ಹರಪನಹಳ್ಳಿ ನಗರಸಭೆಯಾಗಿ ಮೇಲ್ದರ್ಜೆಗೆ: ಮರು ಪ್ರಸ್ತಾವನೆ

ಹರಪನಹಳ್ಳಿ, ಡಿ.4- ಪುರಸಭಾ ಅಧ್ಯಕ್ಷ ಮಂಜುನಾಥ್‍ ಇಜಂತಕರ್ ಅಧ್ಯಕ್ಷತೆಯಲ್ಲಿ ಶಾಸಕ ಕರುಣಾಕರ ರೆಡ್ಡಿ ಸಮ್ಮುಖದಲ್ಲಿ ನಡೆದ ಮೊದಲ ತುರ್ತು ಸಾಮಾನ್ಯ ಸಭೆಯಲ್ಲಿ ಹರಪನಹಳ್ಳಿ ಪುರಸಭೆಯನ್ನು ನಗರಸಭೆಯನ್ನಾಗಿ ಮೇಲ್ದರ್ಜೆಗೇರಿಸುವಂತೆ ಮರು ಪ್ರಸ್ತಾವನೆ ಸಲ್ಲಿಸಲು ಸರ್ವಾನುಮತ ದಿಂದ ನಿರ್ಣಯ ಕೈಗೊಳ್ಳಲಾಯಿತು.

ಮುಖ್ಯಾಧಿಕಾರಿ ಬಿ.ಆರ್. ನಾಗರಾಜ್‍ನಾಯ್ಕ್ ಮಾತನಾಡಿ, 2015 ರಲ್ಲಿ ಪಟ್ಟಣದ ಪುರಸಭೆಯನ್ನು ಮೇಲ್ದರ್ಜೆ ಗೇರಿಸಲು ಕಳುಹಿಸಲಾಗಿದ್ದ ಪ್ರಸ್ತಾವನೆ ಕೇವಲ ಹರಪನಹಳ್ಳಿ ಪಟ್ಟಣಕ್ಕೆ ಮಾತ್ರ ಸೀಮಿತವಾಗಿತ್ತು. ಈಗ ಪಟ್ಟಣ ಸೇರಿದಂತೆ 5 ಕಿಲೋ ಮೀಟರ್  ವ್ಯಾಪ್ತಿಯಲ್ಲಿ ಇರುವ ದೇವರತಿಮ್ಮಲಾಪುರ, ಶೃಂಗಾರತೋಟ, ಯಲ್ಲಾಪುರ, ಗ್ರಾಮಗಳನ್ನು ಸೇರಿಸಿ ಹೊಸದಾಗಿ ಪ್ರಸ್ತಾವನೆ ಸಲ್ಲಿಸಿದರೆ ಗ್ರೇಡ್ 2 ನಗರಸಭೆಯಾಗಿ ಮಾರ್ಪಾಡಾಗುತ್ತದೆ ಎಂದು ಸಭೆಯಲ್ಲಿ ತಿಳಿಸಿದಾಗ ಶಾಸಕ ಜಿ.ಕರುಣಾಕರರೆಡ್ಡಿ ಅವರು ಸರ್ವೆ ನಡೆಸಿಯೇ ಹೊಸದಾಗಿ ಪ್ರಸ್ತಾವನೆ ಸಲ್ಲಿಸಿ ಎಂದು ಸೂಚಿಸಿದರು.

ಸದಸ್ಯರುಗಳಾದ ಎಂ.ವಿ. ಅಂಜಿನಪ್ಪ, ಡಿ.ಅಬ್ದುಲ್ ರಹಿಮಾನ್ ಮುಂತಾದವರು  ಮಾತನಾಡಿ, ಈಗಾಗಲೇ 60 ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಇದ್ದು ಶಾಸಕರು ನಗರಸಭೆ ಯನ್ನಾಗಿಸುವಲ್ಲಿ ಶ್ರಮಿಸಬೇಕು ಎಂದರು.

ಸದಸ್ಯ ಹೆಚ್.ಎಂ. ಅಶೋಕ್ ಮಾತನಾಡಿ, ಪಟ್ಟಣದಲ್ಲಿ ಒಳಚರಂಡಿ ಕಾಮಗಾರಿ ಸುಮಾರು ವರ್ಷಗಳಿಂದ ನಡೆಯುತ್ತಿದ್ದರೂ ಪೂರ್ಣಗೊಂಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. 

ಸದಸ್ಯ ಜಾಕೀರ್‍ಹುಸೇನ್ ಸರ್ಖಾವಸ್ ಮಾತನಾಡಿ  ಪಟ್ಟಣಕ್ಕೆ ಗರ್ಭಗುಡಿಯಿಂದ ಸರಬರಾಜು ಆಗುತ್ತಿರುವ ನದಿ ನೀರು ತುಂಬಾ ಸೋರಿಕೆಯಾಗುತ್ತಲಿದ್ದು, ಸಮರ್ಪಕ ನೀರು ಪೂರೈಕೆಗೆ ಕ್ರಮ ವಹಿಸಬೇಕು ಎಂದು ಒತ್ತಾಯಿಸಿದರು.

ಎಂ.ವಿ. ಅಂಜಿನಪ್ಪ ಮಾತನಾಡಿ, ನೂತನ ಕಟ್ಟಡ ನಿರ್ಮಾಣ ಮಾಡಲು ಸೂಕ್ತ ಸ್ಥಳ ಸಿಗುವವರೆಗೂ ಪುರಸಭೆಯನ್ನು ಹಳೆ ತಾಲ್ಲೂಕು ಕಛೇರಿಗೆ ತಾತ್ಕಾಲಿಕವಾಗಿ ಸ್ಥಳಾಂತರ ಮಾಡಿಸಿದರೆ ಅನುಕೂಲವಾಗುತ್ತದೆ ಎಂದು ಅಭಿಪ್ರಾಯ ವ್ಯಕ್ತ ಪಡಿಸಿದಾಗ ಸದಸ್ಯ ಡಿ.ಅಬ್ದುಲ್ ರಹಿಮಾನ್ ಸಾಬ್‍ ಸಹ ಹಳೆಯ ತಾಲ್ಲೂಕು ಕಛೇರಿ ಕಟ್ಟಡವನ್ನು ಪುರಸಭೆಗೆ ಹಸ್ತಾಂತರ ಮಾಡಿಸಬೇಕು ಎಂದು ಹೇಳಿದರು. ಸದಸ್ಯರ ಮಾತಿಗೆ ಸ್ಪಂದಿಸಿದ ಶಾಸಕರು ಸಂಬಂಧಿಸಿದ  ಅಧಿಕಾರಿಗಳ ಜೊತೆ ಮಾತನಾಡುವುದಾಗಿ ತಿಳಿಸಿದರು.

ನಾಮ ನಿರ್ದೇಶಿತ ಸದಸ್ಯ ಕೆ.ರಾಘವೇಂದ್ರ ಶ್ರೇಷ್ಠಿ, ಎಂ.ವಿ. ಅಂಜಿನಪ್ಪ, ಅಬ್ದುಲ್‍ರಹಿಮಾನ್, ಜಾಕೀರ್ ಹುಸೇನ್ ಸರ್ಖಾವಸ್‍ ಪುರಸಭೆಯಲ್ಲಿ ಎನ್‍ಓಸಿ, ಡೋರ್ ನಂಬರ್‌ ನೀಡುವುದು ಸೇರಿದಂತೆ ಇತರೆ ಕೆಲಸ ಕಾರ್ಯಗಳಿಗೆ ಜನರನ್ನು ತಿಂಗಳುಗಟ್ಟಲೆ ಅಲೆದಾಡಿಸುತ್ತಲಿದ್ದು, ಕಂದಾಯ ವಿಭಾಗದಲ್ಲಿ ಸಮಸ್ಯೆ ಇದೆ ಎಂದು ಅಸಮಾಧಾನ ವ್ಯಕ್ತ ಪಡಿಸಿ ನಿಗದಿತ ಸಮಯ ದೊಳಗೆ ನೀಡುವಂತೆ ಒತ್ತಾಯಿಸಿದರು.

ಸಭೆ ನಂತರ ಶಾಸಕರು ಮುಕ್ತಿ ವಾಹನಕ್ಕೆ ಚಾಲನೆ ನೀಡಿದರು. ಉಪಾಧ್ಯಕ್ಷೆ ನಿಟ್ಟೂರು ಭೀಮವ್ವ, ಸದಸ್ಯರುಗಳಾದ ಟಿ. ವೆಂಕಟೇಶ, ಡಿ. ರೊಕ್ಕಪ್ಪ. ಗೊಂಗಡಿ ನಾಗರಾಜ, ಗಣೇಶ, ಎಚ್. ಕೊಟ್ರೇಶ, ಹಿರಿಯ ಆರೋಗ್ಯ ನಿರೀಕ್ಷಕ ಪಿ.ಮಂಜುನಾಥ್, ಕಂದಾಯ ಅಧಿಕಾರಿ ಸವಿತಾ ಇನ್ನಿತರರಿದ್ದರು. 

error: Content is protected !!