್.ಡಿ. ಕುಮಾರ ಸ್ವಾಮಿ ನೇತೃತ್ವದ ಸರ್ಕಾರ ಬಜೆಟ್‌ನಲ್ಲಿ ಘೋಷಿಸಿದ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಅನುದಾನವನ್ನು 1897 ಕೋಟಿ ರು.ಗಳಿಂದ 1571 ಕೋಟಿ ರೂ.ಗಳಿಗೆ ಕಡಿಮೆ ಮಾಡಿದೆ. 2020-21ನೇ ಸಾಲಿನಲ್ಲಿ ಯಡಿಯೂರಪ್ಪ ನೇತೃತ್ವದ ಸರ್ಕಾರ ಮಂಡಿಸಿದ ಬಜೆಟ್‌ನಲ್ಲಿ 1177 ಕೋಟಿ ರೂ.ಗಳಷ್ಟಿದ್ದ ಅನುದಾನವನ್ನು ಕಡಿತಗೊಳಿಸಿ 1055 ಕೋಟಿ ರು.ಗಳಿಗೆ ನಿಗದಿಗೊಳಿಸಿದೆ. ಇತ್ತೀಚೆಗೆ ಮತ್ತೆ 1055 ಕೋಟಿ ರು. ಅನುದಾನದಲ್ಲಿ 50 ಕೋಟಿ ರೂ. ಕಡಿತಗೊಳಿಸಿದೆ ಎಂದು ವಿವರಿಸಿದರು.
ಸರ್ಕಾರ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಗ ಸಂಬಂಧಿಸಿದ ಯಾವುದೇ ಹೊಸ ಯೋಜನೆ ಜಾರಿಗೊಳಿಸದಿದ್ದರೂ ಈಗಾಗಲೇ ಜಾರಿಯಲ್ಲಿರುವ ಎಲ್ಲಾ ಯೋಜನೆಗಳನ್ನು ಮುಂದುವರೆಸಬೇಕು. ಬಜೆಟ್‌ನಲ್ಲಿ ನಿಗದಿಗೊಳಿಸಿದ ಅನುದಾನವನ್ನು ಪೂರ್ಣ ಬಿಡುಗಡೆ ಮಾಡಬೇಕೆಂದು ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಗುವುದು ಎಂದು ಹೇಳಿದರು.
ಖಜಾಂಚಿ ಜೆ.ಕಲೀಂ ಭಾಷಾ, ಸದಸ್ಯ ಇಮ್ತಿಯಾಜ್ ಹುಸೇನ್, ಕ್ರಿಶ್ಚಿಯನ್ ಜಿಲ್ಲಾ ವೆಲ್ಫೇರ್ ಅಸೋಸಿಯೇಷನ್‌ನ ಕಾರ್ಯದರ್ಶಿ ಕೆ.ಬಿ. ಜಾಕೋಬ್ ಪತ್ರಿಕಾಗೋಷ್ಠಿಯಲ್ಲಿದ್ದರು.